ಚೆನ್ನೈ: ರಾಜಕೀಯ ಪಕ್ಷ ಸ್ಥಾಪನೆಯತ್ತ ಮೊದಲ ಪ್ರಮುಖ ಹೆಜ್ಜೆಯಾಗಿ, ಕರ್ನಾಟಕ ಕೇಡರ್ನ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ಸ್ಥಾಪಿಸಿರುವ ‘ವಿ ದಿ ಲೀಡರ್ಸ್’ (ಡಬ್ಲ್ಯುಟಿಎಲ್) ಸಂಸ್ಥೆಯು ಅಕ್ಟೋಬರ್ 15ರಂದು ಕೊಯಮತ್ತೂರಿನಲ್ಲಿ ನಾಯಕತ್ವ ತರಬೇತಿ ಕೇಂದ್ರವನ್ನು ಆರಂಭಿಸಲಿದೆ.
ಯುವಜನರು ಸೇರಿದಂತೆ ಆಸಕ್ತರಿಗೆ ನಾಯಕತ್ವದ ತರಬೇತಿ ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒಂದು ಲಕ್ಷ ಮಂದಿಗೆ ನಾಯಕತ್ವ ತರಬೇತಿ ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ.
ರಾಜಕೀಯ ಮತ್ತು ನಾಯಕತ್ವದ ಕುರಿತು ಮುಂದಿನ ಮೂರು ವರ್ಷಗಳಲ್ಲಿ ಸುಮಾರು 1 ಲಕ್ಷ ಜನರಿಗೆ ತರಬೇತಿ ನೀಡುವುದು ಈ ಕೇಂದ್ರದ ಉದ್ದೇಶವಾಗಿದೆ.
'ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸೆಂಟರ್ ಫಾರ್ ಎಥಿಕ್ಸ್ ಆಯಂಡ್ ಪಾಲಿಟಿಕ್ಸ್' ಹೆಸರಿನ ಕೇಂದ್ರದಲ್ಲಿ ತರಬೇತಿ ಪಡೆಯಲಿರುವ ಮೊದಲ ತಂಡವು ತಮಿಳುನಾಡಿನಾದ್ಯಂತ ಆಯ್ಕೆಯಾದ 100 ಮಹಿಳೆಯರನ್ನು ಒಳಗೊಂಡಿರಲಿದೆ. 'ಮಹಿಳಾ ಸಬಲೀಕರಣ ಮತ್ತು ಸುರಕ್ಷತಾ ಮಾಸಾಚರಣೆ'ಯ ಭಾಗವಾಗಿ, ಇವರು ಸಾರ್ವಜನಿಕ ಜೀವನದ ವಿವಿಧ ಆಯಾಮಗಳ ಕುರಿತು ಎರಡು ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಮುಂದಿನ ಹಂತದ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವವರನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸಲಾಗುತ್ತದೆಯಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಪ್ರಾರಂಭಿಸಿ, ಮುಂಬರುವ ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗಿ ಕಣಕ್ಕಿಳಿಸಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಸಮಯವನ್ನು ಕ್ಷೇತ್ರ ಕಾರ್ಯದಲ್ಲಿ ಕಳೆಯಲಿದ್ದು, ನಾಗರಿಕರ ಕುಂದುಕೊರತೆಗಳನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಪರಿಹರಿಸಲು ಸಾರ್ವಜನಿಕರೊಂದಿಗೆ ಸಕ್ರಿಯವಾಗಿ ಸಂವಹನ ನಡೆಸಲಿದ್ದಾರೆ.
ಬಿಜೆಪಿಗೆ ರಾಜೀನಾಮೆ ನೀಡಿದ್ದ ಅಣ್ಣಾಮಲೈ ಅವರು ನಾಲ್ಕು ತಿಂಗಳ ಹಿಂದೆ ಡಬ್ಲ್ಯುಟಿಎಲ್ ಸ್ಥಾಪಿಸಿದ್ದರು. ಈ ಸಂಸ್ಥೆಯು ಆರಂಭದಲ್ಲಿ ರಾಜಕೀಯ ಆಂದೋಲನವಾಗಿ ಕಾರ್ಯನಿರ್ವಹಿಸಲಿದ್ದು, ಆ ಬಳಿಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲಿದೆ ಎಂದು ಅವರು ಆ ಸಂದರ್ಭದಲ್ಲಿ ಘೋಷಿಸಿದ್ದರು. ಚುನಾವಣೆಗಳಲ್ಲಿ ಸ್ಪರ್ಧಿಸುವ ಮುನ್ನವೇ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ನೀಡುವುದು ತಮ್ಮ ಗುರಿ ಎಂದು ಹೇಳಿದ್ದರು.



