ಅಮೆರಿಕ ಮತ್ತು ಇಸ್ರೇಲ್ ಮತ್ತೆ ದಾಳಿ ನಡೆಸಿದರೆ ಕೊಲ್ಲಿ ಪ್ರದೇಶದ ಏಳು ದೇಶಗಳ ತೈಲ ಘಟಕಗಳು, ಸಮುದ್ರದಾಳದ ಕೇಬಲ್‌ಗಳು, ದತ್ತಾಂಶ ಕೇಂದ್ರಗಳು ಹಾಗೂ ಕೃತಕ ಬುದ್ಧಿಮತ್ತೆ (ಎಐ) ಸೌಲಭ್ಯಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ ಎಂದು 'ದಿ ಗಾರ್ಡಿಯನ್' ವರದಿ ಮಾಡಿದೆ.
ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಮೊಹ್ಸೆನ್ ರೆಜಾಯಿ ಈ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತೆ ದಾಳಿ ನಡೆಸಿದರೆ, ಇರಾನ್‌ನ ಪ್ರತಿಕ್ರಿಯೆ ಈ ಹಿಂದಿನಂತೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಟ್ರಂಪ್ ಮತ್ತು ನೆತನ್ಯಾಹು ದಾಳಿಯ ತಾತ್ವಿಕ ಒಪ್ಪಂದಕ್ಕೆ ಬಂದಿದ್ದಾರೆ. ಆದರೆ, ಅಂತಹ ದಾಳಿಯಿಂದ ನಿರೀಕ್ಷಿತ ಫಲಿತಾಂಶ ಪಡೆಯುವ ಭರವಸೆ ಅವರಿಗಿಲ್ಲ ಎಂದು ಇರಾನ್‌ನ ಸಂಧಾನ ತಂಡದ ಸಲಹೆಗಾರ ಮೆಹದಿ ಮೊಹಮ್ಮದಿ ತಿಳಿಸಿದ್ದಾರೆ.
ಮತ್ತೆ ಯುದ್ಧ ಆರಂಭವಾದರೆ ಅದು ಇರಾನ್‌ನ ಅಸ್ತಿತ್ವಕ್ಕೇ ಬೆದರಿಕೆಯಾಗಲಿದೆ. ಎರಡು ವರ್ಷಗಳಲ್ಲಿ ಮೂರನೇ ಯುದ್ಧ ಎದುರಾದರೆ ಪ್ರತಿದಾಳಿಗೆ ಯಾವುದೇ ಮಿತಿಯಿರುವುದಿಲ್ಲ. ಯುದ್ಧವನ್ನು ಶತ್ರು ನಿರೀಕ್ಷಿಸಿದ ಅವಧಿ, ಪ್ರದೇಶಕ್ಕೆ ಸೀಮಿತಗೊಳಿಸುವುದಿಲ್ಲ. ನಿರೀಕ್ಷೆಗೂ ಮೀರಿ ದೀರ್ಘಕಾಲ ಮತ್ತು ವ್ಯಾಪಕ ಪ್ರದೇಶದಲ್ಲಿ ಸಂಘರ್ಷ ಮುಂದುವರಿಯಲಿದೆ' ಎಂದು ಹೇಳಿದ್ದಾರೆ.
ಯುದ್ಧ ಮತ್ತೆ ಆರಂಭವಾದರೆ ತೈಲ ಘಟಕಗಳ ಜತೆಗೆ ಸಮುದ್ರದಾಳದ ಸಂವಹನ ಕೇಬಲ್‌ಗಳು, ದತ್ತಾಂಶ ಕೇಂದ್ರಗಳು ಮತ್ತು ಎಐ ಸೌಲಭ್ಯಗಳನ್ನೂ ಗುರಿಯಾಗಿಸಬಹುದು ಎಂದು ರೆಜಾಯಿ ಹೇಳಿಕೆಯನ್ನು ಉಲ್ಲೇಖಿಸಿ ಇರಾನ್‌ನ ಮಾಧ್ಯಮಗಳು ವರದಿ ಮಾಡಿವೆ.
'ಇರಾನ್‌ನ ಆರ್ಥಿಕ ಜೀವನಾಡಿಗಳ ಮೇಲೆ ದಾಳಿ ನಡೆಯುವಾಗ, ಆ ದಾಳಿಗೆ ನೆರವಾಗುವ ಆರ್ಥಿಕ ವ್ಯವಸ್ಥೆಗಳು ಸುರಕ್ಷಿತವಾಗಿರಲು ಸಾಧ್ಯವಿಲ್ಲ' ಎಂಬುದು ಇರಾನ್‌ನ ನಿಲುವಾಗಿದೆ ಎಂದು ವರದಿಗಳು ತಿಳಿಸಿವೆ.
ನವೆಂಬರ್‌ನಲ್ಲಿ ಅಮೆರಿಕದ ಸೇನಾ ಸಿದ್ಧತೆ ಪೂರ್ಣ?
ಕಳೆದ ನಾಲ್ಕು ತಿಂಗಳಲ್ಲಿ ಇರಾನ್ ಮೇಲೆ ಮತ್ತೆ ದಾಳಿ ನಡೆಸುವ ನಿರ್ಧಾರದಿಂದ ಟ್ರಂಪ್ ಏಳು ಬಾರಿ ಹಿಂದೆ ಸರಿದಿದ್ದಾರೆ ಎಂದು ವರದಿ ಹೇಳಿದೆ. ಆದರೆ, ರಾಜತಾಂತ್ರಿಕ ಮಾತುಕತೆಗಳಲ್ಲಿ ಬಿಕ್ಕಟ್ಟು ಮುಂದುವರಿದಿರುವುದರಿಂದ, ಕ್ಷಿಪಣಿ ನೆಲೆಗಳು, ತೈಲ ಘಟಕಗಳು ಮತ್ತು ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಹೊಸ ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆ ಕಡಿಮೆ ಎಂದು ಅಮೆರಿಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನವೆಂಬರ್ 3ರಂದು ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಗಳ ಬಳಿಕ ಹೊಸ ಜಂಟಿ ದಾಳಿ ನಡೆಸುವ ಉದ್ದೇಶದಿಂದ ಅಮೆರಿಕದ ಸೇನಾ ಸಲಹೆಗಾರರು ಗುರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ.
ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರು ಸೋಮವಾರ ಇಸ್ರೇಲ್‌ನಲ್ಲಿ ನೆತನ್ಯಾಹು ಅವರನ್ನು ಭೇಟಿಯಾಗಿ ಜಂಟಿ ದಾಳಿಯ ಸಮಯ ಮತ್ತು ಉದ್ದೇಶದ ಕುರಿತು ಚರ್ಚಿಸಿದ್ದಾರೆ. ದಾಳಿಯ ರಾಜಕೀಯ ಪರಿಣಾಮಗಳ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ವರದಿ ತಿಳಿಸಿದೆ.
ನವೆಂಬರ್ ವೇಳೆಗೆ ಮಧ್ಯಪ್ರಾಚ್ಯದಲ್ಲಿ ಮೂರು ವಿಮಾನವಾಹಕ ನೌಕೆಗಳು, ಸಾವಿರಾರು ನೌಕಾಪಡೆ ಸೈನಿಕರು, ಯುದ್ಧವಿಮಾನಗಳು ಮತ್ತು ವಿಶೇಷ ಕಾರ್ಯಾಚರಣೆ ಪಡೆಗಳನ್ನು ನಿಯೋಜಿಸುವ ಅಮೆರಿಕದ ಸೇನಾ ಸಿದ್ಧತೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇಸ್ರೇಲ್ ಮತ್ತು ಅಮೆರಿಕ ಜಂಟಿ ಸೇನಾ ತರಬೇತಿ ಕಾರ್ಯಾಚರಣೆಗಳನ್ನೂ ಮುಂದುವರಿಸಿವೆ. ಇರಾಕ್‌ನ ವಾಯುಪ್ರದೇಶದ ಮೇಲಿನ ತರಬೇತಿ ಹಾರಾಟಗಳು ಮತ್ತು ಇರಾನ್ ಗಡಿಯ ಸಮೀಪ ಇಸ್ರೇಲ್ ಯುದ್ಧವಿಮಾನಗಳ ಹಾರಾಟದ ಬಗ್ಗೆಯೂ ವರದಿಯಾಗಿದೆ.



