HEALTH TIPS

ದಮಾಮ್‌ನ ಕಿಂಗ್‌ ಫಹದ್‌ ವಿಮಾನ ನಿಲ್ದಾಣದ ಮೇಲೆ ಹೂಥಿ ದಾಳಿ: ಭಾರತೀಯ ಬಲಿ

ದುಬೈ/ಟೆಹರಾನ್‌: ಸೌದಿ ಅರೇಬಿಯಾದ ದಮಾಮ್‌ನ ಕಿಂಗ್‌ ಫಹದ್‌ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಇರಾನ್‌ ಬೆಂಬಲಿತ ಹೂಥಿ ಬಂಡು ಕೋರರು ಬುಧವಾರ ತಡರಾತ್ರಿ ನಡೆಸಿದ ದಾಳಿಯಲ್ಲಿ ಭಾರತೀಯ ಪ್ರಜೆಯೂ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಇನ್ನೂ ಇಬ್ಬರು ಭಾರತೀಯರು ಸೇರಿ ಎಂಟು ಮಂದಿ ಗಾಯಗೊಂಡಿದ್ದಾರೆ. 


ಮೃತ ಭಾರತೀಯ ಪ್ರಜೆಯನ್ನು ಉತ್ತರ ಪ್ರದೇಶದ ಗೋರಖ್‌ಪುರದ ಕಮಲೇಶ್‌ ಪಾಂಡೆ (37) ಎಂದು ಗುರುತಿಸಲಾಗಿದೆ.

ದಾಳಿಯ ಕುರಿತು ಮಾಹಿತಿ ಹಂಚಿಕೊಂಡಿರುವ ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ (ಜಿಎಸಿಎ), 'ದಮಾಮ್‌ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಮೃತಪಟ್ಟವರಲ್ಲಿ ಒಬ್ಬ ಭಾರತೀಯ ಪ್ರಜೆ ಮತ್ತು ಇನ್ನೊಬ್ಬ ಸೌದಿ ಪ್ರಜೆ' ಎಂದು ತಿಳಿಸಿದೆ.

ಬುಧವಾರ ರಾತ್ರಿ ನಡೆದ ದಾಳಿಗೆ ಕ್ಷಿಪಣಿಯನ್ನು ಬಳಸಲಾಗಿತ್ತೇ ಅಥವಾ ಡ್ರೋನ್‌ ಮೂಲಕ ವಿಮಾನ ನಿಲ್ದಾಣವನ್ನು ಗುರಿಯಾಗಿಸಲಾಗಿತ್ತೇ ಎಂಬುದನ್ನು ಖಚಿತಪಡಿಸಿಲ್ಲ. ದಾಳಿ ನಡೆಸಿರುವವರು ಯಾರು ಎಂಬುದರ ಕುರಿತೂ ಸೌದಿ ಸರ್ಕಾರವು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಗುರುವಾರದಿಂದ ವಿಮಾನ ನಿಲ್ದಾಣವು ಕಾರ್ಯಾಚರಣೆ ಪುನರಾರಂಭಿಸಿದೆ. ವಿಮಾನಗಳ ಸಂಚಾರವು ಸಹಜ ಸ್ಥಿತಿಗೆ ಮರಳಿದೆ ಎಂದು ಜಿಎಸಿಎ ಹೇಳಿದೆ.

ಯೆಮನ್‌ನ ಬೃಹತ್‌ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿರುವ ಹೂಥಿ ಬಂಡುಕೋರರು, ಅಲ್ಲಿ ಅಂತರರಾಷ್ಟ್ರೀಯ ಮಾನ್ಯತೆ ಹೊಂದಿರುವ ಸರ್ಕಾರದ ಜೊತೆ ದೀರ್ಘ ಕಾಲದಿಂದ ಸಂಘರ್ಷ ನಡೆಸುತ್ತಿದ್ದಾರೆ.

ಸರ್ಕಾರಕ್ಕೆ ಬೆಂಬಲ ನೀಡಿರುವ ಸೌದಿ ಅರೇಬಿಯಾ ನೇತೃತ್ವದ ಮೈತ್ರಿಕೂಟದ ರಾಷ್ಟ್ರಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುತ್ತಿದ್ದಾರೆ.

ಸೌದಿ ಅರೇಬಿಯಾದ ಇಂಧನ ಮೂಲಸೌಕರ್ಯಗಳು ಹಾಗೂ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿ ಹೂಥಿ ಬಂಡುಕೋರರು ಕ್ಷಿಪಣಿ ಹಾಗೂ ಡ್ರೋನ್‌ ದಾಳಿಗಳನ್ನು ತೀವ್ರಗೊಳಿದ್ದಾರೆ. ಇದೇ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಅಕ್ಟೋಬರ್‌ 11ರಂದೂ ದಾಳಿ ನಡೆಸಲಾಗಿತ್ತು.

ಹೂಥಿ ಬಂಡುಕೋರರು ಕೆಲವು ವಾರಗಳಲ್ಲಿ ಸೌದಿ ಅರೇಬಿಯಾದ ಮೇಲೆ ನಡೆಸಿದ ಸರಣಿ ದಾಳಿಗಳಲ್ಲಿ 22 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಅರಾಮ್ಕೊ ಮೇಲೆ ಮತ್ತೆ ದಾಳಿ:

ಸೌದಿ ಅರಾಮ್ಕೊ ತೈಲ ಕಂಪನಿಯ ಶೈಬಾ ತೈಲ ಘಟಕದ ಮೇಲೆ ಹೂಥಿಗಳು ಬುಧವಾರ ನಡೆಸಿದ ಡ್ರೋನ್‌ ದಾಳಿಯಲ್ಲಿ ನೇಪಾಳ ಹಾಗೂ ಫಿಲಿಪ್ಪೀನ್ಸ್‌ನ ಇಬ್ಬರು ಮೃತಪಟ್ಟಿದ್ದು, ಭಾರತೀಯ ಪ್ರಜೆಯೊಬ್ಬರು ಗಾಯಗೊಂಡಿದ್ದಾರೆ.

ದಮಾಮ್‌ನಲ್ಲಿರುವ ಕಿಂಗ್‌ ಫಹದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿರುವುದಾಗಿ ಹೊಣೆ ಹೊತ್ತುಕೊಂಡಿರುವ ಹೂಥಿ ಬಂಡುಕೋರರ ವಕ್ತಾರ ಯಾಹ್ಯಾ ಸಾರಿ, 'ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ರಕ್ಷಣಾ ಸಚಿವಾಲಯದ ಕಚೇರಿ, ಯಾನ್ಬುದಲ್ಲಿರುವ ಸೌದಿ ಅರಾಮ್ಕೊ ಕಂಪನಿ ಮತ್ತು ದಕ್ಷಿಣದ ನಗರ ಅಭಾದಲ್ಲಿರುವ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆಸಿದ್ದೇವೆ' ಎಂದು ತಿಳಿಸಿದ್ದಾರೆ.

ವಿಹಾರ ನೌಕೆ ಮೇಲೆ ದಾಳಿ:

'ಕೆಂಪು ಸಮುದ್ರದ ಬಾಬ್‌ ಅಲ್‌-ಮಂದೇಬ್‌ ಜಲಸಂಧಿಯಿಂದ 100 ಕಿ.ಮೀ. ಉತ್ತರಕ್ಕೆ ಯೆಮೆನ್‌ನ ಜುಕರ್‌ ದ್ವೀಪದ ಬಳಿ 14 ಜನ ಭಾರತೀಯರಿದ್ದ ವಿಹಾರ ನೌಕೆಯನ್ನು ಗುರಿಯಾಗಿಸಿಕೊಂಡು ಸೌದಿ ಅರೇಬಿಯಾ ದಾಳಿ ಮಾಡಿದೆ. ಅವರನ್ನು ಹೂಥಿಗಳು ರಕ್ಷಿಸುತ್ತಿದ್ದಾರೆ' ಎಂದು ಯಾಹ್ಯಾ ಸಾರಿ ಹೇಳಿದ್ದಾರೆ.

ನೆರವಿಗೆ ಮುಂದಾದ ರಾಯಭಾರ ಕಚೇರಿ:

'ದಾಳಿಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಸಂತ್ರಸ್ತ ಕುಟುಂಬಗಳನ್ನು ಸಂಪರ್ಕಿಸುತ್ತಿದ್ದೇವೆ. ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲ ನೆರವು ನೀಡಲಾಗುವುದು' ಎಂದು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ತುರ್ಕಿ ಅಲ್‌-ಮಲ್ಕಿ ಸೌದಿ ನೇತೃತ್ವದ ಒಕ್ಕೂಟದ ವಕ್ತಾರರಿಯಾದ್‌ ಮತ್ತು ಮದೀನಾ ಪ್ರದೇಶಗಳಲ್ಲಿ ಹೂಥಿಗಳು ಹಾರಿಸಿದ ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆಬದ್ರ್‌ ಅಬ್ದೆಲಾಟ್ಟಿ ಈಜಿಪ್ಟ್‌ ವಿದೇಶಾಂಗ ಸಚಿವಸೌದಿ ಅರೇಬಿಯಾ ಮತ್ತು ಹೂಥಿ ಬಂಡುಕೋರರ ನಡುವೆ ರಾಜಕೀಯ ಪರಿಹಾರಕಂಡುಕೊಳ್ಳಲು ಇರುವ ಎಲ್ಲ ಮಾರ್ಗಗಳ ಪರಿಶೀಲಿಸಬೇಕು. ಸೌದಿ ಜತೆ ನಾವಿದ್ದೇವೆ

ದಾಳಿಗೆ ಭಾರತ ಖಂಡನೆ

ಹೂಥಿ ಬಂಡುಕೋರರು ಸೌದಿ ಅರೇಬಿಯಾ ಮೇಲೆ ನಡೆಸಿದ ದಾಳಿಗಳನ್ನು ಭಾರತವು ತೀವ್ರವಾಗಿ ಖಂಡಿಸಿದೆ. 'ನಾಗರಿಕರು ಮತ್ತು ಪ್ರಮುಖ ಮೂಲಸೌಕರ್ಯ ಗುರಿಯಾಗಿಸಿ ನಡೆಸುವ ದಾಳಿಗಳು ಸ್ವೀಕಾರಾರ್ಹವಲ್ಲ. ಅವುಗಳನ್ನು ತಕ್ಷಣವೇ ನಿಲ್ಲಿಸಬೇಕು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒತ್ತಾಯಿಸಿದೆ. 'ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸೌದಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಅಗತ್ಯವಿರುವ ಎಲ್ಲ ರೀತಿಯ ಸಹಾಯವನ್ನು ಒದಗಿಸಲಿದೆ' ಎಂದಿದೆ. 'ಸೌದಿ ಅರೇಬಿಯಾದ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಅಲ್ಲಿನ ಜನ ಮತ್ತು ಸರ್ಕಾರದೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ. ಈ ಪ್ರದೇಶದಲ್ಲಿ ಆದಷ್ಟು ಬೇಗ ಶಾಂತಿ ನೆಲಸಿ ಸಹಜ ಸ್ಥಿತಿ ಮರಳಲಿ ಎಂದು ಆಶಿಸುತ್ತೇವೆ' ಎಂದು ತಿಳಿಸಿದೆ.

ಏಳು ತೈಲ ಟ್ಯಾಂಕರ್‌ಗಳಿಗೆ ಹಾನಿ

ಟೆಹರಾನ್‌: ಹೊರ್ಮುಜ್‌ ಜಲಸಂಧಿಯಲ್ಲಿ ಏಳು ತೈಲ ಟ್ಯಾಂಕರ್‌ಗಳಿಗೆ ಬೆಂಕಿ ಹೊತ್ತಿಕೊಂಡು ಹಾನಿಯಾಗಿದೆ ಎಂದು ಇರಾನ್ ತಿಳಿಸಿದೆ. ಇರಾನ್‌ನ ದಾಳಿ ಅಥವಾ ಸಮುದ್ರದಾಳದಲ್ಲಿ ಅಳವಡಿಸಿದ್ದ ಸ್ಫೋಟಕಗಳಿಗೆ ಸಿಲುಕಿ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಯುದ್ಧದ ಭೀತಿ ಹೆಚ್ಚಾಗುತ್ತಿರುವುದನ್ನು ಈ ಘಟನೆ ತೋರಿಸುತ್ತದೆ.

ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಎಚ್ಚರಿಕೆ

'ಅಮೆರಿಕದ ಸೇನೆ ಹೊರ್ಮುಜ್‌ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ಬೆಂಗಾವಲು ನೀಡುವುದನ್ನು ಮುಂದುವರಿಸಿದರೆ ಪಶ್ಚಿಮ ಏಷ್ಯಾದಾದ್ಯಂತ ಇರುವ ಅದರ ಸೇನಾ ನೆಲೆಗಳ ಮೇಲೆ ದಾಳಿ ಮಾಡಲಾಗುವುದು. ಇದು ಅಮೆರಿಕಕ್ಕೆ ನೀಡುತ್ತಿರುವ ಎಚ್ಚರಿಕೆ' ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ ಗುರುವಾರ ಬೆದರಿಕೆ ಹಾಕಿದೆ.

ನವದೆಹಲಿ (ಪಿಟಿಐ): ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಜ್‌ ಯಾತ್ರಿಕರನ್ನು ತ್ವರಿತವಾಗಿ ವಾಪಸ್‌ ಕರೆದುಕೊಂಡು ಬರುವುದಕ್ಕಾಗಿ ರಿಯಾದ್‌ನಲ್ಲಿರುವ ರಾಯಭಾರ ಕಚೇರಿ ಮತ್ತು ಜೆದ್ದಾದಲ್ಲಿನ ಕಾನ್ಸುಲೇಟ್ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. 'ಈ ಸಂಬಂಧ ರಾಜತಾಂತ್ರಿಕ ಅಧಿಕಾರಿಗಳು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳು ಹಾಗೂ ಯಾತ್ರಾ ಪ್ರವಾಸ ಸಂಘಟಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ' ಎಂದು ವಿದೇಶಾಂಗ ಸಚಿವಾಲಯ ಗುರುವಾರ ಹೇಳಿದೆ. ಸೌದಿ ಅರೇಬಿಯಾದ ದಮಾಮ್‌ನಲ್ಲಿರುವ ಕಿಂಗ್‌ ಫಹದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಭಾರತೀಯ ಸೇರಿದಂತೆ ಇಬ್ಬರು ಮೃತಪಟ್ಟು ಇತರ ಎಂಟು ಗಾಯಗೊಂಡಿರುವ ಬೆನ್ನಲ್ಲೇ ವಿದೇಶಾಂಗ ಸಚಿವಾಲಯ ಈ ವಿಷಯ ತಿಳಿಸಿದೆ. 'ಸೌದಿ ಅರೇಬಿಯಾದಲ್ಲಿ ಸಿಲುಕಿದ್ದವರ ಪೈಕಿ ಅಂದಾಜು 3 ಸಾವಿರ ಯಾತ್ರಿಕರು ಲಭ್ಯವಿದ್ದ ವಿಮಾನಗಳ ಮೂಲಕ ಭಾರತಕ್ಕೆ ಮರಳಿದ್ದಾರೆ' ಎಂದು ಸಚಿವಾಲಯ ತಿಳಿಸಿದೆ. ಉಮ್ರಾ ಯಾತ್ರೆ ಕೈಗೊಂಡಿರುವ ಸಾವಿರಾರು ಭಾರತೀಯರು ವಿಮಾನ ಸಂಚಾರದಲ್ಲಿನ ವ್ಯತ್ಯಯದಿಂದಾಗಿ ಸೌದಿ ಅರೇಬಿಯಾದಲ್ಲಿ ಸಿಲುಕಿದ್ದಾರೆ. ಅಲ್ಲದೇ ಸುಮಾರು 30 ಲಕ್ಷ ಭಾರತೀಯರು ಸೌದಿ ಅರೇಬಿಯಾದಲ್ಲಿ ಉದ್ಯೋಗ ಮತ್ತು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries