ಅಮರಾವತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಮುನ್ಸೂಚನೆ ನೀಡಿದೆ.
ಈ ಚಂಡಮಾರುತಕ್ಕೆ 'ಒರ್ನಾಬ್' (Arnab - Pronunciation Ornab) ಎಂದು ಹೆಸರಿಸಲಾಗಿದೆ.
ಅಕ್ಟೋಬರ್ 27ರ ವೇಳೆಗೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದ್ದು, ಮಂಗಳವಾರ ಬೆಳಿಗ್ಗೆ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಿದೆ.
ಐಎಂಡಿ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಇಂದು ಬೆಳಿಗ್ಗೆ ಪೂರ್ವ-ಮಧ್ಯ ಮತ್ತು ಸಮೀಪದ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತವು ಕೇಂದ್ರೀಕೃತವಾಗಿತ್ತು. ಕಳೆದ ಆರು ಗಂಟೆಗಳಲ್ಲಿ ಇದು ಗಂಟೆಗೆ 15 ಕಿ.ಮೀ ವೇಗದಲ್ಲಿ ಪಶ್ಚಿಮದತ್ತ ಚಲಿಸುತ್ತಿದೆ ಎಂದು ತಿಳಿಸಿದೆ.
ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸುವ ಸಾಧ್ಯತೆಗಳಿದ್ದು, ಸೋಮವಾರ ಮಧ್ಯರಾತ್ರಿಯ ವೇಳೆಗೆ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ತೀವ್ರ ಚಂಡಮಾರುತವಾಗಿ ರೂಪುಗೊಳ್ಳಲಿದೆ. ಇದು ವಾಯುವ್ಯ ದಿಕ್ಕಿನತ್ತ ಸಾಗಿ, ಅಕ್ಟೋಬರ್ 28ರ ಮಧ್ಯಾಹ್ನದ ಒಳಗೆ ಬಾಪಟ್ಲ ಮತ್ತು ವಿಶಾಖಪಟ್ಟಣ ನಡುವೆ ಆಂಧ್ರಪ್ರದೇಶ ಹಾಗೂ ಯಾಣಂ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ. ಈ ವೇಳೆ ಗಂಟೆಗೆ 125 ರಿಂದ 140 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ.
ಭಾರಿ ಮಳೆ ಮುನ್ಸೂಚನೆ:
ಚಂಡಮಾರುತದ ಪ್ರಭಾವದಿಂದ ಕರಾವಳಿ ಆಂಧ್ರಪ್ರದೇಶ, ಯಾಣಂ ಮತ್ತು ರಾಯಲಸೀಮಾದ ಕೆಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಅ. 29ರವರೆಗೂ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
ಮುಂಬರುವ ಮೂರು ದಿನಗಳು ನಿರ್ಣಾಯವೆನಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

