HEALTH TIPS

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ನಿರ್ಲಕ್ಷ್ಯ ಹೆಚ್ಚಳ: ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಆರೋಪ


ಕುಟುಂಬ ಆರೋಗ್ಯ ಕೇಂದ್ರಗಳ ಅಭಿವೃದ್ಧಿ ಹಾಗೂ ಸಂಜೆವರೆಗಿನ ಒಪಿಡಿ ಸೇವೆಗಳಿಗೆ ಹಿನ್ನಡೆ; ಅಟ್ಟಪ್ಪಾಡಿಯಲ್ಲಿ ಶಿಶುಮರಣಗಳ ಬಗ್ಗೆ ಕಳವಳ

ಕೋಟಾಯಂ: ಕೇರಳದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವುದು ಹಾಗೂ ನಿರ್ಲಕ್ಷ್ಯದ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಮಾಜಿ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಆರೋಪಿಸಿದ್ದಾರೆ. 


ಕೋತಮಂಗಲಂನಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ದೊರೆಯದೆ, ಅವರನ್ನು ಕಲಮಶ್ಶೇರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಬೇಕಾದ ಘಟನೆ ಇದಕ್ಕೆ ಇತ್ತೀಚಿನ ಉದಾಹರಣೆ ಎಂದು ಅವರು ಹೇಳಿದ್ದಾರೆ. ಕಳೆದ ನಾಲ್ಕು ತಿಂಗಳಲ್ಲಿ ಇಂತಹ ಹಲವು ಘಟನೆಗಳು ವರದಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

ಅಟ್ಟಪ್ಪಾಡಿಯಲ್ಲಿ ಮತ್ತೆ ಶಿಶುಮರಣಗಳು ಸಂಭವಿಸುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಹತ್ತು ಶಿಶುಮರಣಗಳು ಸಂಭವಿಸಿರುವುದಾಗಿ ತಮಗೆ ಮಾಹಿತಿ ದೊರೆತಿದೆ ಎಂದು ಶೈಲಜಾ ಹೇಳಿದ್ದಾರೆ.

2016ರಲ್ಲಿ ಎಲ್‌ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರತಿ ಸಾವಿರ ಜನನಗಳಿಗೆ 12ರಷ್ಟಿದ್ದ ಶಿಶುಮರಣ ಪ್ರಮಾಣವನ್ನು ಆಸ್ಪತ್ರೆಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಮೂಲಕ ಹಾಗೂ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ 2020ರ ವೇಳೆಗೆ ಐದಕ್ಕೆ ಇಳಿಸಲು ಸಾಧ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸುವುದು ಹಾಗೂ ಸಂಜೆವರೆಗೂ ಹೊರರೋಗಿ ವಿಭಾಗದ (ಒಪಿಡಿ) ಸೇವೆ ಒದಗಿಸುವ ವ್ಯವಸ್ಥೆಗಳಿಗೆ ಈಗ ಹಿನ್ನಡೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ. ಆರ್‌ದ್ರಂ ಮಿಷನ್‌ನಡಿ ಆರಂಭಿಸಲಾದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಕಿಫ್‌ಬಿ ಮೂಲಕ ಬಿಡುಗಡೆ ಮಾಡಬೇಕಾದ ಹಣ ದೊರೆಯದಿರುವುದು ಅಭಿವೃದ್ಧಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಹೊಸ ಕಾರ್ಯಪಡೆ ರಚನೆಯ ಮೂಲಕ ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ದುರ್ಬಲಗೊಳಿಸಿ ಖಾಸಗಿ ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ನೀಡುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.

ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ನಿಗದಿತ ಸಮಯದಲ್ಲಿ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಲು ಸರ್ಕಾರ ಬಲವಾದ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಭೆಗಳನ್ನು ನಡೆಸಿ, ಸೇವೆಯಲ್ಲಿನ ಲೋಪಗಳನ್ನು ಗುರುತಿಸಿ ಅವುಗಳನ್ನು ಸರಿಪಡಿಸಲು ಮುಂದಾಗಬೇಕು ಎಂದು ಶೈಲಜಾ ಒತ್ತಾಯಿಸಿದ್ದಾರೆ.

ಎಲ್‌ಜಿಎಸ್ ಅಭ್ಯರ್ಥಿಗಳ ಪ್ರತಿಭಟನೆ: ಯುಡಿಎಫ್ ವಿರುದ್ಧ ಟೀಕೆ

ತಿರುವನಂತಪುರದಲ್ಲಿ ಎಲ್‌ಜಿಎಸ್ ಹುದ್ದೆಗಳ ಅಭ್ಯರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಹಾಗೂ ತಲೆ ಬೋಳಿಸಿಕೊಂಡು ವ್ಯಕ್ತಪಡಿಸಿದ ಆಕ್ರೋಶದ ವಿಚಾರದಲ್ಲಿ ಯುಡಿಎಫ್ ಅನುಸರಿಸುತ್ತಿರುವ ನಿಲುವು ದ್ವಂದ್ವದಿಂದ ಕೂಡಿದೆ ಎಂದು ಕೆ.ಕೆ. ಶೈಲಜಾ ಟೀಕಿಸಿದ್ದಾರೆ.

ಎಲ್‌ಡಿಎಫ್ ಸರ್ಕಾರದ ಅವಧಿಯಲ್ಲಿ ಪಿಎಸ್‌ಸಿ ಮೂಲಕ ಹೆಚ್ಚಿನ ಸಂಖ್ಯೆಯ ನೇಮಕಾತಿಗಳನ್ನು ನಡೆಸಲಾಗಿತ್ತು. ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಅಂದಿನ ಸರ್ಕಾರ ಸಿದ್ಧವಾಗಿತ್ತು ಎಂದು ಅವರು ಹೇಳಿದ್ದಾರೆ.

ಆದರೆ, ಈಗ ಪ್ರತಿಭಟನೆ ನಡೆಸುತ್ತಿರುವ ಅಭ್ಯರ್ಥಿಗಳನ್ನು ಲೇವಡಿ ಮಾಡುವ ನಿಲುವನ್ನು ಪ್ರತಿಪಕ್ಷಗಳು ಅನುಸರಿಸುತ್ತಿವೆ ಎಂದು ಅವರು ಆರೋಪಿಸಿದ್ದಾರ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries