ಬದಿಯಡ್ಕ: ಕೇರಳ ಗ್ರಾಮೀಣ ಬ್ಯಾಂಕ್‍ನ ನೇತೃತ್ವದಲ್ಲಿ ಆರ್ಥಿಕ ಭದ್ರತೆ ಹಾಗೂ ಗ್ರಾಹಕರ ಹಿತರಕ್ಷಣೆಯ ಕುರಿತು ಮಾಹಿತಿ ಅಭಿಯಾನವು ಶುಕ್ರವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇರಳ ಗ್ರಾಮೀಣ ಬ್ಯಾಂಕ್‍ನ ಪ್ರಾದೇಶಿಕ ವ್ಯವಸ್ಥಾಪಕ ಗೋಪಕುಮಾರ್ ಕೆ. ಅವರು, "ಇಂದಿನ ಡಿಜಿಟಲ್ ಯುಗದಲ್ಲಿ ಬ್ಯಾಂಕಿಂಗ್ ಸೇವೆಗಳು ಸುಲಭವಾಗಿದ್ದರೂ, ಸೈಬರ್ ವಂಚನೆಗಳ ಅಪಾಯವೂ ಹೆಚ್ಚಾಗಿದೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ವಿವರಗಳು, ಎಟಿಎಂ ಪಿನ್, ಒಟಿಪಿ ಸೇರಿದಂತೆ ಗೌಪ್ಯ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಸುರಕ್ಷಿತ ಹಣಕಾಸು ವ್ಯವಹಾರಗಳ ಕುರಿತು ಜಾಗೃತಿ ಹೊಂದುವುದೇ ಪ್ರತಿಯೊಬ್ಬರ ಆರ್ಥಿಕ ಭದ್ರತೆಗೆ ಪ್ರಮುಖ ಮಾರ್ಗವಾಗಿದೆ" ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಎ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಹಣಕಾಸು ಸಾಕ್ಷರರಾದ ಸುಬ್ರಹ್ಮಣ್ಯ ಶೆಣೈ, ದೇವದಾಸ್ ಬಿ. ಹಾಗೂ ಸಾಲು ಸನ್ನಿ ಅವರು ಆನ್‍ಲೈನ್ ಮತ್ತು ದೂರವಾಣಿ ಕರೆಗಳ ಮೂಲಕ ನಡೆಯುವ ಸೈಬರ್ ವಂಚನೆಗಳಿಂದ ತಪ್ಪಿಸಿಕೊಳ್ಳಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಗ್ರಾಹಕರಿಗೆ ವಿವರವಾದ ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದ ಜನರ ಸಬಲೀಕರಣಕ್ಕಾಗಿ ಲಭ್ಯವಿರುವ ವಿವಿಧ ಠೇವಣಿ ಹಾಗೂ ಸಾಲ ಯೋಜನೆಗಳು ಮತ್ತು ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯ ಬಗ್ಗೆಯೂ ಮಾಹಿತಿ ನೀಡಲಾಯಿತು. ಗ್ರಾಹಕರ ಪ್ರಶ್ನೆಗಳಿಗೆ ಬ್ಯಾಂಕ್ ಅಧಿಕಾರಿಗಳು ಸೂಕ್ತ ಉತ್ತರಗಳನ್ನು ನೀಡುವುದರ ಜೊತೆಗೆ, ವಿವಿಧ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ತಿಳಿಸಿದರು.
ಬದಿಯಡ್ಕ ಶಾಖೆಯ ವ್ಯವಸ್ಥಾಪಕ ಹರೀಶ್ ಬಿ. ಸ್ವಾಗತಿಸಿದರು. ನಿವೃತ್ತ ವ್ಯವಸ್ಥಾಪಕ ಈಶ್ವರ ಕೆ. ವಂದಿಸಿದರು. ಬ್ಯಾಂಕ್ ಸಿಬ್ಬಂದಿ, ಸ್ಥಳೀಯ ಪ್ರಮುಖರು ಹಾಗೂ ಗ್ರಾಹಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಿರುಹಾಸ್ಯ ಕಾರ್ಯಕ್ರಮವೂ ನಡೆಯಿತು. ಈಶ್ವರ ಕುಲಾಲ್ ಕನ್ವತೀರ್ಥ, ದೇವದಾಸ್ ಶೆಟ್ಟಿ ತೂಮಿನಾಡು, ಪದ್ಮನಾಭ ತೂಮಿನಾಡು, ಆನಂದ ಸಾಲಿಯಾನ್ ಕನ್ವತೀರ್ಥ ಹಾಗೂ ಶಿವರಾಮ ಪದ್ಮಾರು ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

