ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಸೊಮಾಲಿಯಾ ಕಡಲ್ಗಳ್ಳರಿಂದ ಸಂಭವಿಸಿದ ಮೊದಲ ಹತ್ಯೆ ಇದು ಎಂದು ಹೇಳಲಾಗಿದೆ. ಎಪ್ರಿಲ್ 21ರಂದು ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರು 'ಎಂಟಿ ಆನರ್ 25' ಹಡಗನ್ನು ವಶಪಡಿಸಿಕೊಂಡಿದ್ದರು. ಹಡಗಿನಲ್ಲಿ 18,500 ಬ್ಯಾರೆಲ್ ತೈಲವಿತ್ತು.
ಸೊಮಾಲಿಯಾದ ಅರೆ ಸ್ವಾಯತ್ತ ಪ್ರದೇಶವಾದ ಪುಂಟ್ಲ್ಯಾಂಡ್ ನ ಮಾಹಿತಿ ಸಚಿವಾಲಯದ ಪ್ರಕಾರ, ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹಡಗನ್ನು ಬಿಡುಗಡೆ ಮಾಡಲಾಗಿದೆ. 16 ಶಂಕಿತ ಕಡಲ್ಗಳ್ಳರನ್ನು ಬಂಧಿಸಲಾಗಿದೆ.
ಆದರೆ, ಕಾರ್ಯಾಚರಣೆ ಆರಂಭಿಸುವ ಮುನ್ನವೇ ಹಡಗಿನಲ್ಲಿದ್ದ ಕಡಲ್ಗಳ್ಳರು ಐವರು ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. ಮೃತರಲ್ಲಿ ಪಾಕಿಸ್ತಾನದ ಮೂವರು, ಮ್ಯಾನ್ಮಾರ್ನ ಒಬ್ಬರು ಮತ್ತು ಭಾರತದ ಒಬ್ಬರು ಸೇರಿದ್ದಾರೆ. ಪಾಕಿಸ್ತಾನದ ಮೂವರು ಹಾಗೂ ಭಾರತದ ಒಬ್ಬರು ಸೇರಿದಂತೆ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಭಾರತೀಯ ಸಿಬ್ಬಂದಿ ಹತ್ಯೆ
ಕೆನ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ, ಭಾರತೀಯ ಸಿಬ್ಬಂದಿಯ ಹತ್ಯೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಹಡಗಿನಲ್ಲಿದ್ದ ಇತರ ಎಲ್ಲ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ರಕ್ಷಿಸಲಾದ 'ಎಂಟಿ ಸಿಬು 1' ಮತ್ತು 'ಎಂಟಿ ಯುರೆಕಾ' ಹಡಗುಗಳಲ್ಲಿದ್ದ ಭಾರತೀಯ ನಾವಿಕರೂ ಸುರಕ್ಷಿತವಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.
'ಸಾಮರ್ಥ್ಯ ಸಾಬೀತಾಗಿದೆ'
ಪುಂಟ್ಲ್ಯಾಂಡ್ ನ ಮೀನುಗಾರಿಕೆ ಮತ್ತು ಸಮುದ್ರ ಸಂಪನ್ಮೂಲ ಸಚಿವ ಮೊಹಮ್ಮದ್ ಅಬ್ದುಲ್ಕಾದಿರ್ ಸಲಾಹ್ ಅವರು, ಪುಂಟ್ಲ್ಯಾಂಡ್ ತನ್ನ ಜಲಪ್ರದೇಶವನ್ನು ಆಡಳಿತ ನಡೆಸುವ ಹಾಗೂ ರಕ್ಷಿಸುವ ಸಾಮರ್ಥ್ಯದ ಬಗ್ಗೆ ಅನೇಕರು ಪ್ರಶ್ನೆಗಳನ್ನು ಎತ್ತಿದ್ದರು ಎಂದು 'Aljazeera'ಗೆ ತಿಳಿಸಿದ್ದಾರೆ.
'PMPF ನಡೆಸಿದ ಕಾರ್ಯಾಚರಣೆಯ ಮೂಲಕ ನಮಗೆ ಆ ಸಾಮರ್ಥ್ಯವಿದೆ ಎಂಬುದನ್ನು ಸಾಬೀತುಪಡಿಸಿದ್ದೇವೆ. ಅಗತ್ಯವಿದ್ದಾಗ ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನೂ ಸ್ಪಷ್ಟಪಡಿಸಿದ್ದೇವೆ' ಎಂದು ಅವರು ಹೇಳಿದ್ದಾರೆ.
ಕಳೆದ ವಾರ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಕಡಲ ಪೊಲೀಸರು 'ಸಿಬು 1' ಟ್ಯಾಂಕರ್ ಅನ್ನು ಬಿಡುಗಡೆ ಮಾಡಿದ್ದರು. ಅಮೆರಿಕ ನಿರ್ಬಂಧ ವಿಧಿಸಿದ್ದ ಈ ಹಡಗನ್ನು ಸೊಮಾಲಿಯಾ ಕಡಲ್ಗಳ್ಳರು ಆಗಸ್ಟ್ನಲ್ಲಿ ಅಪಹರಿಸಿದ್ದರು.
ಆ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದ್ದ 41 ಕಡಲ್ಗಳ್ಳರ ಪೈಕಿ 28 ಮಂದಿ ಬಳಿಕ ಜೈಲಿಗೆ ಸ್ಥಳಾಂತರಿಸುವ ವೇಳೆ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಶಾಮೀಲಾಗಿದ್ದರು ಎಂದು ಪುಂಟ್ಲ್ಯಾಂಡ್ ನ ಹಲವು ಭದ್ರತಾ ಅಧಿಕಾರಿಗಳು ಆರೋಪಿಸಿದ್ದರು.
ಎಪ್ರಿಲ್ನಿಂದ 15 ದಾಳಿ
ಅಧಿಕಾರಿಗಳ ಪ್ರಕಾರ, ಎಪ್ರಿಲ್ ನಿಂದೀಚೆಗೆ ಸೊಮಾಲಿಯಾ ಕರಾವಳಿಯಲ್ಲಿ ಕನಿಷ್ಠ 15 ಕಡಲ್ಗಳ್ಳತನದ ದಾಳಿಗಳು ವರದಿಯಾಗಿವೆ.
ಪುಂಟ್ಲ್ಯಾಂಡ್ ನ ಭದ್ರತಾ ಸಮನ್ವಯ ಕಚೇರಿಯ ಮುಖ್ಯಸ್ಥ ಮೊಹಮದ್ ಮುಬಾರಕ್ 'ಎಕ್ಸ್'ನಲ್ಲಿ ಪ್ರಕಟಿಸಿದ ಪೋಸ್ಟ್ ನಲ್ಲಿ, ಪುಂಟ್ಲ್ಯಾಂಡ್ ಕರಾವಳಿಯ ಸಮುದ್ರದಲ್ಲಿ ಕಡಲ್ಗಳ್ಳರ ವಶದಲ್ಲಿ ಯಾವುದೇ ಹಡಗುಗಳಿಲ್ಲ ಎಂದು ತಿಳಿಸಿದ್ದಾರೆ. ಆದರೆ ನೆರೆಯ ಗಾಲ್ಮುಡುಗ್ ರಾಜ್ಯದ ಜಲಪ್ರದೇಶದಲ್ಲಿ ಒಂದು ಹಡಗು ಇನ್ನೂ ಕಡಲ್ಗಳ್ಳರ ವಶದಲ್ಲಿದೆ ಎಂದು ಹೇಳಿದ್ದಾರೆ.
ಜುಲೈನಲ್ಲಿ ಅಪಹರಣಕ್ಕೊಳಗಾದ 'ಎಂಟಿ ಅಸಾನಾ' ಹಡಗು ಸೀಲ್ ಹೂರ್ ಪಟ್ಟಣದ ಕರಾವಳಿಯ ಸಮೀಪದಲ್ಲೇ ಇದೆ ಎಂದು ಅವರು ತಿಳಿಸಿದ್ದಾರೆ.
ಮತ್ತೆ ಹೆಚ್ಚಿದ ಆತಂಕ
ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳತನ ಮರುಕಳಿಸಲು ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದ ಪರಿಣಾಮಗಳೂ ಭಾಗಶಃ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2008ರಿಂದ 2014ರವರೆಗೆ ನಡೆದ ಸೊಮಾಲಿಯಾ ಕಡಲ್ಗಳ್ಳತನದ ಅಲೆ ವಿಶ್ವದ ಅತ್ಯಂತ ಜನನಿಬಿಡ ಹಡಗು ಮಾರ್ಗಗಳಲ್ಲಿ ಒಂದಕ್ಕೆ ಅಡ್ಡಿ ಉಂಟುಮಾಡಿತ್ತು. ಇದರಿಂದ ಜಾಗತಿಕ ಆರ್ಥಿಕತೆಗೆ ಶತಕೋಟಿ ಡಾಲರ್ ಗಳಷ್ಟು ನಷ್ಟವಾಗಿತ್ತು. ಅಪಹರಣಕ್ಕೊಳಗಾದ ಹಡಗುಗಳು ಮತ್ತು ಸಿಬ್ಬಂದಿಯನ್ನು ಬಿಡುಗಡೆ ಮಾಡಲು ಕೋಟ್ಯಂತರ ಡಾಲರ್ ಗಳಷ್ಟು ಹಣವನ್ನು ಪಾವತಿಸುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.
ಸೊಮಾಲಿಯಾ ಕರಾವಳಿಯಲ್ಲಿ ಮತ್ತೆ ಕಡಲ್ಗಳ್ಳತನದ ದಾಳಿಗಳು ಹೆಚ್ಚುತ್ತಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ.

