ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಇದೇ ಮೊದಲ ಬಾರಿಗೆ 9ನೇ ತರಗತಿ ಪಠ್ಯಕ್ರಮದಲ್ಲಿ 'ವೈಯಕ್ತಿಕ ಆದಾಯ ತೆರಿಗೆ' ಎಂಬ ಅಧ್ಯಾಯವನ್ನು ಸೇರ್ಪಡೆ ಮಾಡಿದೆ.
ಹೊಸ ತೆರಿಗೆ ಪದ್ಧತಿಯಡಿ ತೆರಿಗೆ ಹೊಣೆಗಾರಿಕೆಯನ್ನು ಹೇಗೆ ಲೆಕ್ಕಾಚಾರ ಮಾಡಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ.
'ಅಂಡರ್‌ಸ್ಟ್ಯಾಂಡಿಂಗ್ ಸೊಸೈಟಿ ಇಂಡಿಯಾ ಆಯಂಡ್ ಬಿಯಾಂಡ್- ಪಾರ್ಟ್ 2' ಎಂಬ ಪುಸ್ತಕದಲ್ಲಿ ಈ ವಿಷಯವನ್ನು ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ, ತೆರಿಗೆ ಪಾವತಿಸುವುದನ್ನು ಪ್ರಮುಖ ನಾಗರಿಕ ಜವಾಬ್ದಾರಿ ಎಂದು ಪುಸ್ತಕದಲ್ಲಿ ಬಿಂಬಿಸುತ್ತದೆ.
'ತೆರಿಗೆ ಲೆಕ್ಕಾಚಾರ' ಕಲಿಯಲಿರುವ ವಿದ್ಯಾರ್ಥಿಗಳು
'ಇದೇ ಮೊದಲ ಬಾರಿಗೆ 9ನೇ ತರಗತಿಗೆ ಈ ಅಧ್ಯಾಯವನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಈಗ ಹೊಸ ತೆರಿಗೆ ಪದ್ಧತಿಯಲ್ಲಿನ ತೆರಿಗೆ ಲೆಕ್ಕಾಚಾರವನ್ನು ಕಲಿಯಬಹುದು. ತೆರಿಗೆಗಳನ್ನು ಪ್ರಾಮಾಣಿಕವಾಗಿ ಮತ್ತು ಸಮಯಕ್ಕೆ ಸರಿಯಾಗಿ ಪಾವತಿಸುವುದು ಪ್ರತಿಯೊಬ್ಬ ಪ್ರಜೆಯ ಪ್ರಮುಖ ಜವಾಬ್ದಾರಿಯಾಗಿದೆ. ಇದು ದೇಶದ ಅಭಿವೃದ್ಧಿಗೆ ಅಗತ್ಯವಿರುವ ಹಣವನ್ನು ಒದಗಿಸುತ್ತದೆ' ಎಂದು ಎನ್‌ಸಿಇಆರ್‌ಟಿ ಮುಖ್ಯಸ್ಥ ದಿನೇಶ್ ಪ್ರಸಾದ್ ಸಕ್ಲಾನಿ ತಿಳಿಸಿದ್ದಾರೆ.
'ನಿಮ್ಮ ವೈಯಕ್ತಿಕ ಹಣಕಾಸು ನಿರ್ವಹಣೆ' ಎಂಬ ಅಧ್ಯಾಯವು, ಬಾಲ್ಯದಲ್ಲೇ ಹಣದ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತದೆ.
'ಹಣವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುವುದು ಎಂದರೆ ಹೆಚ್ಚು ಸಂಪಾದಿಸುವುದಷ್ಟೇ ಅಲ್ಲ, ಅದು ಖರ್ಚು ಮಾಡುವುದು, ಉಳಿಸುವುದು, ಹೂಡಿಕೆ ಮಾಡುವುದು, ಅಪಾಯಗಳ ವಿರುದ್ಧ ರಕ್ಷಣೆ ಪಡೆಯುವುದು, ಜವಾಬ್ದಾರಿಯುತವಾಗಿ ಸಾಲ ಮಾಡುವುದು ಅಥವಾ ತೆರಿಗೆ ಪಾವತಿಸುವುದನ್ನು ಒಳಗೊಂಡಿದೆ. ಪ್ರತಿಯೊಂದು ಹಂತದಲ್ಲೂ ಎಚ್ಚರಿಕೆಯಿಂದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ವ್ಯಕ್ತಿಗಳು ಇಂದು ತೆಗೆದುಕೊಳ್ಳುವ ನಿರ್ಧಾರಗಳು ಅವರ ಆರ್ಥಿಕ ಭವಿಷ್ಯವನ್ನು ರೂಪಿಸುತ್ತವೆ. ಆರ್ಥಿಕ ಅವಕಾಶಗಳು ಹಾಗೂ ಸವಾಲುಗಳನ್ನು ನಿಭಾಯಿಸುವಾಗ ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಅವರ ಸಾಮರ್ಥ್ಯವನ್ನು ನಿರ್ಧರಿಸುತ್ತವೆ' ಎಂದು ಪಠ್ಯಪುಸ್ತಕದಲ್ಲಿ ವಿವರಿಸಲಾಗಿದೆ.
ಹೊಸ ತೆರಿಗೆ ಪದ್ಧತಿ ಮಾತ್ರ ಸೇರ್ಪಡೆ
ಈ ಅಧ್ಯಾಯವು ಹೊಸ ಪದ್ಧತಿಯಡಿಯಲ್ಲಿರುವ ತೆರಿಗೆ ಸ್ಲ್ಯಾಬ್‌ಗಳ ಕೋಷ್ಟಕವನ್ನು ಒಳಗೊಂಡಿದೆ ಮತ್ತು ಆ ಸ್ಲ್ಯಾಬ್‌ಗಳನ್ನು ಬಳಸಿ ತೆರಿಗೆಯನ್ನು ಹೇಗೆ ಲೆಕ್ಕಹಾಕಬೇಕೆಂದು ವಿವರಿಸುತ್ತದೆ.
ಕೋಷ್ಟಕದಲ್ಲಿ ತೋರಿಸಿರುವಂತೆ ಆದಾಯ ತೆರಿಗೆಯನ್ನು ಲೆಕ್ಕಹಾಕಲು ಭಾರತವು ಸ್ಲ್ಯಾಬ್ ವ್ಯವಸ್ಥೆಯನ್ನು ಅನುಸರಿಸುತ್ತದೆ ಎಂದು ಹೊಸ ತೆರಿಗೆ ಸ್ಲ್ಯಾಬ್‌ಗಳನ್ನು ಪಟ್ಟಿ ಮಾಡುವ ಮೊದಲು ಪಠ್ಯಪುಸ್ತಕದಲ್ಲಿ ಹೇಳಲಾಗಿದೆ. ಆದರೆ, ಈ ಅಧ್ಯಾಯದಲ್ಲಿ ಹಳೆಯ ತೆರಿಗೆ ಪದ್ಧತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು 'ಪಿಟಿಐ' ವರದಿ ಮಾಡಿದೆ.
2020-21ರಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಯಿತು. 2023ರ ಏಪ್ರಿಲ್ 1ರಿಂದ ಇದನ್ನು ಮೂಲಭೂತ ತೆರಿಗೆ ಪದ್ಧತಿಯಾಗಿ ಜಾರಿಗೆ ತರಲಾಯಿತು.
ವೈಯಕ್ತಿಕ ಹಣಕಾಸಿನ ಮೇಲೆ ಗಮನ
ಈ ಅಧ್ಯಾಯವು ಆದಾಯ, ಬಜೆಟ್, ಉಳಿತಾಯ, ಹೂಡಿಕೆ ಹಾಗೂ ನಿರ್ವಹಣೆಯಂತಹ ವೈಯಕ್ತಿಕ ಹಣಕಾಸಿನ ಪ್ರಮುಖಾಂಶಗಳನ್ನು ವಿವರಿಸುತ್ತದೆ.
ಹೂಡಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಭದ್ರತಾ ಠೇವಣಿ, ಬಾಂಡ್‌ಗಳು, ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳ ಜೊತೆಗೆ ಆರಂಭಿಕ ಹೂಡಿಕೆಯ ಶಕ್ತಿ ಎಂಬ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ.
'ಪ್ರಾಮಾಣಿಕವಾಗಿ ಮತ್ತು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಪುಸ್ತಕದಲ್ಲಿ ಬಣ್ಣಿಸಲಾಗಿದೆ.

