HEALTH TIPS

ಭವಿಷ್ಯದ ಕುರಿತು ಚರ್ಚಿಸಲು ಟಿಎಂಸಿ ಬಂಡಾಯ ನಾಯಕರ ಸಭೆ: ಅರ್ಧದಷ್ಟು ಸಂಸದರು ಗೈರು

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ ತೊರೆದು ನ್ಯಾಷನಲಿಸ್ಟ್‌ ಸಿಟಿಜನ್ಸ್‌ ಪಾರ್ಟಿ ಆಫ್‌ ಇಂಡಿಯಾ (ಎನ್‌ಸಿಪಿಐ) ಸೇರಿದ್ದ 20 ಲೋಕಸಭಾ ಸದಸ್ಯರಲ್ಲಿ ಹತ್ತು ಮಂದಿ ಗುರುವಾರ ಕೋಲ್ಕತ್ತದಲ್ಲಿ ನಡೆದ ಸಭೆಯಿಂದ ದೂರ ಉಳಿದಿದ್ದಾರೆ. ಬಿಜೆಪಿ ನಾಯಕತ್ವದ ನಿರ್ಲಕ್ಷ್ಯ ಮತ್ತು ಇತ್ತೀಚೆಗೆ ಭಾರತ-ಬ್ರೆಜಿಲ್ ಸೌಹಾರ್ದ ಫುಟ್‌ಬಾಲ್ ಪಂದ್ಯದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಉಂಟಾದ ಅಸಮಾಧಾನವೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. 


ತೃಣಮೂಲ ಕಾಂಗ್ರೆಸ್ ತೊರೆದು ಎನ್‌ಸಿಪಿಐಗೆ ಸೇರಲು ಕಾರಣವೇನು ಹಾಗೂ ಪಕ್ಷಾಂತರ ಕಾಯ್ದೆಯ (ಸಂವಿಧಾನದ 10ನೇ ಅನುಸೂಚಿ) ಅಡಿಯಲ್ಲಿ ಏಕೆ ಕ್ರಮ ಜರುಗಿಸಬಾರದು ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನೀಡಿದ್ದ ನೋಟಿಸ್‌ಗೆ ಉತ್ತರಿಸಲು ಸಂಸದರು ಮತ್ತೊಮ್ಮೆ ಎರಡು ವಾರಗಳ ಗಡುವು ಕೋರಿದ್ದಾರೆ. ಈ ಬೆನ್ನಲ್ಲೇ ಈ ಗುಂಪಿನ ರಾಜಕೀಯ ಭವಿಷ್ಯದ ಕುರಿತು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿತ್ತು.

ಈ ಮುನ್ನ ಸ್ಪೀಕರ್ ಮೂರು ಬಾರಿ ನೀಡಿದ್ದ ವಿಸ್ತೃತ ಗಡುವು ಗುರುವಾರಕ್ಕೆ ಕೊನೆಗೊಂಡಿತ್ತು.

'ಬಂಗಾಳದಲ್ಲಿ ದುರ್ಗಾಪೂಜೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಸ್ಪೀಕರ್ ನೋಟಿಸ್‌ಗೆ ಉತ್ತರಿಸಲು ಹೆಚ್ಚುವರಿ ಎರಡು ವಾರಗಳ ಕಾಲಾವಕಾಶ ಕೋರಿದ್ದೇವೆ. ನಮ್ಮ ವಕೀಲರು ಅಗತ್ಯ ದಾಖಲೆಗಳನ್ನು ಕ್ರೋಡೀಕರಿಸುತ್ತಿದ್ದು, ಇದಕ್ಕೆ ಕೊಂಚ ಸಮಯ ಹಿಡಿಯಲಿದೆ' ಎಂದು ಎನ್‌ಸಿಪಿಐ ಸಂಸದ ಅರೂಪ್ ರಾಯ್ ತಿಳಿಸಿದ್ದಾರೆ.

ಸಭೆಗೆ ಗೈರಾದವರು

ರಾಸಾಯನಿಕ ಮತ್ತು ರಸಗೊಬ್ಬರ ಸಮಿತಿಯ ಅಧ್ಯಕ್ಷೆಯಾಗಿ ಇತ್ತೀಚೆಗೆ ನೇಮಕಗೊಂಡ ಟಿಎಂಸಿಯ ಬಂಡಾಯ ಬಣದ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ಸಭೆಗೆ ಗೈರಾಗಿದ್ದರು. ಮೂಲಗಳ ಪ್ರಕಾರ, ಅವರ ಈ ನೇಮಕ ಪ್ರಕ್ರಿಯೆ ಎನ್‌ಸಿಪಿಐ ಒಳಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದ ಹಿರಿಯ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರೇ ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ.

ಸಯಾನಿ ಘೋಷ್, ಜೂನ್ ಮಲಿಯಾ, ಕಾಲಿಪಾದ ಸರನ್ ಖೇರ್ವಾಲ್, ಮಿಥಾಲಿ ಬಾಗ್, ಯೂಸುಫ್ ಪಠಾಣ್, ಅಧಿಕಾರಿ ದೀಪಕ್ ದೇವ್, ಅಸಿತ್ ಕುಮಾರ್ ಮಾಲ್, ಮಾಲಾ ರಾಯ್ ಮತ್ತು ಪಾರ್ಥ ಭೌಮಿಕ್ ಸಭೆಯಿಂದ ಹೊರಗುಳಿದ ಪ್ರಮುಖ ಸಂಸದರು.

ಹೆಚ್ಚಿದ ಅಸಮಾಧಾನ:

ಎನ್‌ಡಿಎ ಒಕ್ಕೂಟದ ನಿಯಮಿತ ಸಭೆಗಳು ನಡೆಯದಿರುವ ಬಗ್ಗೆ ಸುದೀಪ್ ಬಂಡೋಪಾಧ್ಯಾಯ ಕಳವಳ ವ್ಯಕ್ತಪಡಿಸಿದ್ದಾರೆ. ಗುರುವಾರ ಕೋಲ್ಕತ್ತದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಂತರ ಎನ್‌ಡಿಎನಲ್ಲಿ 20 ಸಂಸದರನ್ನು ಹೊಂದಿರುವ ಎರಡನೇ ಅತಿ ದೊಡ್ಡ ಗುಂಪು ನಮ್ಮದಾಗಿದ್ದರೂ, ನಿಯಮಿತ ಸಭೆಗಳು ನಡೆಯುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಇದಲ್ಲದೇ, ಕೋಲ್ಕತ್ತದಲ್ಲಿ ನಡೆದ ಭಾರತ-ಬ್ರೆಜಿಲ್ ಫುಟ್‌ಬಾಲ್ ಪಂದ್ಯದ ವಿಐಪಿ ಟಿಕೆಟ್‌ಗಳನ್ನು ತಲುಪಿಸುವ ವಿಧಾನವೂ ಸಂಸದರ ಅಸಮಾಧಾನಕ್ಕೆ ಕಾರಣವಾಗಿದೆ. ಟಿಕೆಟ್‌ಗಳನ್ನು ಸಂಸದರೊಬ್ಬರ ನಿವಾಸಕ್ಕೆ ಕಳುಹಿಸಿ, ಅಲ್ಲಿಂದ ಪಡೆದುಕೊಳ್ಳುವಂತೆ ತಿಳಿಸಿದ್ದನ್ನು ಹಲವರು ಗೌರವಕ್ಕೆ ಧಕ್ಕೆ ಎಂದು ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ಸಂಸದರು ತಮ್ಮ ನಡುವೆ ಸಮನ್ವಯಕ್ಕಾಗಿ ರಚಿಸಲಾದ ವಾಟ್ಸಾಪ್ ಗ್ರೂಪ್‌ನಿಂದ ಹೊರಬಂದಿದ್ದಾರೆ.

ಆದಾಗ್ಯೂ, ಸಭೆಯಲ್ಲಿ ಭಾಗವಹಿಸಿದ್ದ ಎನ್‌ಸಿಪಿಐ ಸಂಸದರು, ಗುಂಪಿನೊಳಗಿನ ಬಿರುಕಿನ ಬಗ್ಗೆ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.

ವೈಯಕ್ತಿಕ ಕಾರಣಗಳಿಂದಾಗಿ ಎಲ್ಲಾ ಸಂಸದರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ, ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಗಿದೆ ಎಂದು ರಾಯ್ ಹೇಳಿದ್ದಾರೆ.

'ನ್ಯಾಷನಲಿಸ್ಟ್‌ ಸಿಟಿಜನ್‌ ಪಕ್ಷ'ದ ಜತೆ ಟಿಎಂಸಿ ಬಂಡಾಯ ಬಣ ವಿಲೀನಟಿಎಂಸಿಯನ್ನು ಮಣಿಸಲು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ: ಸಿಪಿಎಂ

ಬಂಡಾಯ ಸಂಸದರ ರಾಜಕೀಯ ಭವಿಷ್ಯ ಅನಿಶ್ಚಿತ:

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋಲುಂಡು ಬಿಜೆಪಿ ಅಭೂತಪೂರ್ವ ಜಯಗಳಿಸಿದ ನಂತರ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯ 29 ಲೋಕಸಭಾ ಸಂಸದರ ಪೈಕಿ 20 ಸಂಸದರು ಬಂಡೋಪಾಧ್ಯಾಯ ಮತ್ತು ಕಾಕೋಲಿ ನೇತೃತ್ವದಲ್ಲಿ ಬಂಡಾಯವೆದ್ದು ಎನ್‌ಸಿಪಿಐ ಸೇರಿದ್ದರು.

ಆರಂಭದಲ್ಲಿ ಈ ಸಂಸದರು ತಾತ್ಕಾಲಿಕವಾಗಿ ಎನ್‌ಸಿಪಿಐ ಮೂಲಕ ಎನ್‌ಡಿಎ ಮೈತ್ರಿಗೆ ಬೆಂಬಲ ನೀಡಿ, ದುರ್ಗಾಪೂಜೆಯ ನಂತರ ಹಂತ ಹಂತವಾಗಿ ಬಿಜೆಪಿಗೆ ಸೇರ್ಪಡೆಯಾಗುವ ಯೋಜನೆಯಲ್ಲಿದ್ದರು. ಆದರೆ, ಬಿಜೆಪಿ ವರಿಷ್ಠರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳ ನಿರ್ವಹಣೆಯಲ್ಲಿ ನಿರತರಾಗಿರುವುದರಿಂದ, ಬಂಡಾಯ ಸಂಸದರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಪ್ರಸ್ತುತ ಆದ್ಯತೆಯಾಗಿ ಉಳಿದಿಲ್ಲ. ಇದು ಬಂಡಾಯ ಸಂಸದರ ಗುಂಪಿನಲ್ಲಿ ತೀವ್ರ ಅಸಮಾಧಾನ ಹಾಗೂ ಆತಂಕವನ್ನು ಹುಟ್ಟುಹಾಕಿದೆ. ಅಲ್ಲದೇ ಅವರ ರಾಜಕೀಯ ಭವಿಷ್ಯದ ಮೇಲೆ ಅನಿಶ್ಚಿತತೆಯ ಕಾರ್ಮೋಡ ಕವಿಯುವಂತೆ ಮಾಡಿದೆ ಎಂದು ಮೂಲಗಳು ಹೇಳಿವೆ.

ಮತ್ತೊಂದೆಡೆ, ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿ ಘಟಕದ ನಾಯಕರು ಹಾಗೂ ಕಾರ್ಯಕರ್ತರಿಂದಲೂ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬಂಡಾಯ ಸಂಸದರನ್ನು ಪಕ್ಷಕ್ಕೆ ಸೇರಿಸಿಕೊಂಡರೆ, 2029ರ ಲೋಕಸಭಾ ಚುನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕೈ ತಪ್ಪಬಹುದು ಎಂಬ ಭೀತಿ ವ್ಯಕ್ತವಾಗಿದೆ. ಇದರಿಂದಾಗಿ ಬಂಡಾಯ ಸಂಸದರಿಗೆ 2029ರ ಚುನಾವಣಾ ಟಿಕೆಟ್ ಭರವಸೆ ನೀಡಲು ಬಿಜೆಪಿ ಹಿಂಜರಿಯುತ್ತಿದೆ.

ಟಿಎಂಸಿ ವಾಗ್ದಾಳಿ:

ಸ್ಪೀಕರ್ ನೀಡಿರುವ ನೋಟೀಸ್‌ಗೆ ಉತ್ತರಿಸಲು ಅವರು ಯಾಕಾಗಿ ಇಷ್ಟೊಂದು ಸಮಯ ತೆಗೆದುಕೊಳ್ಳುತ್ತಿದ್ದಾರೆ? ತಾವು ಯಾವ ಪಕ್ಷಕ್ಕೆ ಸೇರಿದವರು ಎಂಬುದನ್ನು ಸ್ಪಷ್ಟಪಡಿಸಲು ಅವರಿಗೆ ಏಕೆ ಸಾಧ್ಯವಾಗುತ್ತಿಲ್ಲ? ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ. ಅಲ್ಲದೇ ಬಂಡಾಯ ಸಂಸದರನ್ನು 'ದ್ರೋಹಿಗಳು' ಎಂದೂ ಕರೆದಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries