ಮುಂಬೈ: ಯುವಜನರಿಗೆ ಭಯಪಡುವುದಿದ್ದರೆ ಇಡೀ ದೇಶವನ್ನು ಬಂದ್ ಮಾಡಿ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅ.10ರಂದು ದೆಹಲಿಗೆ ಆಗಮಿಸುವ ರೈಲುಗಳನ್ನು ರದ್ದು ಮಾಡಿದ್ದಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮುಂಬೈನಲ್ಲಿ ಮಾತನಾಡಿದ ಅವರು, ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅನುಮತಿ ಬೇಕಿಲ್ಲ. ಅದು ಪ್ರತಿಭಟನೆಗೆಂದೇ ಇರುವ ಸ್ಥಳ ಎಂದು ಹೇಳಿದ್ದಾರೆ.
ರೈಲು ರದ್ದು ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಅವರು, 'ನರೇಂದ್ರ ಮೋದಿ ಅವರು ಇದೀಗ ತುರ್ತು ಪರಿಸ್ಥಿತಿಯನ್ನು ಅಧಿಕೃತಗೊಳಿಸಿದ್ದಾರೆ' ಎಂದು ಕಿಡಿ ಕಾರಿದ್ದಾರೆ.
'ಅಕ್ಟೋಬರ್ 9ರಂದು ಮೂಲ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಗೆ ಬಳಿಕ ಹೊರಟು, ಅ.10 ರಂದು ನವದೆಹಲಿ ಹಾಗೂ ಹಝ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಮುಂಜಾನೆ 4ರಿಂದ ಮಧ್ಯಾಹ್ನ 2 ಗಂಟೆ ನಡುವೆ ತಲುಪುವ ಎಲ್ಲಾ ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಪೂರ್ಣವಾಗಿ ರದ್ದು ಮಾಡಲಾಗಿದೆ' ಎಂದು ರೈಲ್ವೆ ಬೋರ್ಡ್ ಪ್ರಕಟಣೆ ತಿಳಿಸಿದೆ.
ಇನ್ನೊಂದು 'ಎಕ್ಸ್' ಪೋಸ್ಟ್‌ನಲ್ಲಿ, 'ಅ.10ರ ಪ್ರತಿಭಟನೆಗೂ ಮುನ್ನ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಹಲವು ಯುವಜನರನ್ನು ವಶಕ್ಕೆ ಪಡೆಯಲಾಗಿದೆ. ಮೋದಿಯವರೇ ನಿಮ್ಮ ಬೆದರಿಕೆ ಇನ್ನು ನಡೆಯುವುದಿಲ್ಲ. ಈ ದೇಶದ ಜನರು ನಿಮ್ಮ ಭಯಪಡುವವರಲ್ಲ. ನಾನು ನಾಳೆ ಬೆಳಿಗ್ಗೆ ದೆಹಲಿಗೆ ತೆರಳುತ್ತಿದ್ದು, ಏನಾದರು ಸರಿಯೇ ಜಂತರ್ ಮಂತರ್‌ಗೆ ಮೆರವಣಿಗೆಯಲ್ಲಿ ತೆರಳುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಜಂತರ್ ಮಂತರ್‌ಮಲ್ಲಿ ಪ್ರತಿಭಟನೆ ನಡೆಸಲು ಸಿಜೆಪಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.


