ನವದೆಹಲಿ: ದುಬೈನಿಂದ ಇಸ್ರೇಲ್‌ಗೆ ಹೊರಟಿದ್ದ 'ಫ್ಲೈದುಬೈ' ವಿಮಾನದಲ್ಲಿ ನಡೆದ ಘಟನೆ ವಿಮಾನ ಪ್ರಯಾಣಿಕರನ್ನು ಮತ್ತು ವಿಮಾನಯಾನ ವಲಯದವರನ್ನು ಬೆಚ್ಚಿಬೀಳಿಸಿದೆ.
ಒಮಾನ್ ಮೂಲದ ಸಹಪೈಲಟ್‌ನಿಂದ ಇರಿತಕ್ಕೊಳಗಾದ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಕೈ-ಕಾಲು, ಎದೆ, ಹೊಟ್ಟೆಗೆ ಗಂಭೀರ ಗಾಯವಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಮಚ್ಚರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುರುವಾರ ರಾತ್ರಿ ಸೌದಿ ಅರೇಬಿಯಾದಿಂದ ಅಬುಧಾಬಿಯ ಸೇನಾ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ತಜ್ಞ ವೈದ್ಯರು ಹೆಚ್ಚಿನ ನಿಗಾ ವಹಿಸಿದ್ದು, ಮಚ್ಚರ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಚ್ಚರ್ ಅವರನ್ನು ಭೇಟಿಯಾಗಲು ಕುಟುಂಬಸ್ಥರಿಗೆ ಅನುಮತಿ ನೀಡಲಾಗಿದೆ. ಮಚ್ಚರ್ ಆರೋಗ್ಯದ ಕ್ಷಣ ಕ್ಷಣದ ಮಾಹಿತಿಯನ್ನು ಕುಟುಂಬಸ್ಥರಿಗೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
24 ಮಕ್ಕಳು ಸೇರಿದಂತೆ 170ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ 'ಫ್ಲೈ ದುಬೈ' ವಿಮಾನವನ್ನು ಪತನಗೊಳಿಸಲು ಒಮಾನ್ ಮೂಲದ ಸಹಪೈಲಟ್ ಯತ್ನಿಸಿದ್ದ. ಅದನ್ನು ತಡೆಯಲು ಬಂದ ಕ್ಯಾಪ್ಟನ್ ಮಚ್ಚರ್ ಅವರಿಗೆ ಆತ ಚಾಕುವಿನಿಂದ ಇರಿದಿದ್ದ. ಈ ವೇಳೆ ವಿಮಾನವು ಎರಡೇ ನಿಮಿಷದಲ್ಲಿ 34 ಸಾವಿರ ಅಡಿ ಎತ್ತರದಿಂದ 15 ಸಾವಿರಕ್ಕೆ ಇಳಿದಿತ್ತು.
ಗಾಯಗಳಾಗಿದ್ದರೂ ಮಚ್ಚರ್ ಅವರು ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡಿದ್ದರು. ಇದರಿಂದಾಗಿ ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರು ಒಳಪ್ರವೇಶಿಸಿ ಸಹ ಪೈಲಟ್‌ನನ್ನು ನಿಯಂತ್ರಿಸಲು ಸಾಧ್ಯವಾಗಿತ್ತು.

