HEALTH TIPS

ಧರ್ಮೇಂದ್ರ ಪ್ರಧಾನ್‌ರಂತೆ ಜ್ಞಾನೇಶ್ ರಾಜೀನಾಮೆ ಕೊಡ್ತಾರಾ? ಸಿಇಒ ವಜಾ ಅಸಾಧ್ಯವೇ?

ನವದೆಹಲಿ:  ಪರೀಕ್ಷಾ ಅಕ್ರಮಗಳ ವಿರುದ್ಧ ಪ್ರತಿಭಟನೆಗಳು ಜೋರಾದ ಬೆನ್ನಲ್ಲೇ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ದೇಶದಾದ್ಯಂತ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕೂಗು ಪ್ರತಿಧ್ವನಿಸುತ್ತಿದೆ. 


ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ರಾಜಕೀಯ ಪಕ್ಷಗಳು ಸೇರಿದಂತೆ ಅನೇಕ ಸಂಘಟನೆಗಳು ಪಟ್ಟು ಹಿಡಿದಿವೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಬೃಹತ್ ಪ್ರತಿಭಟನೆ ನಡೆಸುತ್ತಿವೆ.

ಆದರೆ, ಒಬ್ಬ ಕೇಂದ್ರ ಸಚಿವ ರಾಜೀನಾಮೆ ನೀಡುವುದಕ್ಕೂ, ಸಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕುವುದಕ್ಕೂ ತುಂಬಾ ವ್ಯತ್ಯಾಸವಿದೆ.

ಜ್ಞಾನೇಶ್ ವಿರುದ್ಧ ಇರುವ ಆರೋಪಗಳೇನು?

ಆಂತರಿಕ ಭಿನ್ನಾಭಿಪ್ರಾಯಗಳು: ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಸಿಇಸಿ ಜ್ಞಾನೇಶ್ ಕುಮಾರ್ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ಕನಿಷ್ಠ 14 ಸಂದರ್ಭಗಳಲ್ಲಿ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಮತದಾರರ ನೋಂದಣಿ ತಂತ್ರಾಂಶ (ECINET): 'ಇಸಿಐನೆಟ್' ತಂತ್ರಾಂಶದ ಸಂಪೂರ್ಣ ನಿಯಂತ್ರಣವನ್ನು ಸಿಇಸಿ ತಮ್ಮ ಬಳಿಯೇ ಇಟ್ಟುಕೊಂಡು, ರಾಜ್ಯಗಳ ಮತದಾರರ ನೋಂದಣಿ ಅಧಿಕಾರಿಗಳ (ಇಒಆರ್‌) ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂಬ ಆರೋಪವಿದೆ. ಇದು 1950ರ ಜನಪ್ರತಿನಿಧಿ ಕಾಯ್ದೆಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ವಾದಿಸುತ್ತಿದ್ದಾರೆ.

ಫಾರ್ಮ್ 6 ಮಾರ್ಪಾಡು: ಇತರೆ ಆಯುಕ್ತರ ಆಕ್ಷೇಪದ ಹೊರತಾಗಿಯೂ ಫಾರ್ಮ್ 6 ಅನ್ನು ಬದಲಾಯಿಸಲಾಗಿದೆ ಮತ್ತು ಅನುಮೋದನೆ ಇಲ್ಲದೆ ಕೆಲಸದ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಆದರೆ ಈ ಎಲ್ಲಾ ಆರೋಪಗಳನ್ನು ಚುನಾವಣಾ ಆಯೋಗವು ತಳ್ಳಿಹಾಕಿದ್ದು, ಸಂಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಸಹಜ ಮತ್ತು ನಿರ್ಧಾರಗಳನ್ನು ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಪ್ರತಿಭಟನಾಕಾರರ ಮತ್ತು ವಿಪಕ್ಷಗಳ ಬೇಡಿಕೆಗಳೇನು?

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಎಐಎಸ್‌ಎ, ಎಸ್‌ಎಫ್‌ಐ ನಂತಹ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಅವರ ಮುಖ್ಯ ಬೇಡಿಕೆಗಳು;

*ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ಸಿಇಒ ಹುದ್ದೆಗೆ ರಾಜೀನಾಮೆ ನೀಡಬೇಕು.

* 'ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು.

* ಜನವರಿ 2025ರ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಬೇಕು.

* ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಗೆ ಸೂಕ್ತ ತಿದ್ದುಪಡಿ ತರಬೇಕು.

ಧರ್ಮೇಂದ್ರ ಪ್ರಧಾನ್‌ರಂತೆ ಸಿಇಒ ರಾಜೀನಾಮೆ ನೀಡುವುದು ಸುಲಭವೇ?

ಇಲ್ಲ. ಕೇಂದ್ರ ಸಚಿವರನ್ನು ರಾಜೀನಾಮೆ ನೀಡುವಂತೆ ಮಾಡುವುದಕ್ಕೂ, ಸಿಇಸಿ ಅವರನ್ನು ಹುದ್ದೆಯಿಂದ ತೆಗೆದುಹಾಕುವುದಕ್ಕೂ ವ್ಯತ್ಯಾಸವಿದೆ.

ಧರ್ಮೇಂದ್ರ ಪ್ರಧಾನ್ ಅವರು ಸರ್ಕಾರದ ಒಬ್ಬ ಸಚಿವರಾಗಿದ್ದರು. ಪ್ರಧಾನಿಯವರ ಸಲಹೆಯಂತೆ ರಾಷ್ಟ್ರಪತಿಗಳು ಸಚಿವರನ್ನು ವಜಾಗೊಳಿಸಬಹುದು ಅಥವಾ ರಾಜಕೀಯ ಒತ್ತಡದಿಂದ ರಾಜೀನಾಮೆ ಪಡೆಯಬಹುದು. ಸಚಿವರ ಹುದ್ದೆಯು ಸರ್ಕಾರ ಮತ್ತು ಆಡಳಿತ ಪಕ್ಷದ ರಾಜಕೀಯ ನಿರ್ಧಾರಗಳಿಗೆ ಒಳಪಟ್ಟಿರುತ್ತಾರೆ.

ಆದರೆ ಜ್ಞಾನೇಶ್ ಕುಮಾರ್ ಅವರು ಸ್ವಾಯತ್ತ ಸಾಂವಿಧಾನಿಕ ಹುದ್ದೆಯವಲ್ಲಿರುವವರು. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ತೆಗೆದುಹಾಕುವ ಸಂಸದೀಯ ವಜಾ ಪ್ರಕ್ರಿಯೆ ಮೂಲಕ ಮಾತ್ರ ಇವರ ಹುದ್ದೆಯನ್ನು ವಜಾಗೊಳಿಸಲು ಸಾಧ್ಯ ಎಂದು ಡಿಎನ್‌ಎ ವೆಬ್‌ಸೈಟ್‌ ವರದಿ ಮಾಡಿದೆ.

ಸಿಇಒ ಅವರನ್ನು ಹುದ್ದೆಯಿಂದ ತೆಗೆದುಹಾಕುವುದು ಏಕೆ ಕಷ್ಟ?

ಸಂವಿಧಾನದ ವಿಧಿ 324 ಮತ್ತು 2023ರ ಚುನಾವಣಾ ಆಯುಕ್ತರ ಕಾಯ್ದೆಯ ಸೆಕ್ಷನ್ 11(2) ಪ್ರಕಾರ, ಸಿಇಸಿ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ತೆಗೆದುಹಾಕುವ ಮಾದರಿಯಲ್ಲೇ ಹುದ್ದೆಯಿಂದ ವಜಾಗೊಳಿಸಬೇಕಾಗುತ್ತದೆ. ಇದು ಅತ್ಯಂತ ಜಟಿಲವಾದ ಪ್ರಕ್ರಿಯೆಯಾಗಿದೆ.

ಮೊದಲ ಹಂತ: ದೋಷಾರೋಪಣೆ ನೋಟಿಸ್

ಸಂಸತ್ತಿನ ಲೋಕಸಭೆಯಲ್ಲಿ ಕನಿಷ್ಠ 100 ಸದಸ್ಯರು ಅಥವಾ ರಾಜ್ಯಸಭೆಯಲ್ಲಿ 50 ಸದಸ್ಯರು ಸಹಿ ಮಾಡಿದ ನೋಟಿಸ್ ಅನ್ನು ಸಭಾಪತಿಗಳಿಗೆ ನೀಡಬೇಕು.

ಎರಡನೇ ಹಂತ: ಸಭಾಪತಿಯವರ ತೀರ್ಮಾನ ಮತ್ತು ತನಿಖೆ

ಸಭಾಪತಿಗಳು ಈ ನೋಟಿಸ್ ಅನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು. ಸ್ವೀಕರಿಸಿದರೆ, ಆರೋಪಗಳ ತನಿಖೆಗೆ 3 ಸದಸ್ಯರ ಸಮಿತಿಯನ್ನು ರಚಿಸಲಾಗುತ್ತದೆ.

ಮೂರನೇ ಹಂತ: ಸಂಸತ್ತಿನಲ್ಲಿ ವಿಶೇಷ ಮೆಜಾರಿಟಿ ಮತದಾನ

ತನಿಖೆಯಲ್ಲಿ ಆರೋಪ ಸಾಬೀತಾದರೆ, ಸಂಸತ್ತಿನ ಉಭಯ ಸೌಧಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಮತದಾನ ನಡೆಯಬೇಕು. ಹಾಜರಿದ್ದು ಮತ ಚಲಾಯಿಸುವ ಸದಸ್ಯರಲ್ಲಿ 2/3ರಷ್ಟು ಬೆಂಬಲ ಸಿಗಬೇಕು.

ನಾಲ್ಕನೇ ಹಂತ: ರಾಷ್ಟ್ರಪತಿಗಳ ಆದೇಶ

ಉಭಯ ಸದನಗಳಲ್ಲಿ ಪ್ರಸ್ತಾಪ ಅಂಗೀಕಾರಗೊಂಡ ನಂತರವೇ ರಾಷ್ಟ್ರಪತಿಗಳು ಸಿಇಸಿ ಅವರನ್ನು ಹುದ್ದೆಯಿಂದ ವಜಾಗೊಳಿಸುವ ಆದೇಶ ಹೊರಡಿಸಬಹುದು.

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಇದು ಸಾಧ್ಯವೇ?

ಪ್ರಸ್ತುತ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತವನ್ನು ಹೊಂದಿದೆ. ಸಂಸತ್ತಿನಲ್ಲಿ 2/3 ರಷ್ಟು ವಿಶೇಷ ಬಹುಮತವನ್ನು ಪಡೆಯುವುದು ವಿರೋಧ ಪಕ್ಷಗಳಿಗೆ ಅಸಾಧ್ಯದ ಮಾತು. ಜೊತೆಗೆ, ಲೋಕಸಭಾ ಸಭಾಪತಿಗಳು ಆರಂಭದಲ್ಲೇ ಇಂತಹ ದೋಷಾರೋಪಣೆ ನೋಟಿಸ್‌ಗಳನ್ನು ತಿರಸ್ಕರಿಸುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಕೇಂದ್ರ ಸರ್ಕಾರವು ಸ್ವತಃ ಜ್ಞಾನೇಶ್ ಕುಮಾರ್ ಅವರಿಗೆ ರಾಜೀನಾಮೆ ನೀಡುವಂತೆ ಅನಧಿಕೃತ ಸೂಚನೆ ನೀಡಿದರೆ ಮಾತ್ರ ಅವರು ಹುದ್ದೆಯಿಂದ ಕೆಳಗಿಳಿಯಬಹುದು. ಇಲ್ಲವಾದಲ್ಲಿ, ಸಾಂವಿಧಾನಿಕ ನಿಯಮಗಳು ಮತ್ತು ಸಂಸತ್ತಿನ ಪ್ರಸ್ತುತ ಸಂಖ್ಯಾಬಲದ ಆಧಾರದ ಮೇಲೆ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವುದು ಕೇವಲ ಕಾಗದದ ಮೇಲಿನ ಪ್ರಕ್ರಿಯೆಯಾಗಿಯೇ ಉಳಿಯುತ್ತದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries