ರಮಲ್ಲ: ಇಸ್ರೇಲ್ ನೊಂದಿಗೆ ಸಂಘರ್ಷಗಳಲ್ಲಿ ಮೃತಪಟ್ಟ ಫೆಲಸ್ತೀನಿಯನ್ನರಿಗಾಗಿ ಪಶ್ಚಿಮ ದಂಡೆಯಲ್ಲಿ ನಿರ್ಮಿಸಲಾಗಿದ್ದ ಸ್ಮಾರಕಗಳನ್ನು ಇಸ್ರೇಲ್ ಮಿಲಿಟರಿ ಬುಧವಾರ ಧ್ವಂಸಗೊಳಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಜನಿನ್ ಪ್ರದೇಶದಲ್ಲಿ ಸೇನಾ ಪಡೆಗಳು ಕಲ್ಲಿನ ಸ್ಮಾರಕವನ್ನು ಧ್ವಂಸಗೊಳಿಸಿದ್ದಲ್ಲದೆ, ಸ್ಮರಣಾರ್ಥ ಹಾಕಲಾಗಿದ್ದ ಪೋಸ್ಟರ್ ಗಳನ್ನು ಹರಿದು ಹಾಕಿವೆ.
ಯಾಬಾದ್ ಪಟ್ಟಣದಲ್ಲಿ ಸ್ಮಾರಕವನ್ನು ಧ್ವಂಸಗೊಳಿಸಲಾಗಿದೆ ಮತ್ತು ಜನಿನ್ ನಗರದ ಹಲವು ಸ್ಥಳಗಳಲ್ಲಿದ್ದ ವಿವಿಧ ಹುತಾತ್ಮರ ಫೋಟೋಗಳನ್ನು ತೆರವುಗೊಳಿಸಲಾಗಿದೆ. ನಾಬ್ಲಸ್ ನಗರದ ಮೇಲೆಯೂ ದಾಳಿ ನಡೆಸಿ ನಗರದ ವಿವಿಧ ಭಾಗಗಳಲ್ಲಿದ್ದ ಹುತಾತ್ಮರ ಐದು ಸ್ಮಾರಕಗಳನ್ನು ಧ್ವಂಸಗೊಳಿಸಿವೆ ಮತ್ತು ಹಲವಾರು ನಿವಾಸಿಗಳನ್ನು ಬಂಧಿಸಿವೆ ಎಂದು ಉಪ ಮೇಯರ್ ಇಯಾದ್ ಬಕೀರ್ ಎಎಫ್ಪಿಗೆ ತಿಳಿಸಿದ್ದಾರೆ.
'ಭಯೋತ್ಪಾದಕರ ಸ್ಮಾರಕಗಳನ್ನು ಧ್ವಂಸಗೊಳಿಸಲು' ಪಶ್ಚಿಮ ದಂಡೆಯಾದ್ಯಂತ ಸೇನೆಯು ಈ ಕ್ರಮ ಕೈಗೊಂಡಿದೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರರೊಬ್ಬರು ತಿಳಿಸಿರುವುದಾಗಿ ಎಎಫ್ಪಿ ಸುದ್ದಿಸಂಸ್ಥೆ ಮಾಹಿತಿ ನೀಡಿದೆ.



