ಕಾಸರಗೋಡು: ಭೂಮಾಲಿಕತ್ವದ ಬಗೆಗಿನ ಅನಿಶ್ಚಿತಾವಸ್ಥೆ ದೂರಮಾಡುವುದರ ಜತೆಗೆ ಭೂರಹಿತರ ಸ್ವಂತ ಭೂಮಿ ಹೊಂದುವ ಕನಸನ್ನು ಸರ್ಕಾರ ಸಾಕಾರಗೊಳಿಸಲು ನಿರಂತರ ಪ್ರಯತ್ನ ನಡೆಸಲಿರುವುದಾಗಿ ಕೇರಳ ಸ್ಥಳೀಯಾಡಳಿತ ಹಾಗೂ ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಾಜಿ ತಿಳಿಸಿದ್ದಾರೆ.
ಅವರು ಸೋಮವಾರ ಕಾಸರಗೋಡು ನಗರಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 'ಹಕ್ಕುಪತ್ರ ವಿತರಣಾ ಮೇಳ'ಉದ್ಘಾಟಿಸಿ ಮಾತನಾಡಿದರು. ಭೂ ಒಡೆತನದ ಹಕ್ಕುಪತ್ರಗಳ ವಿತರಣೆಯು ಸರ್ಕಾರದ ಅತ್ಯಂತ ಮಹತ್ವದ ಜವಾಬ್ದಾರಿಗಳಲ್ಲಿ ಒಂದಾಗಿದೆ. ವಸತಿ ಯೋಜನೆಗಳ ಅಡಿಯಲ್ಲಿ ಭೂ ಒಡೆತನದ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳ ಭೂಮಿಯ ಹಕ್ಕುಪತ್ರ ವಿತರಣೆಯಲ್ಲಿ ಉಂಟಾಗುವ ವಿಳಂಬಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 289 ಭೂ ಹಕ್ಕುಪತ್ರ ವಿತರಣೆ:
ಕೇರಳ ಸರ್ಕಾರದ 100 ದಿನಗಳ ಕ್ರಿಯಾ ಯೋಜನೆಯ ಅಂಗವಾಗಿ ಕಂದಾಯ ಇಲಾಖೆಯ ಆಶ್ರಯದಲ್ಲಿ, ಜಿಲ್ಲೆಯಲ್ಲಿ 289 ಹಕ್ಕುಪತ್ರಗಳನ್ನು ವಿತರಿಸಲಾಯಿತು, ಇವುಗಳಲ್ಲಿ 287 ಭೂ ನ್ಯಾಯಮಂಡಳಿ ಹಕ್ಕುಪತ್ರಗಳು ಮತ್ತು ಎರಡು ನಗರಸಭೆಯ ಹಕ್ಕುಪತ್ರಗಳು ಒಳಗೊಂಡಿದೆ. ಶಾಸಕ ಕಲ್ಲಟ್ರ ಮಾಹಿನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎ.ಕೆ.ಎಂ. ಅಶ್ರಫ್, ಕೆ.ನೀಲಕಂಠನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಸರಗೋಡು ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ, ಕಾಸರಗೋಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲಕುಞÂ ಚೆರ್ಕಳ, ಮಂಜೇಶ್ವರಂ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಙಳ್, ನಗರಸಭೆಯ ವಾರ್ಡ್ ಕೌನ್ಸಿಲರ್ ಮಧುಕರ, ಆರ್.ಡಿ.ಓ.ಗಳಾದ ಎಂ.ಎಸ್. ವಿಜುಕುಮಾರ್ ಮತ್ತು ಪಿ.ಸುದೀಪ್, ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಪಿ.ಕೆ. ಫೈಸಲ್, ಎ.ಅಬ್ದುಲ್ ರೆಹಮಾನ್, ಸಿ.ಪಿ. ಬಾಬು ಮತ್ತು ರಾಘವ ಚೇರಾಲ್ ಉಪಸ್ಥಿತರಿದ್ದರು. ಕಾಸರಗೋಡು ಜಿಲ್ಲಾಧಿಕಾರಿ ಶ್ರೀಧನ್ಯಾಸುರೇಶ್ ಸ್ವಾಗತಿಸಿದರು. ಎಡಿಎಂ ಪಿ.ಉದಯಕುಮಾರ್ ವಂದಿಸಿದರು.



