HEALTH TIPS

ಸಿಇಸಿ ಜ್ಞಾನೇಶ್‌ ರಾಜೀನಾಮೆಗೆ ಒತ್ತಾಯ: ಮುಂಬೈನಲ್ಲಿ ವಿಪಕ್ಷಗಳ ಶಕ್ತಿ ಪ್ರದರ್ಶನ

 ನವದೆಹಲಿ: ಸಿಇಸಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ನವದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನವೂ ಮುಂದುವರಿದಿದೆ. ಈ ನಡುವೆ, ಮುಂಬೈನಲ್ಲಿ ಭಾನುವಾರ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಮತ್ತು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.


ಈ ಸಮಾವೇಶದಲ್ಲಿ ಮಾತನಾಡಿದ ಉದ್ಧವ್‌, 'ಸಿಇಸಿ ಜ್ಞಾನೇಶ್‌ ಕುಮಾರ್‌ ಅವರನ್ನು ಆಡಳಿತಾರೂಢ ಬಿಜೆಪಿಯ 'ಅಸ್ತ್ರ' ಎಂದು ಆರೋಪಿಸಿದರು. 'ಮತದಾರರ ಪಟ್ಟಿಯಿಂದ ಬಾಂಗ್ಲಾದೇಶಿಯರನ್ನು ಹೊರಗಿಡಲು ಎಸ್‌ಐಆರ್‌ ಪ್ರಕ್ರಿಯೆ ನಡೆಸಲಾಗಿದ್ದರೆ, ದೇಶದಲ್ಲಿ ಅಕ್ರಮವಾಗಿ ನೆಲಸಿರುವ ಎಷ್ಟು ಬಾಂಗ್ಲಾ ಪ್ರಜೆಗಳನ್ನು ಸರ್ಕಾರ ಪತ್ತೆಹಚ್ಚಿದೆಯೇ' ಎಂದು ಪ್ರಶ್ನಿಸಿದರು.

ದೇಶದಲ್ಲಿ ಇನ್ನು ಮುಂದೆ ನಡೆಯಲಿರುವ ಚುನಾವಣೆಗಳನ್ನು ಮತಪತ್ರದ ಮೂಲಕವೇ ನಡೆಸಬೇಕು ಎಂದು ರಾಜ್‌ ಠಾಕ್ರೆ ಆಗ್ರಹಿಸಿದರು. ಅಲ್ಲದೆ, ಮಹಾರಾಷ್ಟ್ರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ರದ್ದುಗೊಳಿಸುವಂತೆಯೂ ಒತ್ತಾಯಿಸಿದರು. ಕಾಂಗ್ರೆಸ್ ನಾಯಕರಾದ ಬಾಳಾಸಾಹೇಬ್ ಥೋರಟ್ ಮತ್ತು ವಿಜಯ್ ವಡೆಟ್ಟಿವಾರ್ ಹಾಗೂ ಎನ್‌ಸಿಪಿಯ (ಎಸ್‌ಪಿ)‌ ಜಯಂತ್ ಪಾಟೀಲ್, ಶಶಿಕಾಂತ್ ಶಿಂದೆ, ಜಿತೇಂದ್ರ ಅವ್ಹಾದ್ ಮತ್ತು ಅನಿಲ್ ದೇಶಮುಖ್ ಭಾಗವಹಿಸಿದರು.

ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ತಮ್ಮ ತಮ್ಮ ಪಕ್ಷದ ಬಾವುಟಗಳನ್ನು ಹಿಡಿಯುವ ಬದಲು, ತ್ರಿವರ್ಣ ಧ್ವಜವನ್ನು ಮಾತ್ರ ಪ್ರದರ್ಶಿಸ
ಬೇಕೆಂದು ಸೂಚನೆ ನೀಡಲಾಗಿತ್ತು. ಸಿಇಸಿ ರಾಜೀನಾಮೆಗೆ ಒತ್ತಾಯಿಸಿ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಿಜೆಪಿಯಿಂದ ಎರಡು ದಿನಗಳ ಹಿಂದೆ 'ಜೈಲ್ ಭರೋ' ಆಂದೋಲನ ನಡೆದಿತ್ತು.

ನರಿಗಳ ಮೆರವಣಿಗೆ: ಶೆಲಾರ್‌ ಲೇವಡಿ

ಮಹಾರಾಷ್ಟ್ರ ಸಚಿವ ಹಾಗೂ ಬಿಜೆಪಿ ನಾಯಕ ಆಶಿಶ್ ಶೇಲಾರ್ ಅವರು, ಸಿಇಸಿ ವಿರುದ್ಧ ಮುಂಬೈನಲ್ಲಿ ನಡೆದ ಪ್ರತಿಭಟನೆಯನ್ನು 'ನರಿಗಳ ಮೆರವಣಿಗೆ' ಎಂದು ಲೇವಡಿ ಮಾಡಿದ್ದಾರೆ. 'ವಿಶ್ವ ಪ್ರಾಣಿ ದಿನದಂದು (ಅ.4) ನಡೆದ ರ್‍ಯಾಲಿ ಮತ್ತು ಅದಕ್ಕೆ ನೀಡಿರುವ ಹೆಸರನ್ನು ನೋಡಿದಾಗ, ಇದು 'ಸಿಂಹ ಗರ್ಜನೆ'ಯ ಮೆರವಣಿಗೆಯಲ್ಲ, ಬದಲಾಗಿ 'ನರಿಗಳ ಮೆರವಣಿಗೆ' ಎಂದು ನನಗೆ ಅನಿಸುತ್ತಿದೆ. ತಮ್ಮ ಕೈಗೆಟುಕದ 'ದ್ರಾಕ್ಷಿ ಹುಳಿ' ಎಂದು ಹೇಳುವ ನರಿಗಳಂತೆ ಇವರು ವರ್ತಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಆಗದ್ದಕ್ಕೆ ಈಗ ಚುನಾವಣಾ ಆಯೋಗವನ್ನು ದೂಷಿಸುತ್ತಿದ್ದಾರೆ. ಇದು ಕುತಂತ್ರಿಗಳ ಕೂಟ' ಎಂದು ಟೀಕಿಸಿದ್ದಾರೆ.

ಜಂತರ್‌ ಮಂತರ್‌ನತ್ತ ನುಗ್ಗಲು ಯತ್ನ

ನವದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನವೂ ಮುಂದುವರಿದಿದೆ. ಜಂತರ್‌ ಮಂತರ್‌ನತ್ತ ತೆರಳಲು ಪ್ರಯತ್ನಿಸಿದ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ಕಾರ್ಯಕರ್ತರನ್ನು ಪೊಲೀಸರು ಭಾನುವಾರ ತಡೆದರು. ಅಶೋಕ ರಸ್ತೆಯ ಆಂಧ್ರ ಭವನ ವೃತ್ತದಿಂದ
ಪ್ರತಿಭಟನಕಾರರು ಜಂತರ್ ಮಂತರ್‌ನತ್ತ ಮೆರವಣಿಗೆ ಆರಂಭಿಸಿದರು. ಭಾರಿ ಪೊಲೀಸ್ ಉಪಸ್ಥಿತಿಯ ನಡುವೆಯೂ ಘೋಷಣೆಗಳನ್ನು ಕೂಗುತ್ತಾ ನಿಗದಿತ ಪ್ರತಿಭಟನಾ ಸ್ಥಳವನ್ನು ತಲುಪಲು ಯತ್ನಿಸಿದರು.

ಬ್ಯಾರಿಕೇಡ್‌ಗಳನ್ನು ದಾಟದಂತೆ ಪೊಲೀಸರು ತಡೆಯಲು ಯತ್ನಿಸಿದಾಗ
ಪ್ರತಿಭಟನಕಾರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಅಲ್ಪಕಾಲ ಜಟಾಪಟಿ ನಡೆಯಿತು. ಎಐಎಸ್‌ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ಅವರು ಬ್ಯಾರಿಕೇಡ್‌ ದಾಟಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದರು.

ಶನಿವಾರ ಇಲ್ಲಿ 150ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೂ, ಭಾನುವಾರ ಮತ್ತೆ ಪ್ರತಿಭಟನಕಾರರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಶುಕ್ರವಾರ ಮಧ್ಯ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರರು ಮತ್ತು ರಾಜಕೀಯ ನಾಯಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.

'ಖಾಸಗಿ ವಾಹನದಲ್ಲಿ ಕರೆದೊಯ್ದರು': ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ, ನೇಹಾ ಬೋರಾ ಅವರನ್ನು ದೆಹಲಿ ಪೊಲೀಸರು ಅಧಿಕೃತ ನಂಬರ್ ಪ್ಲೇಟ್ ಇಲ್ಲದ ಖಾಸಗಿ ವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಎಐಎಸ್‌ಎ ಸದಸ್ಯರು ಆರೋಪಿಸಿದ್ದಾರೆ. ಬೋರಾ ಅವರನ್ನು ಕರೆದೊಯ್ಯುವಾಗ ವಾಹನದಲ್ಲಿ ಯಾವುದೇ ಮಹಿಳಾ ಪೊಲೀಸ್ ಅಧಿಕಾರಿ ಇರಲಿಲ್ಲ. ಇದು ಕಾರ್ಯವಿಧಾನದ ಉಲ್ಲಂಘನೆ ಎಂದು ದೂರಿದ್ದಾರೆ. ಈ ಆರೋಪಗಳ ಕುರಿತು ದೆಹಲಿ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ಸುಪ್ರೀಂ'ನಲ್ಲಿ ವಿಚಾರಣೆ ಇಂದು

ನವದೆಹಲಿ: ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಹಾಗೂ ಇತರ ಇಬ್ಬರು ಚುನಾವಣಾ ಆಯುಕ್ತರ ಅನುಮೋದನೆಯಿಲ್ಲದೆ ಚುನಾವಣಾ ಆಯೋಗವು ತೆಗೆದುಕೊಂಡ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಲಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಮತ್ತು ವಿ. ಮೋಹನಾ ಅವರ ಪೀಠವು ವಿಚಾರಣೆ ನಡೆಸಲಿದೆ. ಪಾಟ್ನಾ ನಿವಾಸಿ ರಾಕೇಶ್ ಕುಮಾರ್ ಸಿಂಗ್ ಮತ್ತು ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಈ ಅರ್ಜಿಗಳನ್ನು ಸಲ್ಲಿಸಿದ್ದು, ತಮ್ಮ ಇಬ್ಬರು ಸಹೋದ್ಯೋಗಿಗಳ ಒಪ್ಪಿಗೆಯಿಲ್ಲದೆ ಜ್ಞಾನೇಶ್‌ ಕುಮಾರ್ ಕೈಗೊಂಡ ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ.

ಚಿರಾಗ್‌ ಪಾಸ್ವಾನ್‌, ಕೇಂದ್ರ ಸಚಿವಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲ ಅಂಶಗಳ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಜನರಿಗೆ ಇನ್ನೂ ಏನಾದರೂ ಅನುಮಾನಗಳಿದ್ದರೆ, ಅವುಗಳನ್ನು ಬಗೆಹರಿಸುವುದು ಆಯೋಗದ ಜವಾಬ್ದಾರಿ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries