HEALTH TIPS

ಹೌತಿ ದಾಳಿಗಳ ಭೀತಿ | ಸೌದಿ ಯುವರಾಜನಿಗೆ ಬಿಗಿ ಭದ್ರತೆ: ವಾಲ್ ಸ್ಟ್ರೀಟ್ ಜರ್ನಲ್ ವರದಿ

ರಿಯಾದ್: ಯೆಮೆನ್‌ ನ ಹೌತಿ ಬಂಡುಕೋರರ ಕ್ಷಿಪಣಿ ದಾಳಿಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರನ್ನು ಬಿಗಿ ಭದ್ರತೆಯಿರುವ ಅರಮನೆಗಳ ನಡುವೆ ಸ್ಥಳಾಂತರಿಸಲಾಗುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. 


41 ವರ್ಷದ ಯುವರಾಜರು ರಾಷ್ಟ್ರೀಯ ರಕ್ತದಾನ ಅಭಿಯಾನದ ಅಂಗವಾಗಿ ರಕ್ತದಾನ ಮಾಡಿದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರ ಚಲನವಲನಗಳ ಬಗ್ಗೆ ಮಾಹಿತಿ ಹೊಂದಿರುವ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ಈ ವರದಿ ಪ್ರಕಟಿಸಿದೆ. ಬಂಕರ್‌ಗಳು ಹಾಗೂ ಬಿಗಿ ಭದ್ರತಾ ವ್ಯವಸ್ಥೆ ಹೊಂದಿರುವ ಅರಮನೆಗಳ ನಡುವೆ ಅವರನ್ನು ಸ್ಥಳಾಂತರಿಸಲಾಗುತ್ತಿದ್ದು, ರಕ್ಷಣೆಗೆ ವಿಶೇಷ ಭದ್ರತಾ ತಂಡವನ್ನೂ ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

ರಿಯಾದ್ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ

ಕಳೆದ ಶನಿವಾರ ಸೌದಿ ಅರೇಬಿಯಾ ಕಳೆದ ಒಂದು ದಶಕದಲ್ಲೇ ಅತ್ಯಂತ ಭೀಕರ ದಾಳಿಯನ್ನು ಎದುರಿಸಿತು. ರಾಜಧಾನಿ ರಿಯಾದ್‌ ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.

ಇರಾನ್‌ ಗೆ ಸಂಬಂಧಿಸಿದ ಸಂಘರ್ಷಗಳ ಸಂದರ್ಭದಲ್ಲಿ ಅಮೆರಿಕ ಅಥವಾ ಅದರ ಗಲ್ಫ್ ಮಿತ್ರರಾಷ್ಟ್ರಗಳ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಇದಾಗಿದೆ ಎಂದು ಘಟನೆಯ ಬಗ್ಗೆ ಮಾಹಿತಿ ಹೊಂದಿರುವ ಅಧಿಕಾರಿಗಳನ್ನು ಉಲ್ಲೇಖಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಸ್ಫೋಟದಲ್ಲಿ ಕೈ ಕತ್ತರಿಸಲ್ಪಟ್ಟಿದ್ದರಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾದ 28 ವರ್ಷದ ಈಜಿಪ್ಟ್ ಮೂಲದ ವಿಮಾನ ಸಿಬ್ಬಂದಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಅಂಗಾಂಗಗಳನ್ನು ಕಳೆದುಕೊಂಡ ಸಂತ್ರಸ್ತರಲ್ಲಿ ಅವರೂ ಒಬ್ಬರಾಗಿದ್ದಾರೆ.

ವಾರಾಂತ್ಯದ ಕ್ಷಿಪಣಿ ದಾಳಿಯ ಬಳಿಕ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಕಳೆದ ಐದು ದಿನಗಳಲ್ಲಿ ವಿಮಾನ ನಿಲ್ದಾಣದ ಮೇಲೆ ನಾಲ್ಕು ಬಾರಿ ದಾಳಿ ನಡೆದಿದೆ ಎಂದು ವರದಿ ಹೇಳಿದೆ.

ದಾಳಿಗಳ ತೀವ್ರತೆಯನ್ನು ಉಲ್ಲೇಖಿಸಿರುವ ಸೌದಿ ಇಂಧನ ಸಚಿವ ರಾಜಕುಮಾರ ಅಬ್ದುಲ್ ಅಝೀಝ್ ಬಿನ್ ಸಲ್ಮಾನ್, ಸೌದಿ ಅರೇಬಿಯದ ಪ್ರತಿಕ್ರಿಯೆಯೂ ಅಷ್ಟೇ ಗಂಭೀರವಾಗಿರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೌತಿಗಳ ವಿರುದ್ಧ ಸೌದಿ ಅರೇಬಿಯ ನಡೆಸುವ ದಾಳಿಯಲ್ಲಿ ಅಮೆರಿಕ ಭಾಗವಹಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಿತ್ರರಾಷ್ಟ್ರಗಳೂ ಸೌದಿ ಅರೇಬಿಯಕ್ಕೆ ಬೆಂಬಲ ಸೂಚಿಸಿವೆ ಎಂದು ವರದಿ ತಿಳಿಸಿದೆ.

ಕದನ ವಿರಾಮ ಉಲ್ಲಂಘನೆ; ಮತ್ತೆ ಸಂಘರ್ಷ

ಸೌದಿ ಅರೇಬಿಯ ಮತ್ತು ಹೌತಿ ಬಂಡುಕೋರರ ನಡುವಿನ ಸಂಘರ್ಷ 2015ರಲ್ಲಿ ಆರಂಭವಾಯಿತು. ಆಗ ಸೌದಿ ಅರೇಬಿಯಾ ಯೆಮೆನ್‌ ನ ಅಂತರ್ಯುದ್ಧದಲ್ಲಿ ಅಲ್ಲಿನ ಸರ್ಕಾರದ ಪರವಾಗಿ ಹಸ್ತಕ್ಷೇಪ ಮಾಡಿತ್ತು. 2022ರಲ್ಲಿ ದುರ್ಬಲ ಕದನ ವಿರಾಮ ಏರ್ಪಟ್ಟಿದ್ದರೂ, ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಈ ವರ್ಷದ ಜುಲೈನಲ್ಲಿ ಒಪ್ಪಂದ ಮುರಿದುಬಿದ್ದಿದೆ ಎಂದು ವರದಿ ತಿಳಿಸಿದೆ.

ಇರಾನ್‌ ನಿಂದ ಬಂದ ವಿಮಾನವೊಂದು ಸನಾ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸಿದಾಗ ಸೌದಿ ಪಡೆಗಳು ಗುಂಡಿನ ದಾಳಿ ನಡೆಸಿವೆ ಎಂದು ಆರೋಪಿಸಿದ ಬಳಿಕ ಹೌತಿಗಳು ಮತ್ತೆ ದಾಳಿಗಳನ್ನು ಆರಂಭಿಸಿದ್ದಾರೆ.

ಹೌತಿಗಳಿಗೆ ಇರಾನ್ ಬೆಂಬಲ ನೀಡುತ್ತಿದ್ದು, ಈ ಪ್ರದೇಶದಲ್ಲಿ ಇರಾನ್‌ನ ಪ್ರಮುಖ ಸಶಸ್ತ್ರ ಮಿತ್ರಪಡೆಗಳಲ್ಲಿ ಅವು ಸೇರಿವೆ. ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ, ಅರೇಬಿಯನ್ ಪರ್ಯಾಯ ದ್ವೀಪದಲ್ಲಿನ ಬೆಳವಣಿಗೆಗಳ ಬಗ್ಗೆ ಟೆಹ್ರಾನ್ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ. ಈ ಸಂಘರ್ಷದಿಂದ ಇಸ್ರೇಲ್ ಆಡಳಿತಕ್ಕೆ ಮಾತ್ರ ಲಾಭವಾಗಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಸೌದಿ ಅರೇಬಿಯ ಮತ್ತು ಇರಾನ್‌ ನ ವಿದೇಶಾಂಗ ಸಚಿವರು ರವಿವಾರ ತಡರಾತ್ರಿ ಸಂಘರ್ಷದ ಉಲ್ಬಣದ ಕುರಿತು ಮಾತುಕತೆ ನಡೆಸಿದ್ದಾರೆ. ಮಿಲಿಟರಿ ಕ್ರಮಗಳಿಗೆ ಆದ್ಯತೆ ನೀಡುವುದರ ವಿರುದ್ಧ ಮತ್ತು ರಾಜಕೀಯ ಪರಿಸ್ಥಿತಿಯನ್ನು ನಿರ್ಲಕ್ಷಿಸುವುದರ ವಿರುದ್ಧ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಎಚ್ಚರಿಕೆ ನೀಡಿದ್ದಾರೆ. ಸೌದಿ ಅರೇಬಿಯ ಮತ್ತು ಹೌತಿಗಳ ನಡುವೆ ಸಂವಾದ ಆರಂಭಿಸಲು ಟೆಹ್ರಾನ್ ನೆರವು ನೀಡಲಿದೆ ಎಂದೂ ಅವರು ತಿಳಿಸಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries