ಕಾಸರಗೋಡು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಬೆಳ್ಳಿ ಹಬ್ಬದ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ರಜತರಂಗ ಸಮಿತಿಯ ಪದಾಧಿಕಾರಿಗಳು ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಸಮಾರಂಭ ಯಶಸ್ವಿಯಾಗಿ ನಡೆಯಲು ಅವರ ಆಶೀರ್ವಾದ ಪಡೆದರು.
‘ರಜತರಂಗ’ ಸರಣಿಯ ಅಂಗವಾಗಿ ವರ್ಷಪೂರ್ತಿ ನಡೆದ ವಿವಿಧ ಕಾರ್ಯಕ್ರಮಗಳ ಕುರಿತು ಡಾ. ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಯಕ್ಷಗಾನ ಲೋಕಕ್ಕೆ ಹೊಸ ತಲೆಮಾರನ್ನು ಪರಿಚಯಿಸುವ ಹಾಗೂ ಸೃಜನಾತ್ಮಕ ಕೊಡುಗೆ ನೀಡುವ ಇಂತಹ ಕಾರ್ಯಗಳು ಇತರರಿಗೆ ಮಾದರಿಯಾಗಿವೆ ಎಂದು ಅವರು ಹೇಳಿದರು.
‘ರಜತರಂಗ’ ಸರಣಿಯ ಸಮಾರೋಪ ಸಮಾರಂಭವು ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ನ ಕಾಸರಗೋಡು ತಾಲೂಕು ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ರಜತರಂಗ ಸಮಿತಿ ಅಧ್ಯಕ್ಷ ಡಾ. ಹರಿಕಿರಣ ಬಂಗೇರ, ಸಮಿತಿ ಪದಾಧಿಕಾರಿಗಳಾದ ಕಿಶೋರ್ ಕುಮಾರ್ ಕೂಡ್ಲು, ಅರ್ಜುನ್ ಕೂಡ್ಲು ಹಾಗೂ ಶೇಣಿ ವೇಣುಗೋಪಾಲ ಭಟ್ ಉಪಸ್ಥಿತರಿದ್ದರು.



