ಕಾಸರಗೋಡು: ನಗರ ಪೊಲೀಸ್ ಠಾಣೆ ವ್ಯಾಪ್ತಿಯ ತಳಂಗರೆ ಪ್ರದೇಶದಲ್ಲಿ ಹೊರಗಿನಿಂದ ಬೀಗ ಹಾಕಿದ್ದ ಬಾಡಿಗೆ ಮನೆಯೊಳಗೆ ಯುವಕನ ಮೃತದೇಹ ಜೀರ್ಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಳಂಗರ ಕಡವತ್ತಿನ ಬಾಡಿಗೆ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ವ್ಯಕ್ತಿ ಜೊತೆಗಿದ್ದ ಇಬ್ಬರು ನಾಪತ್ತೆಯಾಗಿದ್ದಾರೆ.
ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೊಲೆಯೆಂದು ಸಂಶಯಿಸಲಾಗಿದೆ. ಮೃತವ್ಯಕ್ತಿಯನ್ನು ಕರ್ನಾಟಕದ ದಾವಣಗೆರೆ ಮೂಲದ ನಜೀಮ್ ಎಂದು ಗುರುತಿಸಲಾಗಿದೆ. ನಜೀಮ್ ಮತ್ತು ಇತರ ಇಬ್ಬರು ಒಂದು ತಿಂಗಳ ಹಿಂದೆಯಷ್ಟೇ ಖಾಸಗಿ ವ್ಯಕ್ತಿಗೆ ಸೇರಿದ ಕಟ್ಟಡದ ಮೇಲಿನ ಮಹಡಿಯಲ್ಲಿ ಕೊಠಡಿ ಪಡೆದು ವಾಸ್ತವ್ಯ ಆರಂಭಿಸಿದ್ದರು.
ಗುರುವಾರ ಸಂಜೆ ಕೊಠಡಿಯ ಒಳಗಿನಿಂದ ದುರ್ವಾಸನೆ ವ್ಯಾಪಿಸಿರುವುದನ್ನು ಗಮನಿಸಿ ಪರಿಶೀಲಿಸಿದಾಗ, ಹೊರಗಿನಿಂದ ಬೀಗ ಹಾಕಿದ್ದ ಕೊಠಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ನಾಪತ್ತೆಯಾಗಿರುವ ನಜೀಮ್ ಸಹಚರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಪೊಲೀಸರುಕೇಸು ದಾಖಲಿಸಿಕೊಂಡಿದ್ದಾರೆ.


