ಮಂಜೇಶ್ವರ: ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಸಮಿತಿಯ ವತಿಯಿಂದ ದಸರಾ ನಾಡಹಬ್ಬದ ಆಚರಣೆಯು ಕಡಂಬಾರಿನ ಸರಕಾರಿ ಪ್ರೌಢ ಶಾಲೆಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಜರಗಿತು.
ಕಾರ್ಯಕ್ರಮದ ಅಂಗವಾಗಿ ಶಿಕ್ಷಕರಿಗಾಗಿ ಸಮೂಹ ಗೀತೆ ಹಾಗೂ ವಿದ್ಯಾರ್ಥಿಗಳಿಗಾಗಿ ಹುಲಿವೇಷ ಕುಣಿತ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳ ಆಕರ್ಷಕ ಹುಲಿವೇಷ ನೃತ್ಯ ಪ್ರೇಕ್ಷಕರ ಮನಸೂರೆಗೊಂಡರೆ, ಶಿಕ್ಷಕರ ಸಮೂಹ ಗಾಯನವು ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿತು.
ಸ್ಪರ್ಧಾ ಫಲಿತಾಂಶ:
ವಿದ್ಯಾರ್ಥಿಗಳ ಹುಲಿವೇಷ ಸ್ಪರ್ಧೆ: ಉದ್ಯಾವರ ಸರಕಾರಿ ಪ್ರೌಢ ಶಾಲೆ (ಪ್ರಥಮ), ಮೀಯಪದವು ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆ (ದ್ವಿತೀಯ) ಹಾಗೂ ಕುಂಜತ್ತೂರು ಸರಕಾರಿ ವೃತ್ತಿಪರ ಉನ್ನತ ಪ್ರೌಢ ಶಾಲೆ (ತೃತೀಯ).
ಶಿಕ್ಷಕರ ಸಮೂಹ ಗೀತೆ ಸ್ಪರ್ಧೆ: ಹೆದ್ದಾರಿ ಹಿರಿಯ ಪ್ರಾಥಮಿಕ ಶಾಲೆ (ಪ್ರಥಮ), ಬಾಕ್ರಬೈಲು ಹಿರಿಯ ಪ್ರಾಥಮಿಕ ಶಾಲೆ (ದ್ವಿತೀಯ) ಹಾಗೂ ಮೀಯಪದವು ವಿದ್ಯಾವರ್ಧಕ ಶಾಲೆ (ತೃತೀಯ).
ಬಳಿಕ ಉಪಜಿಲ್ಲಾ ಸಮಿತಿಯ ಅಧ್ಯಕ್ಷ ಅಶೋಕ್ ಕೊಡ್ಲಮೊಗರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷ ಸುಕೇಶ್, ಸಂಘಟನಾ ಕಾರ್ಯದರ್ಶಿ ಜಬ್ಬಾರ್, ಜತೆ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ, ಉಪಾಧ್ಯಕ್ಷ ಉಮೇಶ್, ಕಡಂಬಾರು ಶಾಲಾ ಮುಖ್ಯ ಶಿಕ್ಷಕ ಹರೀಶ್, ಮುಖಂಡರಾದ ಅಬೂಬಕ್ಕರ್, ನಯನ ಪ್ರಸಾದ್, ವಿಜಯ್, ರೂಪೇಶ್, ದಿವಾಕರ ಬಳ್ಳಾಲ್, ವಸಂತ ಮೂಡಂಬೈಲು ಹಾಗೂ ಶಾಲಾ ಎಸ್ಎಂಸಿ ಸದಸ್ಯ ಮುಸ್ತಫಾ ಕಡಂಬಾರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಸ್ವಾಗತಿಸಿ, ಕೋಶಾಧಿಕಾರಿ ಕಿಶೋರ್ ಕುಮಾರ್ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

.jpg)
.jpg)
