ನವದೆಹಲಿ: ಜಂತರ್ ಮಂತರ್‌ಗೆ ಅಕ್ರಮ ಪ್ರವೇಶದ ಆರೋಪದಡಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ನಾಯಕರಾದ ಅಶುತೋಷ್ ರಾಂಕಾ ಹಾಗೂ ಸೌರವ್ ದಾಸ್ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಸಂಬಂಧ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ, ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದೀಪ್ಕೆ, 'ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
'ಪ್ರಧಾನಿ ಮೋದಿಗೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಇರಾದೆ ಇದ್ದರೆ ಅದನ್ನು ಅಧಿಕೃತವಾಗಿಯೇ ಜಾರಿಗೊಳಿಸಲಿ' ಎಂದು ಅವರು ಸವಾಲು ಹಾಕಿದ್ದಾರೆ.
'ರಾಷ್ಟ್ರಧ್ವಜ ಹಾರಿಸಿದ ಕಾರಣಕ್ಕೆ ಸಿಜೆಪಿ ಕಾರ್ಯಕರ್ತರನ್ನು ಐದು ದಿನಗಳ ಕಾಲ ವಶದಲ್ಲಿರಿಸುವುದು ಹೇಡಿತನದ ಪರಮಾವಧಿ. 1975ರಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಇಂತಹ ಘಟನೆಗಳು ನಡೆದಿರಲಿಲ್ಲ. ತ್ರಿವರ್ಣ ಧ್ವಜ ಹಾರಿಸುವುದೇ ಈ ದೇಶದಲ್ಲಿ ದೊಡ್ಡ ಅಪರಾಧವಾಗಿಬಿಟ್ಟಿದೆ. ಹಾಗಾಗಿಯೇ ಐದು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೋದಿಯವರು ಹೇಡಿತನ ಬಿಟ್ಟು ಧೈರ್ಯ ಪ್ರದರ್ಶಿಸಲಿ. ತಾಕತ್ತಿದ್ದರೆ ಅಧಿಕೃತ ತುರ್ತು ಪರಿಸ್ಥಿತಿ ಘೋಷಿಸಲಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನಮ್ಮ ದೇಶ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಆಶಯಗಳ ಮೇಲೆ ನಡೆಯುತ್ತಿದೆ. ಹೀಗಾಗಿ ಇಲ್ಲಿ ಬಾಬಾಸಾಹೇಬರಿಗೆ ನಮನ ಸಲ್ಲಿಸುತ್ತಿದ್ದೇನೆ. ದೇಶದ ಮೇಲೆ ಆರ್‌ಎಸ್‌ಎಸ್ ಸಿದ್ಧಾಂತವನ್ನು ಹೇರಲು ಮೋದಿ ಅಥವಾ ಬೇರೆ ಯಾರೇ ಯತ್ನಿಸಿದರೂ ಅದು ಸಾಧ್ಯವಿಲ್ಲ. ಭಾರತ ಎಂದಿಗೂ ಅಂಬೇಡ್ಕರ್ ವಿಚಾರಧಾರೆಯನ್ನೇ ಪಾಲಿಸಲಿದೆ' ಎಂದು ಪ್ರತಿಪಾದಿಸಿದ್ದಾರೆ.
ಸಿಇಸಿ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳ 'ಇಂಡಿಯಾ'ಮೈತ್ರಿಕೂಟ ನಡೆಸುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು, 'ಸಿಜೆಪಿ ಸ್ವತಂತ್ರವಾದ ಒತ್ತಡ ಹೇರುವ ಗುಂಪಾಗಿದ್ದು, ಮುಂದೆಯೂ ಹಾಗೆಯೇ ಮುಂದುವರಿಯಲಿದೆ. ಆದರೆ, ಇದರರ್ಥ ನಾವು ಇಂಡಿಯಾ ಒಕ್ಕೂಟಕ್ಕೆ ವಿರುದ್ಧವಾಗಿದ್ದೇವೆ ಎಂದಲ್ಲ. ಇಂಡಿಯಾ ಮೈತ್ರಿಕೂಟ ಮತ್ತು ಸಿಜೆಪಿಯ ಹೋರಾಟ ಒಂದೇ ಉದ್ದೇಶಕ್ಕಾಗಿದೆ' ಎಂದು ಸ್ಪಷ್ಟಪಡಿಸಿದ್ದಾರೆ.
ಯಾತಕ್ಕಾಗಿ 5 ದಿನಗಳ ಬಂಧನ?
ಮತ್ತೊಂದೆಡೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನೇಹಾ ಬೋರಾ, ಸಿಜೆಪಿ ಕಾರ್ಯಕರ್ತರನ್ನು ಯಾತಕ್ಕಾಗಿ ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಜನರ ಭಿನ್ನಭಿಪ್ರಾಯವನ್ನು ಹತ್ತಿಕ್ಕಲು ಮತ್ತು ಈ ಹೋರಾಟವನ್ನು ದಮನಿಸಲು ಸರ್ಕಾರವು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಸಿಜೆಪಿ ನಾಯಕರಾದ ಸೌರವ್ ಮತ್ತು ಅಶುತೋಷ್ ಅವರನ್ನು ಬಂಧಿಸಿರುವುದು ಅದೇ ಪ್ರಯತ್ನದ ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



