ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಭಾರಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಪ್ರತಿಭಟಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್ ಮೂರು ಪ್ರಶ್ನೆಗಳನ್ನು ಕೇಳಿದೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಜನರ ಮತದಾನ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಅದರತ್ತ ಇರುವ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು 'ನುಸುಳುಕೋರರ' ವಾದವನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
'ಎಸ್‌ಐಆರ್ ಅನ್ನು ಸಮರ್ಥಿಸಿಕೊಳ್ಳುತ್ತಿರುವ ಗೃಹ ಸಚಿವರಿಗೆ ಮೂರು ಸರಳ ಹಾಗೂ ನೇರ ಪ್ರಶ್ನೆಗಳು. ಈವರೆಗೆ ಎಷ್ಟು ನುಸುಳುಕೋರರನ್ನು ಗುರುತಿಸಿದ್ದೀರಿ? ಎಷ್ಟು ನುಸುಳುಕೋರರ ಹೆಸರುಗಳನ್ನು ತೆಗೆದುಹಾಕಿದ್ದೀರಿ? ಎಷ್ಟು ನುಸುಳುಕೋರರನ್ನು ಗಡೀಪಾರು ಮಾಡಿದ್ದೀರಿ?' ಎಂದು ರಮೇಶ್ ಕೇಳಿದ್ದಾರೆ.
'ನೂರು ಕೋಟಿ ಭಾರತೀಯರನ್ನು ಎಸ್‌ಐಆರ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಎಸ್‌ಐಆರ್‌ನ ಫಲಿತಾಂಶವೇನು ಎಂಬುದನ್ನು ತಿಳಿಯುವ ಹಕ್ಕು ಅವರೆಲ್ಲರಿಗೂ ಇದೆ' ಎಂದು ಪ್ರತಿಪಾದಿಸಿದ್ದಾರೆ.
ಎಸ್‌ಐಆರ್ ಅನ್ನು 'ಶಾ ಇನ್‌ಸ್ಟಿಗೇಟೆಡ್ ರಿಮೂವಲ್' ಎಂದಿರುವ ಕಾಂಗ್ರೆಸ್ ನಾಯಕ, 'ಎಸ್‌ಐಆರ್‌ನ ಹಿಂದೆ ಇರುವವರು ಒಳನುಸುಳುಕೋರರ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಕುಟುಕಿದ್ದಾರೆ. ಹಾಗೆಯೇ, 'ಪ್ರಧಾನಿ ಹಾಗೂ ಗೃಹ ಸಚಿವರ ಜೋಡಿಯು ದೇಶದ ಸುಮಾರು 14 ಕೋಟಿ ಜನರ ಸಾಂವಿಧಾನಿಕ ಮತದಾನದ ಹಕ್ಕನ್ನು ಕಸಿದುಕೊಂಡಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಾದ್ಯಂತ 13 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 'ಆ ಎಲ್ಲ ಮತದಾರರು ನುಸುಳುಕೋರರು ಎಂದು ಅವರು (ಅಮಿತ್ ಶಾ) ಹೇಳುತ್ತಿದ್ದಾರೆಯೇ? ಗೃಹ ಸಚಿವರ ನೇತೃತ್ವದಲ್ಲಿ ದೇಶದಾದ್ಯಂತ ನುಸುಳುಕೋರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿದೆಯೇ?' ಎಂದು ಕೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ಎಸ್‌ಐಆರ್ ಕುರಿತು ಮಂಗಳವಾರ ಮಾತನಾಡಿದ್ದ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರತಿಪಕ್ಷಗಳು 2029ರಲ್ಲೂ ಹೀನಾಯವಾಗಿ ಸೋಲಲು ಸಜ್ಜಾಗಿ. ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇದ್ದಾರೆ ಎಂದು ಹೇಳಿದ್ದರು.
ಎಸ್‌ಐಆರ್ 2024ರಲ್ಲಿ ಆರಂಭವಾಗಿದೆಯಾದರೂ, ರಾಹುಲ್ ಗಾಂಧಿಯು ನಾಯಕತ್ವ ವಹಿಸಿಕೊಂಡಾಗಿನಿಂದಲೂ ಕಾಂಗ್ರೆಸ್ ನಿರಂತರವಾಗಿ ಸೋಲು ಕಾಣುತ್ತಿದೆ. ನುಸುಳುಕೋರರನ್ನು ಮತದಾರರು ಎಂಬಂತೆ ನೋಂದಣಿ ಮಾಡಿಸಲು ವಿರೋಧ ಪಕ್ಷದ ನಾಯಕ ರಾಹುಲ್ ಯೋಜಿಸುತ್ತಿರುವುದು ಜನರಿಗೆ ಗೊತ್ತಿದೆ ಎಂದು ಕುಟುಕಿದ್ದರು.


