ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನ ಉದ್ಘಾಟನೆ; 60 ಕವಿಗಳಿಗೆ ಕವಿ ಸಾಧಕ ಪ್ರಶಸ್ತಿ ಪ್ರದಾನ
ಕಾಸರಗೋಡು: ಸಂಸ್ಕೃತಿಪ್ರಿಯರನ್ನು ಒಗ್ಗೂಡಿಸಿ, ಅವರನ್ನು ಸಮಾಜದ ಮುನ್ನೆಲೆಗೆ ತರುವ ಮೂಲಕ ಸಶಕ್ತ ಸಾಂಸ್ಕೃತಿಕ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಡಾ. ಎಂ.ಜಿ.ಆರ್. ಅರಸ್ ಹೇಳಿದರು.
ಕಾಸರಗೋಡು ಕನ್ನಡ ಭವನ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಸಂಯುಕ್ತ ಆಶ್ರಯದಲ್ಲಿ ಪಾಂಗೋಡು ಕ್ಷೇತ್ರದ ದುರ್ಗಾಂಬಾ ವೇದಿಕೆಯಲ್ಲಿ ಆಯೋಜಿಸಲಾದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವದ ಅಂಗವಾಗಿ ನಡೆದ ರಾಷ್ಟ್ರೀಯ ಕವಿ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ 60 ಅಂತಾರಾಜ್ಯ ಮಟ್ಟದ ಕವಿಗಳಿಗೆ ‘ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಾಧಕ ಪ್ರಶಸ್ತಿ’ ಹಾಗೂ 10 ಮಂದಿಗೆ ‘ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕನ್ನಡ ಭುವನೇಶ್ವರಿ ಮೆರವಣಿಗೆಯೊಂದಿಗೆ ನಡೆದ ಕಾರ್ಯಕ್ರಮದ ರಾಷ್ಟ್ರೀಯ ಕವಿ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಬೆಂಗಳೂರಿನ ಬಿ. ಶ್ರೀನಿವಾಸ್ ಬಹದ್ದೂರ್ ವಹಿಸಿದ್ದರು. ಗಡಿನಾಡು ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪೂರಕವಾಗಿ ಅಖಿಲ ಕರ್ನಾಟಕದ ಸಾಹಿತಿಗಳು ಹಾಗೂ ಕವಿಗಳನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವ ಕನ್ನಡ ಭವನ ಮತ್ತು ಅದರ ರೂವಾರಿ ವಾಮನ್ ರಾವ್ ಬೇಕಲ್ ಅವರ ಸಾಧನೆ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ವಿಮರ್ಶಕ ಡಾ. ಜಯಪ್ಪ ಹೊನ್ನಾಳಿ ವಹಿಸಿದ್ದರು.
ಮೈಸೂರು ರಾಜವಂಶದ ಜೆ.ಪಿ. ಅರಸ್, ಇರಾ ನೇಮು ಪೂಜಾರಿ, ಡಾ. ಸುರೇಶ್ ನೆಗಳಗುಳಿ, ಡಾ. ಕೊಳಚಪ್ಪೆ ಗೋವಿಂದ ಭಟ್, ಕಥಾಬಿಂದು ಪ್ರದೀಪ್ ಕುಮಾರ್, ಕವಯತ್ರಿಯರಾದ ಸೀತಾಲಕ್ಷ್ಮಿ ವರ್ಮ ಹಾಗೂ ಗೊರೂರು ಪಂಕಜ, ರಾಜೇಶ್ ಕೋಟೆಕಣಿ ಮತ್ತು ಜಯಾನಂದ ಪೆರಾಜೆ ಅತಿಥಿಗಳಾಗಿ ಭಾಗವಹಿಸಿದ್ದರು.
ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ವಿರಾಜ್ ಅಡೂರು, ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಪಾಂಗೋಡು ಪ್ರವೀಣ್ ನಾಯಕ್, ನಾಗೇಶ್ ನಾಯಕ್ ಹಾಗೂ ವಿಬಿ ಕುಳಮರ್ವ ಉಪಸ್ಥಿತರಿದ್ದರು.
ಸಂಧ್ಯಾರಾಣಿ ಟೀಚರ್ ಸ್ವಾಗತಿಸಿದರು. ಗೊರೂರು ಪಂಕಜ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭವನದ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.



