HEALTH TIPS

ನೆತನ್ಯಾಹುಗೆ ಅಧಿಕಾರದ ಆತಂಕ; ಅತಂತ್ರದತ್ತ ಇಸ್ರೇಲ್

ಟೆಲ್ ಅವೀವ್: ಮತ ಎಣಿಕೆ ಮುಂದುವರಿದಂತೆ ಇಸ್ರೇಲ್ ರಾಜಕೀಯ ಚಿತ್ರಣ ಗಂಟೆಗಂಟೆಗೂ ತಿರುವು ಪಡೆಯುತ್ತಿದೆ. ಆರಂಭಿಕ ಸಮೀಕ್ಷೆಗಳ ಲೆಕ್ಕಾಚಾರಗಳನ್ನು ಮೀರಿ, ಇದೀಗ ಅಧಿಕೃತ ಮತ ಎಣಿಕೆ ಶೇಕಡಾ 72ರ ಗಡಿ ದಾಟಿದೆ.


ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಹೊಸ ಅಂಕಿಅಂಶಗಳ ಪ್ರಕಾರ, ನೆತನ್ಯಾಹು ನೇತೃತ್ವದ ಬಲಪಂಥೀಯ ಬಣ 54 ಸ್ಥಾನಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದರೆ, ಗಾಡಿ ಐಸೆನ್‌ಕೋಟ್ ನೇತೃತ್ವದ ವಿರೋಧ ಪಕ್ಷಗಳ ಬಣ 48 ಸ್ಥಾನಗಳಿಗೆ ಕುಸಿದಿದೆ. 

ಸ್ವತಂತ್ರ ಪಕ್ಷವಾಗಿ ಲಿಕುಡ್ 27 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಐಸೆನ್‌ಕೋಟ್ ಅವರ ಯಶಾರ್ ಪಕ್ಷ 21 ಸ್ಥಾನಗಳನ್ನು ಪಡೆದುಕೊಂಡಿದೆ.

ನಫ್ತಾಲಿ ಬೆನ್ನೆಟ್ ಅವರ ಟುಗೆದರ್ ಮೈತ್ರಿಕೂಟ 11 ಸ್ಥಾನಗಳನ್ನು ಗಳಿಸಿದ್ದರೆ, ಎಡಪಂಥೀಯ ಡೆಮಾಕ್ರಟ್ಸ್ ಮತ್ತು ಅವಿಗ್ಡೋರ್ ಲೀಬರ್‌ಮ್ಯಾನ್ ಅವರ ಇಸ್ರೇಲ್ ಬೈತೇನು ಪಕ್ಷಗಳು ತಲಾ 8 ಸ್ಥಾನಗಳನ್ನು ಗಳಿಸಿವೆ.

ನೆತನ್ಯಾಹು ಜೊತೆಗಿರುವ ಅಲ್ಟ್ರಾ-ಆರ್ಥೊಡಾಕ್ಸ್ ಪಕ್ಷಗಳಾದ ಯುನೈಟೆಡ್ ಟೋರಾ ಜುದಾಯಿಸಂ ಮತ್ತು ಶಾಸ್ ತಲಾ 7 ಸ್ಥಾನಗಳನ್ನು ಪಡೆದಿವೆ. ಇಟಾಮರ್ ಬೆನ್-ಗ್ವಿರ್ ಅವರ ಜ್ಯೂಯಿಷ್ ಪವರ್ 7 ಹಾಗೂ ಬೆಜಲೆಲ್ ಸ್ಮೊಟ್ರಿಚ್ ಅವರ ಧಾರ್ಮಿಕ ಝಿಯೋನಿಸಂ ಮೈತ್ರಿಕೂಟ 6 ಸ್ಥಾನಗಳತ್ತ ಸಾಗಿವೆ.

ಅಂತಿಮವಾಗಿ 61ರ ಮ್ಯಾಜಿಕ್ ನಂಬರ್ ತಲುಪಲು ಎರಡೂ ಬಣಗಳಿಗೂ ಇನ್ನೂ ಸಾಧ್ಯವಾಗಿಲ್ಲ.

ಮತ ಎಣಿಕೆಯ ಈ ಹಂತದಲ್ಲಿ ಅರಬ್ ಮೂಲದ ಪಕ್ಷಗಳು ಅಭೂತಪೂರ್ವ ಮುನ್ನಡೆ ಸಾಧಿಸಿ ಎಲ್ಲರ ಗಮನ ಸೆಳೆದಿವೆ. ಜಾಯಿಂಟ್ ಲಿಸ್ಟ್ 12 ಮತ್ತು ಮನ್ಸೂರ್ ಅಬ್ಬಾಸ್ ನೇತೃತ್ವದ ಯುನೈಟೆಡ್ ಅರಬ್ ಲಿಸ್ಟ್ 6 ಸ್ಥಾನಗಳನ್ನು ಗಳಿಸುವುದು ಸೇರಿದಂತೆ, ಅರಬ್ ಪಕ್ಷಗಳು 18ರಿಂದ 19 ಸ್ಥಾನಗಳನ್ನು ಬಾಚಿಕೊಳ್ಳುವ ಸ್ಪಷ್ಟ ಸೂಚನೆ ಸಿಕ್ಕಿದೆ.

ಅರಬ್ ಸಮುದಾಯದವರು ದಾಖಲೆ ಪ್ರಮಾಣದಲ್ಲಿ ಮತಗಟ್ಟೆಗಳಿಗೆ ಬಂದು ಹಕ್ಕು ಚಲಾಯಿಸಿರುವುದು ಇಸ್ರೇಲ್ ರಾಜಕಾರಣದ ಸಮೀಕರಣವನ್ನೇ ಬದಲಿಸಿದೆ. ಈ ಫಲಿತಾಂಶದ ಬೆನ್ನಲ್ಲೇ ಮಾತನಾಡಿದ ಜಾಯಿಂಟ್ ಲಿಸ್ಟ್ ನಾಯಕ ಯೂಸುಫ್ ಜಬಾರೀನ್, ನೆತನ್ಯಾಹು, ಬೆನ್-ಗ್ವಿರ್ ಮತ್ತು ಸ್ಮೊಟ್ರಿಚ್ ಅವರ ರಕ್ತಪಾತದ ಆಡಳಿತವನ್ನು ಮನೆಗೆ ಕಳುಹಿಸಲು ತಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಾಗಿ ಗುಡುಗಿದ್ದಾರೆ.

ಆದರೆ, ಇತ್ತ ನೆತನ್ಯಾಹು ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಝಿಯೋನಿಸ್ಟ್ ಜನಾದೇಶದಲ್ಲಿ ತಮ್ಮ ಬಲಪಂಥೀಯ ಬಣಕ್ಕೆ ಸ್ಪಷ್ಟ ಬಹುಮತವಿದೆ ಎಂದಿದ್ದಾರೆ. ದೇಶದ ಅಸ್ತಿತ್ವವನ್ನೇ ಒಪ್ಪದ ಅರಬ್ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವುದು ನಾಚಿಕೆಗೇಡು ಎಂದು ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅರಬ್ ಪಕ್ಷಗಳನ್ನು ಸರ್ಕಾರ ರಚನೆಯಿಂದ ಹೊರಗಿಡುವಂತೆ ಅವರು ವಿರೋಧ ಪಕ್ಷಗಳ ಮೇಲೂ ಮಾನಸಿಕ ಒತ್ತಡ ಹೇರುತ್ತಿದ್ದಾರೆ.

ಆದರೆ, ವಾಸ್ತವದಲ್ಲಿ ನೆತನ್ಯಾಹು ಅಧಿಕಾರಕ್ಕೇರಲು ಅಗತ್ಯವಿರುವ ಸಂಖ್ಯಾಬಲ ಅವರ ಬಳಿ ಇಲ್ಲ.

ಕಳೆದ ಬಾರಿ 64 ಸ್ಥಾನಗಳನ್ನು ಹೊಂದಿದ್ದ ಅವರ ಮಿತ್ರಕೂಟ ಈಗ 54ಕ್ಕೆ ಕುಸಿದಿರುವುದು ಅವರ ಜನಪ್ರಿಯತೆಗೆ ಬಿದ್ದ ಹೊಡೆತ ಎಂದು ರಾಜತಾಂತ್ರಿಕ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಮಾಜಿ ರಾಯಭಾರಿ ಡೇನಿಯಲ್ ಶೆಕ್ ಅವರ ಪ್ರಕಾರ, ಅರಬ್ ಮತದಾರರನ್ನು ಪ್ರತ್ಯೇಕಿಸಿ ನೋಡುವುದು ಇಸ್ರೇಲ್ ವ್ಯವಸ್ಥೆಯಲ್ಲಿ ಇನ್ನು ಮುಂದೆ ಸಾಧ್ಯವಿಲ್ಲ.

ನೆತನ್ಯಾಹು ಅವರ ವಿರೋಧಿ ಮತಗಳಲ್ಲಿ ಅರಬ್ ಮತದಾರರ ಪಾಲು ದೊಡ್ಡದಾಗಿದೆ. ಅವರು ಸರ್ಕಾರದಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ, ನೆತನ್ಯಾಹು ಪರವಾಗಿ ಎಂದಿಗೂ ಮತ ಚಲಾಯಿಸುವುದಿಲ್ಲ. ಇದೇ ವೇಳೆ ವಿರೋಧ ಪಕ್ಷಗಳ ಪಾಳೆಯದಲ್ಲೂ ತಳಮಳ ಶುರುವಾಗಿದೆ. ಡೆಮಾಕ್ರಟ್ಸ್ ನಾಯಕ ಯೈರ್ ಗೋಲನ್, ನೆತನ್ಯಾಹು ಅವರ ಜನಾಂಗೀಯ ವಿಭಜನೆಯ ತಂತ್ರವನ್ನು ಒಪ್ಪಿಕೊಳ್ಳದೆ, ಅರಬ್ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸುವಂತೆ ತಮ್ಮ ಮಿತ್ರರಿಗೆ ಬಹಿರಂಗವಾಗಿಯೇ ಕರೆ ನೀಡಿದ್ದಾರೆ.

ಅರಬ್ ಪಕ್ಷಗಳು ನೇರವಾಗಿ ಸಂಪುಟ ಸೇರದಿದ್ದರೂ, ಸರ್ಕಾರಕ್ಕೆ ಅಗತ್ಯವಾದ ಸೇಫ್ಟಿ ನೆಟ್ ಅಥವಾ ಬಾಹ್ಯ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ, ಇದಕ್ಕೆ ಐಸೆನ್‌ಕೋಟ್ ಸಮ್ಮತಿಸುತ್ತಾರೆಯೇ ಅಥವಾ ಬಲಪಂಥೀಯ ಮತದಾರರ ಆಕ್ರೋಶಕ್ಕೆ ಹೆದರಿ ಹಿಂದೆ ಸರಿಯುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ಒಂದು ವೇಳೆ ವಿರೋಧ ಪಕ್ಷಗಳು ಅರಬ್ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಹಿಂಜರಿದರೆ, ನೆತನ್ಯಾಹು ಎದುರಾಳಿ ಬಣದಿಂದ ಕೆಲವು ಸಣ್ಣ ಪಕ್ಷಗಳನ್ನು ಸೆಳೆಯಲು ತೆರೆಮರೆಯ ಕಸರತ್ತು ನಡೆಸಬಹುದು. ನಫ್ತಾಲಿ ಬೆನ್ನೆಟ್ ಅಥವಾ ಅವಿಗ್ಡೋರ್ ಲೀಬರ್‌ಮ್ಯಾನ್ ಅವರಂತಹ ನಾಯಕರನ್ನು ಸೆಳೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇಬ್ಬರೂ ನೆತನ್ಯಾಹು ಜೊತೆ ಹಳೆಯ ವೈಮನಸ್ಸು ಹೊಂದಿದ್ದರೂ, ಅಧಿಕಾರದ ಗದ್ದುಗೆ ಹಿಡಿಯಲು ಹೊಸ ದಾಳ ಉರುಳಿಸಬಹುದು. ನೆತನ್ಯಾಹು ಅವರ 77ನೇ ವಯಸ್ಸು ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ, ಮುಂದಿನ ನಾಯಕತ್ವದ ಮೇಲೆ ಕಣ್ಣಿಟ್ಟಿರುವ ಈ ನಾಯಕರು ಯಾವುದೇ ಹಂತದಲ್ಲೂ ಪಲ್ಟಿ ಹೊಡೆಯಬಹುದು.

ಇವೆಲ್ಲದರ ನಡುವೆ, ರಾಜಕೀಯ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ನೆತನ್ಯಾಹು ಹಂಗಾಮಿ ಪ್ರಧಾನಿಯಾಗಿ ಮುಂದುವರಿಯುವ ಅಪಾಯವಿದೆ ಎಂದು ಭದ್ರತಾ ತಜ್ಞರು ಎಚ್ಚರಿಸಿದ್ದಾರೆ. ಅಧಿಕಾರ ಉಳಿಸಿಕೊಳ್ಳಲು ಇರಾನ್ ಮೇಲೆ ಮತ್ತೆ ದಾಳಿ ನಡೆಸಿ, ಯುದ್ಧದ ನೆಪದಲ್ಲಿ ಸರ್ಕಾರ ರಚನೆಯ ಗಡುವನ್ನು ಮುಂದೂಡುವ ತಂತ್ರವನ್ನು ಅವರು ಹೆಣೆಯಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

ಮತ್ತೊಂದೆಡೆ, ಸೇನಾ ಸಿಬ್ಬಂದಿ, ಗಡಿಯಲ್ಲಿರುವ ಸೈನಿಕರು ಹಾಗೂ ರಾಜತಾಂತ್ರಿಕ ಅಧಿಕಾರಿಗಳಿಗೆ ಸೇರಿದ ಸುಮಾರು 6,50,000 'ಡಬಲ್ ಎನ್ವಲಪ್' ಮತಗಳ ಎಣಿಕೆ ಇನ್ನೂ ಬಾಕಿ ಇದೆ. ಇವು ಸಾಮಾನ್ಯವಾಗಿ ಬಲಪಂಥೀಯ ಪಕ್ಷಗಳ ಪರವಾಗಿ ವಾಲುವುದರಿಂದ, ಅಂತಿಮ ಫಲಿತಾಂಶದಲ್ಲಿ ನೆತನ್ಯಾಹು ಬಣ ಇನ್ನಷ್ಟು ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ನೆತನ್ಯಾಹು ಪರ ಬ್ಯಾಟಿಂಗ್ ಮಾಡಿದ್ದು, ತಮ್ಮ ಬೆಂಬಲವೇ ಅವರ ಮೈತ್ರಿಕೂಟವನ್ನು ಸಂಕಷ್ಟದಿಂದ ಪಾರು ಮಾಡಿದೆ ಎಂದು ಹೇಳಿಕೊಂಡಿದ್ದಾರೆ.

ಈ ರಾಜಕೀಯ ಅಸ್ಥಿರತೆಯು ಆರ್ಥಿಕತೆಯ ಮೇಲೂ ತಕ್ಷಣದ ಪರಿಣಾಮ ಬೀರಿದೆ. ಟೆಲ್ ಅವಿವ್ ಷೇರು ಮಾರುಕಟ್ಟೆ ಕುಸಿತ ಕಂಡಿದ್ದು, ಇಸ್ರೇಲಿ ಕರೆನ್ಸಿ ಶೆಕೆಲ್ ಡಾಲರ್ ಎದುರು ಭಾರಿ ಇಳಿಕೆ ದಾಖಲಿಸಿದೆ.

ಮತದಾರರು ನೆತನ್ಯಾಹು ನಾಯಕತ್ವಕ್ಕೆ ಕನ್ನಡಿ ಹಿಡಿದಿದ್ದರೂ, ಬದಲಿಗೆ ಹೊಸ ಪರ್ಯಾಯವನ್ನು ಗಟ್ಟಿಯಾಗಿ ಕಟ್ಟಿಕೊಡುವಲ್ಲಿ ಎಡವಿದ್ದಾರೆ. ಅರಬ್ ಪಕ್ಷಗಳನ್ನು ಒಳಗೊಳ್ಳುವ ಧೈರ್ಯ ವಿರೋಧ ಪಕ್ಷಗಳಿಗೆ ಇಲ್ಲದಿದ್ದರೆ, ಇಸ್ರೇಲ್ ಮತ್ತೊಮ್ಮೆ ಸಾಂವಿಧಾನಿಕ ಬಿಕ್ಕಟ್ಟು ಹಾಗೂ ಅನಿಶ್ಚಿತತೆಯ ಸುಳಿಗೆ ಸಿಲುಕುವುದು ನಿಶ್ಚಿತ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries