ನವದೆಹಲಿ: ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಿಲ್ಲಿ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ. ಪೊಲೀಸರ ಹಲ್ಲೆಯಿಂದ ಕೇರಳದ ಯುವತಿಯೊಬ್ಬರು ಒಂದು ಕಿವಿಯ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
'ಕೇರಳದ ಅತಿರಾ ತಮ್ಮ ಒಂದು ಕಿವಿಯ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾರೆ. ಆ ಕಿವಿಗೆ ಹೊಡೆತ ಬಿದ್ದಿದ್ದರಿಂದ ಈಗ ಅವರಿಗೆ ಕೇಳಿಸುವುದಿಲ್ಲ. ಕಳೆದ ಬಾರಿ ದೃಷ್ಟಿ ಕಳೆದುಕೊಂಡಿದ್ದ ಯುವಕನೊಬ್ಬನನ್ನು ನಿಮಗೆ ತೋರಿಸಿದ್ದೆ. ಈಗ ಈ ಯುವತಿ ಒಂದು ಕಿವಿಯ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾರೆ' ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಹಿಳಾ ಪೊಲೀಸ್ ಸಿಬ್ಬಂದಿ ಇರಲಿಲ್ಲ: ಅತಿರಾ ಆರೋಪ
ಕೇರಳಂ ಮೂಲದ, ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅತಿರಾ, ಮಂಗಳವಾರದ ಪ್ರತಿಭಟನೆಯ ಸಂದರ್ಭದಲ್ಲಿ ವಶಕ್ಕೆ ಪಡೆದ ಬಳಿಕ ಪೊಲೀಸ್ ಬಸ್ ನಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
'ನಮ್ಮನ್ನು ವಶಕ್ಕೆ ಪಡೆದಾಗ ಬಸ್ ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿರಲಿಲ್ಲ. ಮಹಿಳಾ ಪೊಲೀಸ್ ಅಧಿಕಾರಿ ಅಥವಾ ಮಹಿಳಾ ಕಾನ್ಸ್‌ಟೇಬಲ್ ಎಲ್ಲಿದ್ದಾರೆ ಎಂದು ನಾನು ಕೇಳಿದೆ. ಮಹಿಳೆಯರನ್ನು ವಶಕ್ಕೆ ಪಡೆಯುವಾಗ ಕನಿಷ್ಠ ಒಬ್ಬ ಮಹಿಳಾ ಕಾನ್ಸ್‌ಟೇಬಲ್ ಇರಬೇಕು' ಎಂದು ಅವರು ಹೇಳಿದ್ದಾರೆ.
ಬಳಿಕ ಪೊಲೀಸ್ ಬಸ್ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯ ಹೊರಗೆ ನಿಂತಿತು. ಅಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಕೆನ್ನೆಗೆ ಪದೇ ಪದೇ ಹೊಡೆದರು ಎಂದು ಅತಿರಾ ಆರೋಪಿಸಿದ್ದಾರೆ.
'ಹಲ್ಲೆಯಿಂದಾಗಿ ನನ್ನ ಕಣ್ಣಿಗೆ ಗಾಯವಾಗಿದೆ. ಕಿವಿಗೂ ಹಾನಿಯಾಗಿದೆ' ಎಂದು ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಆರೋಪದ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದು, ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಮಹತ್ವ ಪಡೆದಿವೆ.'ಕೇರಳದ ಅತಿರಾ ತಮ್ಮ ಒಂದು ಕಿವಿಯ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾರೆ. ಆ ಕಿವಿಗೆ ಹೊಡೆತ ಬಿದ್ದಿದ್ದರಿಂದ ಈಗ ಅವರಿಗೆ ಕೇಳಿಸುವುದಿಲ್ಲ. ಕಳೆದ ಬಾರಿ ದೃಷ್ಟಿ ಕಳೆದುಕೊಂಡಿದ್ದ ಯುವಕನೊಬ್ಬನನ್ನು ನಿಮಗೆ ತೋರಿಸಿದ್ದೆ. ಈಗ ಈ ಯುವತಿ ಒಂದು ಕಿವಿಯ ಶ್ರವಣಶಕ್ತಿಯನ್ನು ಕಳೆದುಕೊಂಡಿದ್ದಾರೆ' ಎಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.



