ನವದೆಹಲಿ: 2025ರ ಆಗಸ್ಟ್ನಲ್ಲಿ, ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದ ಮಹಾದೇಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ಹಾಗೂ ತಿರುಚುವಿಕೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಮೆಷಿನ್-ರೀಡಬಲ್ ಮತದಾರರ ಪಟ್ಟಿಗಳನ್ನು ಒದಗಿಸುವಂತೆ ಮತ್ತು ಮತಗಟ್ಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ನಾಶಪಡಿಸಬಾರದೆಂದು ಅವರು ಚುನಾವಣಾ ಆಯೋಗವನ್ನು (ECI) ಒತ್ತಾಯಿಸಿದ್ದರು.
ರ್ಯಾಲಿಯೊಂದಲ್ಲಿ ಮಾತನಾಡಿದ ಅವರು, ಸಿಸಿಟಿವಿ ದೃಶ್ಯಾವಳಿ ಹಾಗೂ ವಿಡಿಯೊ ಸಾಕ್ಷ್ಯಗಳನ್ನು ನಾಶಮಾಡುವ ಪದ್ಧತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗ, ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಲು ಬಯಸುವ ಯಾವುದೇ ಅಭ್ಯರ್ಥಿ ಫಲಿತಾಂಶ ಪ್ರಕಟವಾದ 45 ದಿನಗಳ ಒಳಗೆ ಸಂಬಂಧಪಟ್ಟ ಹೈಕೋರ್ಟ್ನಲ್ಲಿ ಚುನಾವಣಾ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು. ಅಂತಹ ಅರ್ಜಿ ಸಲ್ಲಿಕೆಯಾದ ಸಂದರ್ಭದಲ್ಲಿ ಮಾತ್ರ ಸಿಸಿಟಿವಿ ದೃಶ್ಯಾವಳಿಯನ್ನು ಸಾಕ್ಷ್ಯವಾಗಿ ಸಂರಕ್ಷಿಸಿಡಲಾಗುತ್ತದೆ. ಒಂದು ವೇಳೆ ಅರ್ಜಿ ಸಲ್ಲಿಕೆಯಾಗದಿದ್ದರೆ, ಮತದಾರರ ಗೌಪ್ಯತೆಗೆ ಧಕ್ಕೆ ತರುವ ದುರುದ್ದೇಶವಿಲ್ಲದಿದ್ದರೆ, ದೃಶ್ಯಾವಳಿಗಳನ್ನು ಉಳಿಸಿಕೊಳ್ಳಲು ಯಾವುದೇ ಕಾರಣವಿರುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿತ್ತು.
ಇದಾದ ಕೆಲವೇ ದಿನಗಳಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕೂಡ ಗೌಪ್ಯತೆಯ ವಿಷಯವನ್ನು ಪ್ರಸ್ತಾಪಿಸಿ, "ಯಾವುದೇ ಮತದಾರರ ಸಿಸಿಟಿವಿ ದೃಶ್ಯಾವಳಿಯನ್ನು ಹಂಚಿಕೊಳ್ಳಬಹುದೇ? ಆ ವ್ಯಕ್ತಿ ನಮ್ಮ ತಾಯಿಯಾಗಿರಲಿ, ಸೊಸೆಯಾಗಿರಲಿ ಅಥವಾ ಮಗಳಾಗಿರಲಿ, ಚುನಾವಣಾ ಆಯೋಗವು ಈ ದೃಶ್ಯಾವಳಿಯನ್ನು ಹಂಚಿಕೊಳ್ಳಬೇಕೇ?" ಎಂದು ಪ್ರಶ್ನಿಸಿದ್ದರು.
ಸುಮಾರು ಎಂಟು ತಿಂಗಳ ಹಿಂದೆ, ಅಂದರೆ 2024 ಡಿಸೆಂಬರ್ನಲ್ಲಿ, ಸಿಸಿಟಿವಿ ದೃಶ್ಯಾವಳಿ ಮತ್ತು ವಿಡಿಯೊ ರೆಕಾರ್ಡಿಂಗ್ಗೆ ಸಂಬಂಧಿಸಿದ ನಿಯಮಗಳನ್ನು ಇಸಿಐ ತಿದ್ದುಪಡಿ ಮಾಡಿತ್ತು. ಅದಕ್ಕೆ ಮುಖ್ಯವಾಗಿ ಈ ಎರಡು ಕಾರಣಗಳನ್ನು ನೀಡಿತ್ತು:
ಮೊದಲನೆಯದಾಗಿ, ಇಂತಹ ರೆಕಾರ್ಡಿಂಗ್ಗಳನ್ನು ಕೋರಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿತ್ತು.
ಎರಡನೆಯದಾಗಿ, ಇವುಗಳನ್ನು ಒದಗಿಸಲು ಗಮನಾರ್ಹ ಪ್ರಮಾಣದ ಆಡಳಿತಾತ್ಮಕ ಸಂಪನ್ಮೂಲ ಮತ್ತು ಮಾನವಶಕ್ತಿ ಅಗತ್ಯವಾಗಿತ್ತು.
ಆದರೆ, ಮಾಹಿತಿ ಹಕ್ಕು ಕಾಯ್ದೆಯಡಿ (RTI) ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯಿಸಿರುವ ಅದೇ ಇಸಿಐ, ಕಳೆದ ಐದು ವರ್ಷಗಳಲ್ಲಿ ಇಂತಹ ಎಷ್ಟು ಅರ್ಜಿಗಳು ಸ್ವೀಕೃತವಾಗಿವೆ ಎಂಬುದಕ್ಕೆ ಸಂಬಂಧಿಸಿದಂತೆ ತನ್ನ ಬಳಿ ಯಾವುದೇ ದತ್ತಾಂಶವಿಲ್ಲ ಎಂದು ತಿಳಿಸಿದೆ ಎಂದು thewire.in ವರದಿ ಮಾಡಿದೆ.
ಸೆಪ್ಟೆಂಬರ್ 14, 2026 ರಂದು ನೀಡಿದ ಪ್ರತ್ಯುತ್ತರದಲ್ಲಿ, ಮತದಾನ ಕೇಂದ್ರಗಳು ಮತ್ತು ಎಣಿಕೆ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಕೋರಿ ಬಂದ ಅರ್ಜಿಗಳು ಅಥವಾ ವಿನಂತಿಗಳ ಸಂಖ್ಯೆಯ ಬಗ್ಗೆ "ಯಾವುದೇ ಭೌತಿಕ ರೂಪದಲ್ಲಿ" ತನ್ನ ಬಳಿ ಡೇಟಾ ಇಲ್ಲ ಎಂದು ಇಸಿಐ ಸ್ಪಷ್ಟಪಡಿಸಿದೆ.
ಈ ಪ್ರತಿಕ್ರಿಯೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಏಕೆಂದರೆ, ಸಿಸಿಟಿವಿ ಮತ್ತು ಚುನಾವಣಾ ವಿಡಿಯೊ ರೆಕಾರ್ಡಿಂಗ್ಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲು ನಿಯಮಗಳನ್ನು ತಿದ್ದುಪಡಿ ಮಾಡಿದ್ದಕ್ಕೆ ಆಯೋಗವು ಎರಡು ವರ್ಷಗಳ ಹಿಂದೆ 'ಅರ್ಜಿಗಳ ಹೆಚ್ಚಳ ಮತ್ತು ಆಡಳಿತಾತ್ಮಕ ಹೊರೆ'ಯನ್ನೇ ಕಾರಣವಾಗಿ ನೀಡಿತ್ತು.
ಹಾಗಾಗಿ, ಸಿಸಿಟಿವಿ ದೃಶ್ಯಾವಳಿಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೇ ಬೇಡವೇ ಎಂಬುದು ಮಾತ್ರವೇ ಈಗಿನ ಪ್ರಶ್ನೆಯಲ್ಲ. ನಿಯಮಗಳನ್ನು ಬದಲಾಯಿಸಲು ಅರ್ಜಿ ಸಲ್ಲಿಸುವವರ ಸಂಖ್ಯೆ ಮತ್ತು ಅದರ ವ್ಯಾಪ್ತಿಯೇ ಪ್ರಮುಖ ಆಧಾರವಾಗಿದ್ದರೆ, ಆ 'ದೊಡ್ಡ ಪ್ರಮಾಣದ' ಮೌಲ್ಯಮಾಪನವನ್ನು ಯಾವ ದಾಖಲೆ, ದತ್ತಾಂಶ ಅಥವಾ ಅಧ್ಯಯನದ ಆಧಾರದ ಮೇಲೆ ಮಾಡಲಾಗಿತ್ತು ಎಂಬುದು ಈಗ ಏಳುತ್ತಿರುವ ಪ್ರಮುಖ ಪ್ರಶ್ನೆ
ನಿಯಮಗಳನ್ನು ಬದಲಾಯಿಸುವ ಮೊದಲು ಆಯೋಗ ಏನು ಹೇಳಿತ್ತು?
ಚುನಾವಣಾ ಆಯೋಗದೊಂದಿಗಿನ ಚರ್ಚೆಯ ನಂತರ, ಕೇಂದ್ರ ಸರ್ಕಾರವು 2024 ಡಿಸೆಂಬರ್ 20 ರಂದು ಚುನಾವಣಾ ನಡಾವಳಿ ನಿಯಮಗಳನ್ನು ತಿದ್ದುಪಡಿ ಮಾಡಿತು. ಈ ತಿದ್ದುಪಡಿಯ ಅಡಿಯಲ್ಲಿ, 1961 ರ ಚುನಾವಣಾ ನಡಾವಳಿ ನಿಯಮಗಳ Rule 93(2)(a)'ಗೆ ಕೇವಲ ಐದು ಪದಗಳನ್ನು ಸೇರಿಸಲಾಯಿತು. ಅದು "As specified in these rules (ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ)" ಎಂಬುದು.
ಸರಳವಾಗಿ ಹೇಳುವುದಾದರೆ, ಈ ತಿದ್ದುಪಡಿಯ ನಂತರ ಚುನಾವಣೆಗೆ ಸಂಬಂಧಿಸಿದ ದಾಖಲೆಗಳ ಸಾರ್ವಜನಿಕ ಪ್ರವೇಶವನ್ನು ಈ ನಿಯಮಗಳಲ್ಲಿ ಸ್ಪಷ್ಟವಾಗಿ ನಮೂದಿಸಲಾದ ದಾಖಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನೀಡಿದ ಆದೇಶದ ಬೆನ್ನಲ್ಲೇ ಈ ತಿದ್ದುಪಡಿ ತಕ್ಷಣದಿಂದ ಜಾರಿಗೆ ಬಂದಿತು. 2024 ಡಿಸೆಂಬರ್ 10 ರಂದು, ವಕೀಲ ಮೆಹಮೂದ್ ಪ್ರಾಚಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, 2024 ರ ಹರ್ಯಾಣ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ದಾಖಲೆಗಳು, ವಿಡಿಯೊಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಇಸಿಐಗೆ ನಿರ್ದೇಶನ ನೀಡಿತ್ತು.
ಈ ನಿರ್ದೇಶನ ಬಂದ ಕೇವಲ ಒಂದು ವಾರದ ನಂತರ, ಅಂದರೆ 2024ಡಿಸೆಂಬರ್ 17 ರಂದು, ಚುನಾವಣಾ ನಡಾವಳಿ ನಿಯಮಗಳ ' Rule 93(2)(a)'ಗೆ ತಿದ್ದುಪಡಿ ತರಲು ಇಸಿಐ, ಕಾನೂನು ಮತ್ತು ನ್ಯಾಯ ಸಚಿವಾಲಯದ ಶಾಸಕಾಂಗ ಇಲಾಖೆಗೆ ಪತ್ರ ಬರೆಯಿತು. ಎಲೆಕ್ಟ್ರಾನಿಕ್ ದಾಖಲೆಗಳನ್ನು ಒದಗಿಸಲು ಅಗತ್ಯವಿರುವ ಸಂಪನ್ಮೂಲಗಳು ಮತ್ತು ಆಡಳಿತಾತ್ಮಕ ಹೊರೆಯನ್ನು ಈ ತಿದ್ದುಪಡಿಗೆ ಪ್ರಮುಖ ಕಾರಣವಾಗಿ ಆಯೋಗ ಉಲ್ಲೇಖಿಸಿತ್ತು.
ಆಯೋಗ ತನ್ನ ಪತ್ರದಲ್ಲಿ ಹೀಗೆ ಹೇಳಿತ್ತು:
"ಕಾನೂನುಬದ್ಧವಲ್ಲದ ಕಾಗದಪತ್ರಗಳು ಮತ್ತು ಎಲೆಕ್ಟ್ರಾನಿಕ್ ರೆಕಾರ್ಡಿಂಗ್ಗಳನ್ನು ಒದಗಿಸಲು ಹೆಚ್ಚಿನ ಮಾನವಶಕ್ತಿಯ ಅಗತ್ಯವಿರುತ್ತದೆ. ಚುನಾವಣೆ ಮುಗಿದ ನಂತರ ಆಡಳಿತಾತ್ಮಕ ಸಂಪನ್ಮೂಲಗಳು ಗಣನೀಯವಾಗಿ ಕಡಿಮೆಯಾಗುವುದರಿಂದ ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಅಲ್ಲದೆ, ಕ್ಷೇತ್ರದಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಚುನಾವಣಾಧಿಕಾರಿಯ ಕಚೇರಿಯ ಕಾರ್ಯನಿರ್ವಹಣೆಯೂ ಕೊನೆಗೊಳ್ಳುತ್ತದೆ. ಚುನಾವಣೆ ಮುಗಿದ ನಂತರ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾನೂನುಬದ್ಧವಲ್ಲದ ದಾಖಲೆಗಳನ್ನು ಸರಬರಾಜು ಮಾಡುವ ಹೆಚ್ಚುವರಿ ಕೆಲಸವನ್ನು ಅವರಿಗೆ ವಹಿಸುವುದರಿಂದ ಆಡಳಿತಾತ್ಮಕ ಕಾರ್ಯನಿರ್ವಹಣೆಗೆ ಅಡಚಣೆಯಾಗುತ್ತದೆ. ಆದ್ದರಿಂದ, ಇಂತಹ ದಾಖಲೆಗಳನ್ನು ನೀಡುವುದು ಸಂಪನ್ಮೂಲದ ದೃಷ್ಟಿಯಿಂದ ಕಷ್ಟಕರವಾಗಿದ್ದು, ಇದರಿಂದ ಯಾವುದೇ ಕಾನೂನು ಉದ್ದೇಶವೂ ಈಡೇರುವುದಿಲ್ಲ."
ಸಾರ್ವಜನಿಕ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಮತ್ತು ನಿಯಮ ತಿದ್ದುಪಡಿಯನ್ನು ಶೀಘ್ರವೇ ಅಧಿಸೂಚಿಸುವಂತೆ ಕೋರಿದ್ದ ಇಸಿಐ, "ಕಾನೂನುಬದ್ಧ ಮತ್ತು ಕಾನೂನುಬದ್ಧವಲ್ಲದ ದಾಖಲೆಗಳನ್ನು ಪರಿಶೀಲಿಸುವ ಅಥವಾ ಪಡೆಯುವ ಹಕ್ಕಿಗೆ ಧಕ್ಕೆಯಾಗದಂತೆ ಕಾಯ್ದುಕೊಳ್ಳಲು, ನಿಯಮ 93(2)(ಎ) ಯಲ್ಲಿ 'papers' (ದಾಖಲೆಗಳು) ಎಂಬ ಪದದ ಮುಂದೆ 'statutory' (ಕಾನೂನುಬದ್ಧ) ಎಂಬ ಪದವನ್ನು ಸೇರಿಸಲು ಪ್ರಸ್ತಾಪಿಸಲಾಗಿದೆ. ಅನುಬಂಧದಲ್ಲಿ ನೀಡಲಾದ ಪ್ರಸ್ತಾಪದಂತೆ ನಿಯಮ 93(2) ಕ್ಕೆ ತಿದ್ದುಪಡಿ ಮಾಡಬಹುದು" ಎಂದು ತಿಳಿಸಿತ್ತು.
ಡಿಸೆಂಬರ್ 20 ರಂದು, ಆಯೋಗದ ಪ್ರಸ್ತಾಪಕ್ಕೆ ಕಾನೂನು ಸಚಿವಾಲಯವು ತನ್ನ ಮೊದಲ ಪ್ರತಿಕ್ರಿಯೆಯನ್ನು ನೀಡಿತು. ಅದೇ ದಿನ ನಿಯಮಗಳನ್ನು ತಿದ್ದುಪಡಿ ಮಾಡಲಾಯಿತು . ಇಡೀ ಪ್ರಕ್ರಿಯೆ ಒಂದೇ ದಿನದಲ್ಲಿ ಪೂರ್ಣಗೊಂಡಿತು.
ಕಾನೂನು ಸಚಿವಾಲಯದ ಡಿಸೆಂಬರ್ 20 ರ ದಾಖಲೆಯೊಂದು, ಅವರು ಆಯೋಗದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿಯಮ ತಿದ್ದುಪಡಿಗೆ ಕರಡು ಸಿದ್ಧಪಡಿಸಿದ್ದರು ಎಂಬುದನ್ನು ಬಹಿರಂಗಪಡಿಸುತ್ತದೆ. 'ಸ್ಟ್ಯಾಚುಟರಿ' ಎಂಬ ಪದದ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರಿಂದ, ಅದನ್ನು "ಈ ನಿಯಮಗಳಲ್ಲಿ ನಿರ್ದಿಷ್ಟಪಡಿಸಿದಂತೆ" ಎಂದು ತಿದ್ದುಪಡಿ ಮಾಡಲಾಯಿತು. ಅದೇ ದಿನ ಇಸಿಐ ಈ ಕರಡನ್ನು ಪರಿಶೀಲಿಸಿ, ಅನುಮೋದಿಸಿ, ಶೀಘ್ರದಲ್ಲೇ ಅಧಿಸೂಚಿಸುವಂತೆ ಕೋರಿತು.
ಅದೇ ದಿನ, ಅಂದರೆ ಡಿಸೆಂಬರ್ 20 ರಂದೇ ಕರಡನ್ನು ಹಿಂದಿಗೆ ಭಾಷಾಂತರಿಸಿ, ಅಧಿಕೃತ ಭಾಷಾ ವಿಭಾಗದಿಂದ ಪರಿಶೀಲಿಸಲಾಯಿತು. ತಕ್ಷಣವೇ ಕಾನೂನು ಸಚಿವಾಲಯವು ಅಂತಿಮ ಅಧಿಸೂಚನೆಯನ್ನು ಹೊರಡಿಸಿ, ಅಧಿಕೃತ ಗೆಜೆಟ್ನಲ್ಲಿ ಪ್ರಕಟಿಸಲು ಭಾರತ ಸರ್ಕಾರದ ಮುದ್ರಣಾಲಯಕ್ಕೆ ಕಳುಹಿಸಿಕೊಟ್ಟಿತು. ಈ ಮೂಲಕ ನಿಯಮಗಳ ತಿದ್ದುಪಡಿ ತಕ್ಷಣದಿಂದಲೇ ಜಾರಿಗೆ ಬಂದಿತು.
ನಿಯಮಗಳ ತಿದ್ದುಪಡಿಗೆ ಆಧಾರವಾಗಿದ್ದ ಆಯೋಗದ ಪ್ರಸ್ತಾಪವನ್ನು ಮತ್ತೊಮ್ಮೆ ಗಮನಿಸೋಣ. ಇಸಿಐ ನೀಡಿದ ಸಮರ್ಥನೆಯ ಹಿಂದೆ ಎರಡು ಪ್ರಮುಖ ಅಂಶಗಳಿದ್ದವು -
1. ಇಂತಹ ದಾಖಲೆಗಳನ್ನು ಕೋರಿ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು.
2. ಈ ಅರ್ಜಿಗಳ ಸಂಖ್ಯೆ ಎಷ್ಟೊಂದು ಹೆಚ್ಚಿತ್ತೆಂದರೆ, ಅದು ಆಡಳಿತಾತ್ಮಕ ಸಂಪನ್ಮೂಲಗಳ ಮೇಲೆ ವಿಪರೀತ ಹೊರೆಯುಂಟು ಮಾಡುತ್ತಿತ್ತು.
ನಿಯಮಗಳನ್ನು ತಿದ್ದುಪಡಿ ಮಾಡಿದ ನಂತರ, ಡಿಸೆಂಬರ್ 22 ರಂದು 'ಇಂಡಿಯನ್ ಎಕ್ಸ್ ಪ್ರೆಸ್' ಇಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ, ಆಯೋಗದಿಂದ ಹೆಚ್ಚಿನ ಸಂಖ್ಯೆಯ ಜನರು ವಿಡಿಯೊ ದೃಶ್ಯಾವಳಿಗಳನ್ನು ಕೋರುತ್ತಿದ್ದಾರೆ ಎಂದು ವರದಿ ಮಾಡಿತ್ತು.
ಇದೇ ಅಂಶಗಳ ಮೇಲೆ ಸೆಪ್ಟೆಂಬರ್ 2026 ರ ಆರ್ಟಿಐ ಪ್ರತ್ಯುತ್ತರವು ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ.
'ಹೆಚ್ಚುತ್ತಿರುವ ಬೇಡಿಕೆ'ಯ ಡೇಟಾ ಎಲ್ಲಿದೆ?
ಆರ್ಟಿಐ ಕಾರ್ಯಕರ್ತ ಕನ್ಹಯ್ಯ ಕುಮಾರ್ ಅವರು ಕಳೆದ ಐದು ವರ್ಷಗಳ ಮಾಹಿತಿಯನ್ನು ಕೋರಿ ಏಳು ಪ್ರಮುಖ ಅಂಶಗಳ ಅಡಿಯಲ್ಲಿ ಆರ್ಟಿಐ ಅರ್ಜಿ ಸಲ್ಲಿಸಿದ್ದರು.
ಅದರಲ್ಲಿ ಅತ್ಯಂತ ಪ್ರಮುಖ ಪ್ರಶ್ನೆಯೆಂದರೆ: ಪ್ರತಿ ವರ್ಷ ಎಷ್ಟು ಅರ್ಜಿಗಳು ಬಂದಿವೆ? ತದನಂತರ, ಬಂದ ಅರ್ಜಿಗಳ ವರ್ಗೀಕರಣದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಅಂದರೆ (ಎ) ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು, (ಬಿ) ಮಾಧ್ಯಮಗಳು, (ಸಿ) ಸಾರ್ವಜನಿಕರು ಅಥವಾ ಆರ್ಟಿಐ ಅರ್ಜಿದಾರರು, (ಡಿ) ನ್ಯಾಯಾಲಯಗಳು ಅಥವಾ ಕಾನೂನು ಜಾರಿ ಸಂಸ್ಥೆಗಳಿಂದ ಎಷ್ಟು ಅರ್ಜಿಗಳು ಸ್ವೀಕೃತವಾಗಿವೆ?
ಮತ್ತೊಂದು ಪ್ರಶ್ನೆಯೆಂದರೆ: ಎಷ್ಟು ಬಾರಿ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲಾಗಿದೆ ಮತ್ತು ಎಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ?
ಪ್ರತಿ ವರ್ಷ ಬಂದ ಅರ್ಜಿಗಳ ಸಂಖ್ಯೆಗೆ ಸಂಬಂಧಿಸಿದಂತೆ, ಮಾಹಿತಿ ಹಕ್ಕು ಕಾಯ್ದೆಯ 'ಸೆಕ್ಷನ್ 2(f)' ವ್ಯಾಪ್ತಿಯಲ್ಲಿ ಇಂತಹ ಯಾವುದೇ ಮಾಹಿತಿ ಆಯೋಗದ ಬಳಿ "ಯಾವುದೇ ಭೌತಿಕ ರೂಪದಲ್ಲಿ" ಲಭ್ಯವಿಲ್ಲ ಎಂದು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ (CPIO) ತಿಳಿಸಿದ್ದಾರೆ.
ಅಭ್ಯರ್ಥಿಗಳು, ಮಾಧ್ಯಮಗಳು ಅಥವಾ ಸಾರ್ವಜನಿಕರಿಂದ ಎಷ್ಟು ಅರ್ಜಿಗಳು ಸ್ವೀಕೃತವಾಗಿವೆ ಎಂಬ ಪ್ರಶ್ನೆಗೆ, ಅದನ್ನು ಸ್ಪಷ್ಟೀಕರಣ/ಅಭಿಪ್ರಾಯ/ಸಲಹೆ ಎಂಬ ವರ್ಗದಡಿ ಸೇರಿಸಿ ಉತ್ತರಿಸಲಾಗಿತ್ತು.
ಆದರೆ, ಅರ್ಜಿದಾರರು ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಬೇಕೇ ಅಥವಾ ಬೇಡವೇ ಎಂದಾಗಲಿ, ಅಥವಾ ಈ ವಿಷಯದಲ್ಲಿ ಆಯೋಗದ ಅಭಿಪ್ರಾಯವನ್ನಾಗಲಿ ಕೇಳಿರಲಿಲ್ಲ. ಬದಲಾಗಿ, ಬಂದ ಒಟ್ಟು ಅರ್ಜಿಗಳ ಸಂಖ್ಯೆ, ಅವುಗಳಲ್ಲಿ ಎಷ್ಟು ಅನುಮೋದನೆಗೊಂಡಿವೆ ಮತ್ತು ಎಷ್ಟು ತಿರಸ್ಕರಿಸಲ್ಪಟ್ಟಿವೆ ಎಂಬ ಮಾಹಿತಿಯನ್ನು ಮಾತ್ರ ಅರ್ಜಿದಾರರು ಕೋರಿದ್ದರು.
ಆಯೋಗದ ಹಳೆಯ ದಾಖಲೆಗಳೇ ಈ ಉತ್ತರಕ್ಕೆ ವಿರುದ್ಧವಾಗಿವೆ
2009 ರಲ್ಲಿ Compendium of Instructions on Conduct of Elections ಎಂಬ ಪ್ರಮುಖ ಮಾರ್ಗದರ್ಶಿ ದಾಖಲೆಯನ್ನು ಬಿಡುಗಡೆ ಮಾಡಲಾಗಿತ್ತು. ಈ ದಾಖಲೆಯ ಸಂಪುಟ 1 ರ ಪುಟ 26-27 ರಲ್ಲಿ, 'ವಿಡಿಯೊ ಟೇಪ್ಗಳ ಪರಿಶೀಲನೆ ಮತ್ತು ಪ್ರಮಾಣೀಕೃತ ಪ್ರತಿಗಳನ್ನು ಒದಗಿಸುವುದು' ಎಂಬ ವಿಭಾಗದ ಅಡಿಯಲ್ಲಿ ವಿಡಿಯೊ ಕ್ಯಾಸೆಟ್ಗಳನ್ನು ವೀಕ್ಷಿಸುವ ಮತ್ತು ಅವುಗಳ ಪ್ರಮಾಣೀಕೃತ ಪ್ರತಿಗಳನ್ನು ನೀಡುವ ಪ್ರಕ್ರಿಯೆಯನ್ನು ವಿವರಿಸಲಾಗಿದೆ.
ವಿಡಿಯೊ ರೆಕಾರ್ಡಿಂಗ್ಗಳನ್ನು ವೀಕ್ಷಿಸಲು ಮತ್ತು ಅವುಗಳ ಪ್ರತಿಗಳನ್ನು ಪಡೆಯಲು ಚುನಾವಣಾ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಮತ್ತು ಇತರ ಆಸಕ್ತರಿಂದ ಅರ್ಜಿಗಳು ಬಂದಿವೆ ಎಂಬುದನ್ನು ಈ ದಾಖಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಅಂದರೆ, ವಿಡಿಯೊ ರೆಕಾರ್ಡಿಂಗ್ಗಳನ್ನು ವೀಕ್ಷಿಸಲು ಅಥವಾ ಅವುಗಳ ಪ್ರತಿಗಳನ್ನು ಕೋರಿ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ಇತರ ಆಸಕ್ತರಿಂದ ಅರ್ಜಿಗಳು ಸ್ವೀಕೃತವಾಗಿದ್ದವು ಎಂಬುದನ್ನು ಆಯೋಗದ ಹಿಂದಿನ ಸೂಚನೆಗಳೇ ದೃಢೀಕರಿಸುತ್ತವೆ.
ಅದರ ಬೆನ್ನಲ್ಲೇ, ಇಂತಹ ಅರ್ಜಿಗಳನ್ನು ವಿಲೇವಾರಿ ಮಾಡಲು ಇಸಿಐ ಏಕರೂಪದ ಪ್ರಕ್ರಿಯೆಯನ್ನು ಜಾರಿಗೆ ತಂದಿತ್ತು.
ಈ ಮಾರ್ಗದರ್ಶಿ ಸೂಚನೆಗಳು ಕೇವಲ ಅರ್ಜಿಗಳನ್ನು ಪರಿಶೀಲಿಸುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ ವಿಡಿಯೋ ದಾಖಲೆಗಳ ಸಂರಕ್ಷಣೆ, ಅವುಗಳ ಪಟ್ಟಿ ತಯಾರಿಕೆ, ಪರಿಶೀಲನೆ ಹಾಗೂ ಪ್ರಮಾಣೀಕೃತ ಪ್ರತಿಗಳನ್ನು ಒದಗಿಸುವ ವ್ಯವಸ್ಥೆಯನ್ನೂ ರೂಪಿಸಿದ್ದವು ಎಂಬುದನ್ನು ಗಮನಿಸಬೇಕು.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಿಡಿಯೊ ರೆಕಾರ್ಡಿಂಗ್ಗಳನ್ನು ಕೋರುವುದು ಹೊಸದೇನೂ ಆಗಿರಲಿಲ್ಲ ಅಥವಾ ಅನಿರೀಕ್ಷಿತ ಬೆಳವಣಿಗೆಯೂ ಆಗಿರಲಿಲ್ಲ. ಇಂತಹ ಅರ್ಜಿಗಳನ್ನು ನಿಭಾಯಿಸಲು ಇಸಿಐ ವರ್ಷಗಳ ಹಿಂದೆಯೇ ಆಡಳಿತಾತ್ಮಕ ಪ್ರಕ್ರಿಯೆಯನ್ನು ಜಾರಿಗೆ ತಂದಿತ್ತು ಮತ್ತು ಅವುಗಳಿಗೆ ಸ್ಪಂದಿಸುವ ಅಭ್ಯಾಸವನ್ನೂ ಹೊಂದಿತ್ತು.
ಈ ಎಲ್ಲಾ ಅಂಶಗಳು 2026 ರ ಇಸಿಐ ಪ್ರತ್ಯುತ್ತರವನ್ನು ಇನ್ನಷ್ಟು ಪ್ರಮುಖವಾಗಿಸುತ್ತವೆ. ಏಕೆಂದರೆ, ಕಳೆದ ಐದು ವರ್ಷಗಳಲ್ಲಿ ಬಂದ ಇಂತಹ ಅರ್ಜಿಗಳ ಕುರಿತು ಯಾವುದೇ ಭೌತಿಕ ರೂಪದ ದಾಖಲೆಗಳು ಲಭ್ಯವಿಲ್ಲ ಎಂದು ಆಯೋಗ ಈಗ ಪ್ರತಿಪಾದಿಸಿದೆ.
ಈ ಸಂದರ್ಭದಲ್ಲಿ ಒಂದು ಪ್ರಮುಖ ಪ್ರಶ್ನೆ ಮೂಡುತ್ತದೆ. ನಿಯಮಗಳಲ್ಲಿ ತಿದ್ದುಪಡಿ ತರಲು ಪ್ರಸ್ತಾಪಿಸುವಾಗ, ಅಂತಹ ದಾಖಲೆಗಳನ್ನು ಒದಗಿಸಲು ಹೆಚ್ಚಿನ ಮಾನವಶಕ್ತಿಯ ಅಗತ್ಯವಿರುತ್ತದೆ ಮತ್ತು ಇದು ಪ್ರಾದೇಶಿಕ ಆಡಳಿತದ ಕಾರ್ಯನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಇಸಿಐ ವಾದಿಸಿತ್ತು. ಆದರೆ, ಕಳೆದ ಐದು ವರ್ಷಗಳಲ್ಲಿ ಎಷ್ಟು ಅರ್ಜಿಗಳು ಬಂದಿವೆ ಎಂಬುದರ ದತ್ತಾಂಶವೇ ಆಯೋಗದ ಬಳಿ ಇಲ್ಲದಿದ್ದರೆ, ದೇಶಾದ್ಯಂತ ಜಾರಿಗೆ ತಂದ ಈ ನೀತಿ ನಿರ್ಧಾರಕ್ಕೆ ಆಧಾರವೇನು? ಮತ್ತು ಕಾನೂನು ಸಚಿವಾಲಯವು ಆಯೋಗದ ಈ ಪ್ರಸ್ತಾಪವನ್ನು ಹೇಗೆ ಮೌಲ್ಯಮಾಪನ ಮಾಡಿತು?
ಈ ವರದಿಗೆ ಸಂಬಂಧಿಸಿದಂತೆ ಇಸಿಐ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ನಿಲುವನ್ನು ಕೋರಿ 2026 ಅಕ್ಟೋಬರ್ 9ರಂದು ಇಮೇಲ್ ಮೂಲಕ ಪ್ರಶ್ನೆಗಳನ್ನು ಕಳುಹಿಸಲಾಗಿತ್ತು. ಈ ವರದಿ ಪ್ರಕಟವಾಗುವವರೆಗೂ ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಇದರ ನಡುವೆ, ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿಡುವ ಕಾಲಾವಧಿಯನ್ನೂ ಸಹ ಕಡಿಮೆ ಮಾಡಲಾಗಿದೆ.
ಡಿಸೆಂಬರ್ 2024 ರ ನಿಯಮ 93 ರ ತಿದ್ದುಪಡಿಯ ನಂತರ, ಚುನಾವಣಾ ಆಯೋಗವು ಮೇ 2025 ರಲ್ಲಿ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ, ವಿಡಿಯೋಗ್ರಫಿ ಮತ್ತು ಫೋಟೋಗಳ ಸಂರಕ್ಷಣಾ ಅವಧಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಯನ್ನು ಜಾರಿಗೆ ತಂದಿತು.
2025 ಮೇ 30ರಂದು ಹೊರಡಿಸಲಾದ ಸೂಚನೆಗಳ ಪ್ರಕಾರ, ಫಲಿತಾಂಶ ಪ್ರಕಟವಾದ ನಂತರ ಚುನಾವಣಾ ವಿಡಿಯೊಗಳು ಮತ್ತು ಫೋಟೊಗಳನ್ನು ಸಾಮಾನ್ಯ ರೀತಿಯಲ್ಲಿ 45 ದಿನಗಳ ಅವಧಿಗೆ ಮಾತ್ರ ಸಂಗ್ರಹಿಸಿಡಲಾಗುತ್ತದೆ . ತದನಂತರ ಈ ದಾಖಲೆಗಳನ್ನು ನಾಶಪಡಿಸಬಹುದು. ಈ ಹಿಂದೆ, ಚುನಾವಣೆಯ ವಿವಿಧ ಹಂತಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂರಕ್ಷಿಸಲು ಮೂರು ತಿಂಗಳಿಂದ ಒಂದು ವರ್ಷದವರೆಗಿನ ವಿಭಿನ್ನ ಕಾಲಮಿತಿಗಳು ಜಾರಿಯಲ್ಲಿದ್ದವು.
ಚುನಾವಣಾ ದಾಖಲೆಗಳ ಇತ್ತೀಚಿನ ದುರುಪಯೋಗದ ಘಟನೆಗಳನ್ನು ಇಸಿಐ ಈ ಬದಲಾವಣೆಗೆ ಕಾರಣವಾಗಿ ಉಲ್ಲೇಖಿಸಿತ್ತು. ಚುನಾವಣಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರ ವ್ಯಕ್ತಿಗಳು ಈ ದಾಖಲೆಗಳ ಭಾಗಗಳನ್ನು ಸಂದರ್ಭಕ್ಕೆ ಹೊರತಾಗಿ ಬಳಸಿಕೊಳ್ಳುತ್ತಿದ್ದಾರೆ, ಆ ಮೂಲಕ ಸುಳ್ಳು ಮಾಹಿತಿ ಮತ್ತು ದುರುದ್ದೇಶಪೂರಿತ ಅಪಪ್ರಚಾರವನ್ನು ಹರಡುತ್ತಿದ್ದಾರೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಇಸಿಐ ಮಾಡಿದ ಈ ಬದಲಾವಣೆಗೆ ಕೆಲವು ತಿಂಗಳ ಮೊದಲು, ಅಂದರೆ ಜನವರಿ 2025 ರಲ್ಲಿ, ಬಾಕಿ ಇರುವ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಮತದಾನ ಕೇಂದ್ರಗಳ ವಿಡಿಯೊ ರೆಕಾರ್ಡಿಂಗ್ಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಅಂದರೆ, ಒಂದೆಡೆ ಚುನಾವಣಾ ದಾಖಲೆಗಳಿಗೆ ಸಾರ್ವಜನಿಕ ಪ್ರವೇಶವನ್ನು ಸೀಮಿತಗೊಳಿಸಲು ಮತ್ತು ಅವುಗಳನ್ನು ಸಂಗ್ರಹಿಸಿಡುವ ಅವಧಿಯನ್ನು ಕಡಿಮೆ ಮಾಡಲು ಆಯೋಗ ನಿರ್ಧರಿಸಿದೆ. ಇನ್ನೊಂದೆಡೆ ಕಳೆದ ಐದು ವರ್ಷಗಳಲ್ಲಿ ಇಂತಹ ದಾಖಲೆಗಳಿಗಾಗಿ ಎಷ್ಟು ಅರ್ಜಿಗಳು ಸ್ವೀಕೃತವಾಗಿವೆ ಎಂಬುದನ್ನು ಹೇಳಲು ಅದರಿಂದ ಸಾಧ್ಯವಾಗುತ್ತಿಲ್ಲ .
ಚುನಾವಣಾ ಪಾರದರ್ಶಕತೆಗೆ ಸಂಬಂಧಿಸಿದ ಈ ನಿರ್ಧಾರಗಳು, ಸ್ವೀಕರಿಸಿದ ಅರ್ಜಿಗಳ ನೈಜ ಸಂಖ್ಯೆ ಮತ್ತು ಅವುಗಳ ಪ್ರಭಾವದ ಕುರಿತಾದ ಯಾವುದೇ ವ್ಯವಸ್ಥಿತ ಮೌಲ್ಯಮಾಪನದ ಬೆಂಬಲವನ್ನು ಹೊಂದಿದ್ದವೇ? ಎಂಬ ಪ್ರಮುಖ ಪ್ರಶ್ನೆಯೊಂದನ್ನು ಇದು ಎತ್ತುತ್ತಿದೆ.
ಚಂಡೀಗಢ ಮೇಯರ್ ಚುನಾವಣೆ
ಜನವರಿ 2024 ರ ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆಯ ಸಂದರ್ಭದಲ್ಲಿ, ಅಧಿಕಾರಿಯೊಬ್ಬರು ಮತ ಎಣಿಕೆ ಪ್ರಕ್ರಿಯೆಯನ್ನು ತಿರುಚುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು . ಇದರ ನಂತರ, ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಚುನಾವಣೆ ಫಲಿತಾಂಶವನ್ನು ರದ್ದುಗೊಳಿಸಿತಲ್ಲದೆ, ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ನ ಜಂಟಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ಕಾನೂನುಬದ್ಧವಾಗಿ ಆಯ್ಕೆಯಾದ ಮೇಯರ್ ಎಂದು ಘೋಷಿಸಿತು.



