ಕೋಲ್ಕತ್ತ: ನವರಾತ್ರಿ ಮತ್ತು ದುರ್ಗಾಪೂಜೆ ಸಂಭ್ರಮದ ನಡುವೆಯೇ ದೆಹಲಿಯಲ್ಲಿ 'ತ್ರಿವರ್ಣ ಧ್ವಜ ಮೆರವಣಿಗೆ' ಆಯೋಜಿಸುವ ಮೂಲಕ ಸಿಜೆಪಿ, ಹಬ್ಬದ ಆಚರಣೆಗೆ ಅಡ್ಡಿಪಡಿಸುತ್ತಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಹಿರಿಯ ನಾಯಕ ದಿಲೀಪ್ ಘೋಷ್ ಅವರು ಶುಕ್ರವಾರ(ಅ.16) ಆರೋಪಿಸಿದ್ದಾರೆ.
ಎಸ್‌ಐಆರ್ ವೇಳೆ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಸಿಜೆಪಿ ದೆಹಲಿಯಲ್ಲಿ 'ತ್ರಿವರ್ಣ ಧ್ವಜ ಮೆರವಣಿಗೆ'ಯನ್ನು ಹಮ್ಮಿಕೊಂಡಿದೆ.
ಭಾರತವು ಧಾರ್ಮಿಕ ಭಾವನೆಗಳನ್ನೊಳಗೊಂಡ ದೇಶ. ಇಲ್ಲಿನ ಸಂಪ್ರದಾಯದಂತೆ ನವರಾತ್ರಿ ಮತ್ತು ದುರ್ಗಾಪೂಜೆಯನ್ನು ದೇಶದಾದ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ. ಇಂತಹ ಸಮಯದಲ್ಲಿ ರಾಜಕೀಯ ಪ್ರತಿಭಟನೆಗಳನ್ನು ನಡೆಸುವ ಮೂಲಕ ಅವರು ಜನರ ಸಂಭ್ರಮಾಚರಣೆಗೆ ಭಂಗ ತರುತ್ತಿದ್ದಾರೆ ಹಾಗೂ ದೇಶದಲ್ಲಿ ಉದ್ವಿಗ್ನತೆಯನ್ನು ಹರಡುತ್ತಿದ್ದಾರೆ. ಸಾರ್ವಜನಿಕರೇ ಅವರಿಗೆ ತಕ್ಕ ಉತ್ತರವನ್ನು ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಧಾರ್ಮಿಕ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವ ಸುದೀರ್ಘ ಪರಂಪರೆ ಭಾರತಕ್ಕಿದೆ. ಹಬ್ಬದ ಸಮಯದಲ್ಲಿ ಇಂತಹ ರಾಜಕೀಯ ಪ್ರತಿಭಟನೆಗಳನ್ನು ನಡೆಸುವುದರಿಂದ ದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದೆ. ಈ ಮೆರವಣಿಗೆಯ ಆಯೋಜಕರು ಜನರು ಶಾಂತಿಯುತವಾಗಿ ಹಬ್ಬವನ್ನು ಆಚರಿಸುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಸಿಜೆಪಿ ನಡೆಸಲು ಉದ್ದೇಶಿಸಿರುವ ತ್ರಿವರ್ಣ ಧ್ವಜ ಮೆರವಣಿಗೆ ಹಿನ್ನೆಲೆಯಲ್ಲಿ 6,000ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) 220 ತುಕಡಿಗಳನ್ನು ನಿಯೋಜಿಸಲಾಗಿದೆ.


