ಪೆರ್ಲ: ಮಕ್ಕಳು ಭವಿಷ್ಯದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಗಟ್ಟಿಯಾದ ಬೇರುಗಳಾಗಬೇಕು. ಮಕ್ಕಳ ಸೃಜನಶೀಲ ಪ್ರತಿಭೆಗಳನ್ನು ಬೆಳೆಸುವಲ್ಲಿ ಗ್ರಂಥಾಲಯಗಳ ಪಾತ್ರ ಮಹತ್ವದ್ದಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಪಾರ್ತಿಸುಬ್ಬ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಶಂಕರ ರೈ ಮಾಸ್ತರ್ ಹೇಳಿದರು.
ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್, ಎಣ್ಮಕಜೆ ಗ್ರಂಥಾಲಯ ನೇತೃತ್ವ ಸಮಿತಿ ಹಾಗೂ ನೇತಾಜಿ ಸಾರ್ವಜನಿಕ ಗ್ರಂಥಾಲಯದ ಸಹಯೋಗದಲ್ಲಿ ಪೆರ್ಲದಲ್ಲಿ ಆಯೋಜಿಸಲಾದ ಎಣ್ಮಕಜೆ ಬಾಲವೇದಿಕೆ ಸೃಜನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಂಥಾಲಯವೂ ಬಾಲವೇದಿಕೆಯ ಮಕ್ಕಳನ್ನು ಪೋಷಿಸಿ, ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ. ಮಕ್ಕಳು ಸೃಜನಾತ್ಮಕವಾಗಿ ಬೆಳೆಯಲು ಗ್ರಂಥಾಲಯಗಳ ಒಡನಾಟವೇ ಉತ್ತಮ ವೇದಿಕೆಯಾಗಿದೆ. ಸೃಜನೋತ್ಸವವು ಮಕ್ಕಳು ತಮ್ಮ ಪ್ರತಿಭೆಗಳನ್ನು ಸ್ವತಂತ್ರವಾಗಿ ಪ್ರದರ್ಶಿಸಲು ಅವಕಾಶ ಕಲ್ಪಿಸುವ ಮಕ್ಕಳ ಹಬ್ಬವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಸಲಾಹುದ್ದೀನ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯರಾದ ಉದಯ ಸಾರಂಗ್, ರಾಮಚಂದ್ರ ಮೊಳಕ್ಕಾಲು, ರಂಜಿತ್ ಮಾಸ್ತರ್, ನಿಶ್ಮಿತಾ ಟೀಚರ್, ಶ್ರೀವಿದ್ಯಾ ಟೀಚರ್, ವಿನೋದ್ ಅಮೇಕ್ಕಳ, ವಿಶ್ವರಾಜ್, ಪಿಟಿಎ ಅಧ್ಯಕ್ಷ ಪ್ರಕಾಶ್ ರೈ, ಪಂಚಾಯತ್ ಸದಸ್ಯೆ ಸೌಧಾಭಿ ಹನೀಫ್ ಹಾಗೂ ಯುವಧಾರಾ ಗ್ರಂಥಾಲಯದ ಕಾರ್ಯದರ್ಶಿ ವೈ. ನಾರಾಯಣ ಉಪಸ್ಥಿತರಿದ್ದರು.
ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಬಶೀರ್ ಕೊಟ್ಟುಡೇಲ್ ಬಹುಮಾನ ವಿತರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಎಣ್ಮಕಜೆ ಗ್ರಂಥಾಲಯ ನೇತೃತ್ವ ಸಮಿತಿಯ ಸಂಚಾಲಕ ರಾಮಕೃಷ್ಣ ರೈ ಸ್ವಾಗತಿಸಿ, ಗ್ರಂಥಪಾಲಕಿ ಉಪಾ ವಂದಿಸಿದರು.

.jpg)
.jpg)
