ಕಾಸರಗೋಡು: ರಾಷ್ಟ್ರೀಯ ಪ್ರಜ್ಞೆಯಸಂಕೇತವಾಗಿರುವ ವಂದೇ ಮಾತರಂ ವಿರುದ್ಧದ ಪ್ರತಿಭಟನೆ ದೇಶದ ಏಕತೆ ಮತ್ತು ರಾಷ್ಟ್ರೀಯ ಭಾವೈಕ್ಯ ದುರ್ಬಲಗೊಳಿಸುವ ಪ್ರಯತ್ನವಾಗಿದ್ದು, ಇದರ ಹಿಂದಿರುವ ಶಕ್ತಿ ಹಾಗೂ ಸಿದ್ದಾಂತಗಳನ್ನು ಗುರುತಿಸಬೇಕಾಗಿದೆ ಎಂದು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೇಳಿದ್ದಾರೆ.
ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್ನಲ್ಲಿ ವಂದೇಮಾತರಂನ 150ನೇ ವಾರ್ಷಿಕೋತ್ಸವದ ಅಂಗವಾಗಿ ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
'ವಂದೇ ಮಾತರಂ' ರಾಷ್ಟ್ರೀಯ ಪ್ರಜ್ಞೆಯ ಸಂಕೇತವಾಗಿದ್ದು, ವಸಾಹತುಶಾಹಿ ಆಳ್ವಿಕೆಯ ವಿರುದ್ಧ ದೇಶವನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ವಂದೇಮಾತರಂ ಹಾಡು ವಸಾಹತುಶಾಹಿ ಆಳ್ವಿಕೆಯ ಅಡಿಪಾಯವನ್ನು ಅಲ್ಲಾಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಧೀಶಕ್ತಿ ತಂದುಕೊಟ್ಟಿತ್ತು. ವಂದೇ ಮಾತರಂನ ಇತಿಹಾಸವನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ, ಸಮಗ್ರ ಸಂಶೋಧನೆಯ ಮೂಲಕ ದಾಖಲಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಪ್ರತಿಭಟನೆ ವಿಷಾದನೀಯ:
ರಾಷ್ಟ್ರೀಯ ವಿಚಾರ ಸಂಕಿರಣದ ವಿರುದ್ಧ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರತಿಭಟನೆಯನ್ನು ಖಂಡಿಸಿದ ರಾಜ್ಯಪಾಲರು, ದೆಹಲಿಯಿಂದ ಸ್ಥಳೀಯ ಮಟ್ಟದವರೆಗೆ ಇಂತಹ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದರ ಹಿಂದಿರುವ ಶಕ್ತಿಗಳ ಬಗ್ಗೆ ಸಮಾಜವು ಜಾಗರೂಕರಾಗಿರಬೇಕು ಎಂದು ತಿಳಿಸಿದರು. ಏಕ ಭಾರತ, ಶ್ರೇಷ್ಠ ಭಾರತ' ಪರಿಕಲ್ಪನೆಯ ಮೂಲಕ ದೇಶದ ಏಕತೆಯನ್ನು ಬಲಪಡಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ದೇಶವು ಒಗ್ಗಟ್ಟಾಗಿದ್ದರೆ ಯಾವ ಶಕ್ತಿಗೂ ಸವಾಲು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಾಹಿತ್ಯ ಅಕಾಡೆಮಿಯ ಮಲಯಾಳಂ ಸಲಹಾ ಮಂಡಳಿಯ ಸಂಚಾಲಕ ಕೆ. ಪಿ. ರಾಮನುಣ್ಣಿ ಸಮಾರೋಪ ಭಾಷಣ ಮಾಡಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪವನ್ಪುತ್ರ ಬದಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್, ಖ್ಯಾತ ವಿದ್ವಾಂಸೆ ಪೆÇ್ರ. ಸುನೈನಾ ಸಿಂಗ್ ಮತ್ತು ಸಾಹಿತ್ಯ ಅಕಾಡೆಮಿಯ ಸಂಪಾದಕಿ (ಇಂಗ್ಲಿಷ್) ಸ್ನೇಹಾ ಚೌಧರಿ ಉಪಸ್ಥಿತರಿದ್ದರು.



