ನವದೆಹಲಿ: ಕಳೆದ ವಾರಾಂತ್ಯದಲ್ಲಿ ಆಂಧ್ರಪ್ರದೇಶ ಪೊಲೀಸರಿಂದ ಬಂಧಿಸಲ್ಪಟ್ಟಿರುವ ವಿಶಾಖಪಟ್ಟಣಂ ನೌಕಾ ನೆಲೆಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ನೌಕಾಪಡೆ ಸಿಬ್ಬಂದಿ ಸೇರಿದಂತೆ ಇಬ್ಬರು ವ್ಯಕ್ತಿಗಳು ಪಾಕಿಸ್ತಾನದ ಬೇಹುಗಾರರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಹಾಗೂ ಅವರಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ನೌಕಾಪಡೆ ಅಧಿಕಾರಿಗಳ ಚಾಲಕನಾಗಿದ್ದ ಅನ್ನಂ ಸಾಯಿ ವರಪ್ರಸಾದ್ ಮತ್ತು ವಿಶಾಖಪಟ್ಟಣಂ ನೌಕಾ ನೆಲೆಗೆ ನಿಯೋಜಿತನಾಗಿದ್ದ ಭಾರತೀಯ ನೌಕಾಪಡೆ ಸಿಬ್ಬಂದಿ ಪ್ರದೀಪ್ ಮುಖರ್ಜಿ ಎಂದು ಗುರುತಿಸಲಾಗಿದೆ.
ಆರೋಪಿಗಳು ಗುಪ್ತ ಸಂವಹನ ಮಾಧ್ಯಮಗಳ ಮೂಲಕ ವಿಶಾಖಪಟ್ಟಣಂ ಹಾಗೂ ದೇಶದ ಇತರ ಭಾಗಗಳಲ್ಲಿರುವ ರಕ್ಷಣಾ ನೆಲೆಗಳು ಮತ್ತು ಆಯಕಟ್ಟಿನ ಸ್ಥಳಗಳಿಗೆ ಸಂಬಂಧಿಸಿದ ಸೂಕ್ಷ್ಮ ಮತ್ತು ಗೌಪ್ಯ ಮಾಹಿತಿಯನ್ನು ಸಂಗ್ರಹಿಸಿ ರವಾನಿಸಿದ್ದಾರೆ ಎಂದು ರಾಜ್ಯ ಪೊಲೀಸರ ಪ್ರತಿ ಬೇಹುಗಾರಿಕೆ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
''ಭಾರತದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಗೂಢಚರ್ಯೆ ಪಿತೂರಿಯ ಭಾಗವಾಗಿ, ಪಾಕಿಸ್ತಾನ ಮೂಲದ ಗುಪ್ತಚರ ಏಜೆಂಟರಿಗೆ ಅವರು ಈ ಮಾಹಿತಿಯನ್ನು ರವಾನಿಸಿದ್ದಾರೆ'' ಎಂದು ಪ್ರಕಟಣೆ ಹೇಳಿದೆ.
ಈ ಪ್ರಕರಣವು ಸೆಪ್ಟೆಂಬರ್ 2ರಂದು ವಿಜಯವಾಡದ ಸಿಐಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆರೋಪಿಗಳ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ, ಭಾರತದ ವಿರುದ್ಧ ಯುದ್ಧ ಸಾರುವುದು ಹಾಗೂ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ದೇಶದ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸಿದ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ.
ಶಂಕಿತರಿಂದ ವಶಪಡಿಸಿಕೊಳ್ಳಲಾದ ಎಲೆಕ್ಟ್ರಾನಿಕ್ ಸಾಧನಗಳು ಅವರ ಸಂವಹನ ಮತ್ತು ಚಟುವಟಿಕೆಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಆದರೆ, ಪ್ರಕರಣದ ಸೂಕ್ಷ್ಮತೆ ಮತ್ತು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.



