HEALTH TIPS

'ಮುನ್ನಾ ಭಾಯ್' ಶೈಲಿಯ ವ್ಯಂಗ್ಯ | 'ಕಾರ್ಯಕ್ರಮದ ಪೂರ್ವನಿರ್ಧರಿತ ಸಂಭಾಷಣೆಯ ಭಾಗ': ವಿವಾದಿತ ಹೇಳಿಕೆಗೆ ಸಂಜಯ್ ದತ್ ಸ್ಪಷ್ಟನೆ

ಮುಂಬೈ : 'ಭಾರತದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ' ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ನಟ ಸಂಜಯ್ ದತ್ ಸ್ಪಷ್ಟನೆ ನೀಡಿದ್ದಾರೆ. 


ಶೇಖರ್ ಸುಮನ್ ನಡೆಸಿಕೊಡುವ 'ಶೇಖರ್ ಟುನೈಟ್' ಟಾಕ್‌ಶೋನಲ್ಲಿ ಗಾಂಧಿ ಜಯಂತಿಯಂದು ಭಾಗವಹಿಸಿದ್ದ ಸಂಜಯ್ ದತ್, ದೇಶದ ಪ್ರಸ್ತುತ ಸ್ಥಿತಿಗತಿ ಕುರಿತು ಮಾತನಾಡಿದ್ದರು. 

ಈ ವೇಳೆ ಭಾರತದಲ್ಲಿ ತಮಗೆ ಈಗ 'ಶಾಂತಿ'ಯ ಭಾವನೆ ಮೂಡುತ್ತಿಲ್ಲ ಎಂದು ಹೇಳಿದ್ದರು. ಅವರ ಹೇಳಿಕೆಯ ಕೆಲವು ಭಾಗಗಳು ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದವು.

ಈ ಕುರಿತು 'X'ನಲ್ಲಿ ಸ್ಪಷ್ಟನೆ ನೀಡಿರುವ ಸಂಜಯ್ ದತ್, ''ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯ ಭಾವನೆಗಳಿಗೆ ನೋವುಂಟು ಮಾಡುವುದು, ಅವಮಾನಿಸುವುದು ಅಥವಾ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ'' ಎಂದು ಹೇಳಿದ್ದಾರೆ.

''ನಾನು ಆ ಮಾತುಗಳನ್ನು ಹಗುರವಾದ ಮತ್ತು ಹಾಸ್ಯಭರಿತ ಸಂಭಾಷಣೆಯ ಭಾಗವಾಗಿ ಆಡಿದ್ದೆ. 'ಮುನ್ನಾ ಭಾಯ್' ಚಿತ್ರಗಳಲ್ಲಿನ ಹಾಸ್ಯ ಮತ್ತು ವ್ಯಂಗ್ಯದಂತೆಯೇ, ವಿಶೇಷವಾಗಿ 'ಗಾಂಧಿಗಿರಿ' ಪರಿಕಲ್ಪನೆಯಂತೆ ಪ್ರೀತಿ, ಆತ್ಮೀಯತೆ, ಒಗ್ಗಟ್ಟು ಮತ್ತು ಸೌಹಾರ್ದತೆಯ ಸಂದೇಶ ಸಾರುವುದು ಇದರ ಹಿಂದಿನ ಉದ್ದೇಶವಾಗಿತ್ತು. ಆದರೆ, ದುರದೃಷ್ಟವಶಾತ್ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ'' ಎಂದು ಅವರು ತಿಳಿಸಿದ್ದಾರೆ.

'ದೇಶದಲ್ಲಿ ಶಾಂತಿ ನೆಲೆಸಬೇಕು' :

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಂಜಯ್ ದತ್, ''ಈ ದೇಶದ ಜನರು ತುಂಬಾ ಒಳ್ಳೆಯವರು. ಇಲ್ಲಿ ಶಾಂತಿ ನೆಲೆಸಬೇಕು. ಆದರೆ ನಮ್ಮ ದೇಶದಲ್ಲಿ ಆ ಶಾಂತಿಯನ್ನು ನನಗೆ ಈಗ ಅನುಭವಿಸಲು ಸಾಧ್ಯವಾಗುತ್ತಿಲ್ಲ. ನಾವು ಭಾರತೀಯರು ವಿಶಾಲ ಹೃದಯದವರು ಮತ್ತು ಅತಿಥಿ ಸತ್ಕಾರದಲ್ಲಿ ನಂಬಿಕೆ ಇಟ್ಟವರು. ನಾವು ಬಹಳಷ್ಟು ನೀಡಿದ್ದೇವೆ ಮತ್ತು ಮುಂದೆಯೂ ಹಾಗೆಯೇ ಇರಬೇಕು. ಆ ದಿನಗಳು ಶೀಘ್ರದಲ್ಲೇ ಮರಳಲಿ ಎಂದು ನಾನು ಶಿವನಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಹೇಳಿದ್ದರು.

'ನಾಲ್ಕನೇ ಮಂಗ ಬೇಕಾಗಿದೆ' :

ಸಂಭಾಷಣೆಯ ವೇಳೆ ತಮ್ಮ ಜನಪ್ರಿಯ 'ಮುನ್ನಾ ಭಾಯ್' ಪಾತ್ರವನ್ನು ರಾಜಕೀಯ ವ್ಯಂಗ್ಯದೊಂದಿಗೆ ಬೆರೆಸಿದ ಅವರು, ತಮಾಷೆಯಾಗಿ ಐದು ನಿಮಿಷಗಳ ಕಾಲ ತಾವು ಭಾರತದ ಪ್ರಧಾನಿಯಾಗಿದ್ದರೆ ಎಂಬ ಕಲ್ಪನೆಯೊಂದಿಗೆ 'ಮುನ್ನಾ ಭಾಯ್' ಶೈಲಿಯಲ್ಲಿ ಕಾಲ್ಪನಿಕ ಭಾಷಣ ಮಾಡಿದ್ದರು.

''ನಾನು ಗಾಂಧೀಜಿಯನ್ನು ಬಹಳವಾಗಿ ಪ್ರೀತಿಸುತ್ತೇನೆ. ಗಾಂಧೀಜಿಯವರ ಮೂರು ಮಂಗಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ. ಆದರೆ ಇಂದು ನನಗೆ ನಾಲ್ಕನೇ ಮಂಗವೊಂದು ಬೇಕಾಗಿದೆ. ಯಾರಾದರೂ ಕೆಟ್ಟದ್ದನ್ನು ಕಂಡರೆ, ಅದನ್ನು ಯಾರು ಸರಿಪಡಿಸುತ್ತಾರೆ?'' ಎಂದು ಅವರು ಪ್ರಶ್ನಿಸಿದ್ದರು.

ಈ ಹೇಳಿಕೆಗಳ ಕೆಲವು ಭಾಗಗಳು ಆನ್‌ಲೈನ್‌ ನಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದ್ದವು. ಸಂಭಾಷಣೆಯ ಸಂದರ್ಭಕ್ಕಿಂತ ಭಿನ್ನವಾಗಿ ತಮ್ಮ ಮಾತುಗಳನ್ನು ಅರ್ಥೈಸಲಾಗಿದೆ ಎಂದು ಸಂಜಯ್ ದತ್ ಸ್ಪಷ್ಟಪಡಿಸಿದ್ದಾರೆ.

ಶೇಖರ್ ಸುಮನ್ ನಡೆಸಿಕೊಡುವ 'ಶೇಖರ್ ಟುನೈಟ್' ಟಾಕ್‌ಶೋ ಮೇ 15ರಂದು ಪ್ರಸಾರ ಆರಂಭಿಸಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries