HEALTH TIPS

ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಉತ್ತರಾಖಂಡದ ಅಂಕಿತಾ ಪೋಷಕರನ್ನು ವಶಕ್ಕೆ ಪಡೆದ ಪೊಲೀಸರು

ನವದೆಹಲಿ:  ಉತ್ತರಾಖಂಡದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಅಂಕಿತಾ ಅವರ ಪೋಷಕರು ಹಾಗೂ ಕಾಂಗ್ರೆಸ್‌ ನ ಹಲವು ನಾಯಕರನ್ನು ದಿಲ್ಲಿ ಪೊಲೀಸರು ಗುರುವಾರ ಬೆಳಗಿನ ಜಾವ ವಶಕ್ಕೆ ಪಡೆದರು. 


ಬೆಳಿಗ್ಗೆ 4 ಗಂಟೆ ಸುಮಾರಿಗೆ ವಶಕ್ಕೆ ಪಡೆದಿದ್ದ ಪ್ರತಿಭಟನಾಕಾರರನ್ನು 5 ಗಂಟೆ ಸುಮಾರಿಗೆ ಬಿಡುಗಡೆ ಮಾಡಲಾಯಿತು ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.

ಅಂಕಿತಾ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವವರನ್ನು ಹಾಗೂ ಸಿಕ್ಕಿಂ ರಾಜ್ಯಪಾಲರಾಗಿ ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್ ಅವರ ನೇಮಕವನ್ನು ಪ್ರಶ್ನಿಸುತ್ತಿರುವವರನ್ನು ಅಧಿಕಾರಿಗಳು ಗುರಿಯಾಗಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಪೊಲೀಸ್ ಕ್ರಮವನ್ನು ಸುಪ್ರಿಯಾ ಶ್ರಿನೇತ್, ಪವನ್ ಖೇರಾ ಮತ್ತು ಖಾಝಿ ನಿಝಾಮುದ್ದೀನ್ ಖಂಡಿಸಿದ್ದಾರೆ.

'ಅಂಕಿತಾ ಅವರ ಪೋಷಕರು ನಾಲ್ಕು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಿಸುವ ಬದಲು ಸರ್ಕಾರ ಅವರನ್ನು ವಶಕ್ಕೆ ಪಡೆಯುತ್ತಿದೆ. ಪೋಷಕರ ಕಣ್ಣೀರು ಸರ್ಕಾರಕ್ಕೆ ದುಬಾರಿಯಾಗಿ ಪರಿಣಮಿಸಲಿದೆ' ಎಂದು ಪ್ರತಿಭಟನಾಕಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಕ್ರಮವು ಪ್ರಜಾಪ್ರಭುತ್ವದ ಸ್ವಾತಂತ್ರ್ಯದ ಅವನತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಸಂಸದ ಪವನ್ ಖೇರಾ ಆರೋಪಿಸಿದ್ದಾರೆ.

'ಇದು ಕ್ರೌರ್ಯ. ಇಂಡಿಯಾ ಗೇಟ್ ಬಳಿ ಪ್ರಜಾಪ್ರಭುತ್ವ ಅಂತ್ಯಗೊಳ್ಳುತ್ತಿರುವುದನ್ನು ಕಾಣಬಹುದು. ಬೆಳಿಗ್ಗೆ 4 ಗಂಟೆಗೆ ಈ ಪರಿಸ್ಥಿತಿ ಎದುರಾಗಿದೆ' ಎಂದು ಅವರು ಹೇಳಿದ್ದಾರೆ.

ಆರೋಪ ಎದುರಿಸುತ್ತಿರುವ ವ್ಯಕ್ತಿಯೊಬ್ಬರನ್ನು ಸಾಂವಿಧಾನಿಕ ಹುದ್ದೆಗೆ ನೇಮಕ ಮಾಡಲಾಗುತ್ತಿದೆ. ಆದರೆ ಅವರ ವಿರುದ್ಧ ಪ್ರತಿಭಟಿಸುತ್ತಿರುವವರನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಖೇರಾ ಆಕ್ಷೇಪಿಸಿದ್ದಾರೆ.

'ಆರೋಪ ಎದುರಿಸುತ್ತಿರುವ ವ್ಯಕ್ತಿ ರಾಜ್ಯಪಾಲರಾಗುತ್ತಾರೆ; ಆದರೆ ಅಂಕಿತಾ ಅವರ ಪೋಷಕರು ಜೈಲಿಗೆ ಹೋಗಬೇಕೇ? ಅತ್ಯಾಚಾರದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ವಿರುದ್ಧ ಪ್ರತಿಭಟಿಸಿದರೆ ನಾವು ಜೈಲಿಗೆ ಹೋಗಬೇಕು, ಆದರೆ ಆರೋಪ ಎದುರಿಸುತ್ತಿರುವ ವ್ಯಕ್ತಿ ರಾಜ್ಯಪಾಲರಾಗುತ್ತಾರೆ. ಇದೇನಾ ಪ್ರಜಾಪ್ರಭುತ್ವ?' ಎಂದು ಅವರು ಪ್ರಶ್ನಿಸಿದ್ದಾರೆ.

ನ್ಯಾಯಕ್ಕಾಗಿ ಹೋರಾಡುತ್ತಿರುವ ಅಂಕಿತಾ ಅವರ ಪೋಷಕರ ವಿರುದ್ಧ ಸರ್ಕಾರ ನಿರ್ದಯವಾಗಿ ನಡೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಆರೋಪಿಸಿದ್ದಾರೆ. ಮಹಿಳಾ ಪ್ರತಿಭಟನಾಕಾರರನ್ನು ಬೆಳಿಗ್ಗೆ 6 ಗಂಟೆಗೂ ಮುನ್ನ ವಶಕ್ಕೆ ಪಡೆದಿರುವುದನ್ನೂ ಅವರು ಪ್ರಶ್ನಿಸಿದ್ದಾರೆ.

'ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಅಸಹಾಯಕ ಪೋಷಕರ ವಿರುದ್ಧ ಇಂತಹ ಕಠಿಣ ಕ್ರಮ ಕೈಗೊಂಡಿರುವುದು ಏಕೆ? ಅವರಿಗೆ ನ್ಯಾಯ ಒದಗಿಸುವ ಬದಲು, ಪ್ರಕರಣದೊಂದಿಗೆ ನಂಟಿದೆ ಎಂದು ಆರೋಪಿಸಲಾಗಿರುವ ವ್ಯಕ್ತಿಯನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಪೋಷಕರೊಂದಿಗೆ ಸರ್ಕಾರ ಕ್ರೂರವಾಗಿ ನಡೆದುಕೊಳ್ಳುತ್ತಿದೆ' ಎಂದು ಅವರು ಹೇಳಿದ್ದಾರೆ.

ಪ್ರಕರಣದಲ್ಲಿ 'ವಿಐಪಿ' (VIP) ಕೋನದ ಕುರಿತು ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದುಷ್ಯಂತ್ ಕುಮಾರ್ ಗೌತಮ್ ಅವರ ರಾಜ್ಯಪಾಲ ನೇಮಕಾತಿಯನ್ನು ರದ್ದುಗೊಳಿಸಬೇಕು ಅಥವಾ ತನಿಖೆ ಪೂರ್ಣಗೊಳ್ಳುವವರೆಗೆ ತಡೆಹಿಡಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ದಿಲ್ಲಿ ಪ್ರದೇಶ ಕಾಂಗ್ರೆಸ್‌ ನ ಉಸ್ತುವಾರಿ ಹಾಗೂ ಶಾಸಕ ಖಾಝಿ ನಿಝಾಮುದ್ದೀನ್ ಅವರು ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ. ಅಂಕಿತಾ ಅವರ ಪೋಷಕರನ್ನು ವಶಕ್ಕೆ ಪಡೆಯುವ ಬದಲು ದುಷ್ಯಂತ್ ಕುಮಾರ್ ಗೌತಮ್ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಹೇಳಿದ್ದಾರೆ.

'ಅಂಕಿತಾ ಅವರ ಕುಟುಂಬವು ರಾಷ್ಟ್ರಪತಿ ಭವನದ ಮುಂದೆ ಶಾಂತಿಯುತ ಧರಣಿ ನಡೆಸುತ್ತಿತ್ತು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಕುಟುಂಬದವರ ಆತ್ಮಸ್ಥೈರ್ಯ ಹೆಚ್ಚಿಸಿದ್ದರು. ಆದರೆ ಪೊಲೀಸರು ತಡರಾತ್ರಿ ಬಂದು ಮಹಿಳೆಯರು ಸೇರಿದಂತೆ ನಮ್ಮನ್ನು ವಶಕ್ಕೆ ಪಡೆದರು. ದುಷ್ಯಂತ್ ಗೌತಮ್ ಜೈಲು ಸೇರುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ನಿಝಾಮುದ್ದೀನ್ ಎಚ್ಚರಿಸಿದ್ದಾರೆ.

ಅಂಕಿತಾ ಅವರ ಪೋಷಕರೊಂದಿಗೆ ಪೊಲೀಸರು ನಡೆದುಕೊಂಡ ರೀತಿಯನ್ನು ಉತ್ತರಾಖಂಡದ ಜನರು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries