ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಾಗ್ಪುರದಲ್ಲಿ ಅಕ್ಟೋಬರ್ 20ರಂದು ಆಯೋಜಿಸಿರುವ ವಾರ್ಷಿಕ ವಿಜಯದಶಮಿ ಕಾರ್ಯಕ್ರಮಕ್ಕೆ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ನಾಗ್ಪುರದ ರೇಷಿಮ್‌ಬಾಗ್ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಆರ್‌ಎಸ್‌ಎಸ್‌ನ ಶತಮಾನೋತ್ಸವ ವರ್ಷದ ಸಮಾರೋಪವನ್ನೂ ಸೂಚಿಸಲಿದೆ.
ಕಾರ್ಯಕ್ರಮದಲ್ಲಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ ಮಾಡಲಿದ್ದಾರೆ.
'ದೈನಿಕ ಜಾಗರಣ್' ಪತ್ರಿಕೆಯ ಪ್ರಧಾನ ಸಂಪಾದಕ ಸಂಜಯ್ ಗುಪ್ತಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಮಧ್ಯ ಹಾಗೂ ಪಶ್ಚಿಮ ಭಾರತಕ್ಕಾಗಿ ಇಸ್ರೇಲ್‌ನ ಕಾನ್ಸುಲ್ ಜನರಲ್ ಯನಿವ್ ರೆವಾಚ್ ಅವರನ್ನೂ ಆಹ್ವಾನಿಸಲಾಗಿದೆ.
2025ರ ಜುಲೈನಲ್ಲಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಧನಕರ್ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವುದು ಗಮನ ಸೆಳೆದಿದೆ.
ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'2025ರ ಜುಲೈ 21ರಂದು ಪ್ರಧಾನಿ ಮತ್ತು ಗೃಹ ಸಚಿವರು ಕೇವಲ ಕೆಲವೇ ನಿಮಿಷಗಳಲ್ಲಿ, ಮೂರು ವರ್ಷಗಳ ಹಿಂದೆ ತಾವೇ ಆಯ್ಕೆ ಮಾಡಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಿದರು. ರೈತರ ಬೇಡಿಕೆಗಳನ್ನು ಮೋದಿ ಸರಕಾರ ನಿರಂತರವಾಗಿ ನಿರ್ಲಕ್ಷಿಸುತ್ತಿರುವುದನ್ನು ಧನಕರ್ ಕಟುವಾಗಿ ಟೀಕಿಸಿದ್ದರು. ಪ್ರಧಾನಿ ಮತ್ತು ಗೃಹ ಸಚಿವರ ಜೋಡಿ ಎಷ್ಟು ಸಂಕುಚಿತ ಮನಸ್ಥಿತಿಯುಳ್ಳದ್ದೆಂದರೆ, ಧನಕರ್ ಅವರಿಗೆ ಸಿಗಬೇಕಾದ ಅಧಿಕೃತ ನಿವಾಸವನ್ನೂ ಇನ್ನೂ ಒದಗಿಸಿಲ್ಲ' ಎಂದು ರಮೇಶ್ ಆರೋಪಿಸಿದ್ದಾರೆ.
'ಈಗ ಆರ್‌ಎಸ್‌ಎಸ್ ತನ್ನ ವಾರ್ಷಿಕ ವಿಜಯದಶಮಿ ಕಾರ್ಯಕ್ರಮಕ್ಕೆ ಮಾಜಿ ಉಪರಾಷ್ಟ್ರಪತಿಗಳನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದೆ. ಸ್ಪಷ್ಟವಾಗಿ ಹೇಳುವುದಾದರೆ, ಈ ವ್ಯವಸ್ಥೆಯೊಳಗೇ ವಿಘಟನೆ ಉಂಟಾಗುತ್ತಿದ್ದು, ಅದರ ಭಾಗವಾಗಿರುವವರು ಪರಸ್ಪರ ಸಂಘರ್ಷದಲ್ಲಿ ತೊಡಗಿದ್ದಾರೆ' ಎಂದು ಅವರು ಹೇಳಿದ್ದಾರೆ.



