ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಅವರ ಸಂಬಂಧಿ, ನಟ ಇಮ್ರಾನ್ ಖಾನ್ ಅವರಿಗೆ ಅಕ್ಟೋಬರ್ 28ರ ಒಳಗೆ ದೇಶ ಬಿಡುವಂತೆ ಮುಂಬೈ ಪೊಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ.
ಎಸ್‌ಐಆರ್ ಅಕ್ರಮ ಆರೋಪ ಸಂಬಂಧ ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬೆನ್ನಲ್ಲೇ ಇಮ್ರಾನ್ ಖಾನ್‌ಗೆ ಈ ಸೂಚನೆ ಬಂದಿದೆ.
ಸಿಇಸಿ ರಾಜೀನಾಮೆಗೆ ಒತ್ತಾಯಿಸಿ, ಅಕ್ಟೋಬರ್ 10ರಂದು ಮುಂಬೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಇಮ್ರಾನ್ ಭಾಗವಹಿಸಿದ್ದರು. ಅವರ ಜತೆಗೆ ಪತ್ನಿ ಲೇಖಾ ವಾಷಿಂಗ್ಟನ್, ಸಂಬಂಧಿ ಝೈನ್ ಮೇರಿ ಖಾನ್. ಎಂ.ಸಹ ಭಾಗವಹಿಸಿದ್ದರು. ಪೊಲೀಸರು ಮೂವರನ್ನೂ ವಶಕ್ಕೆ ಪಡೆದಿದ್ದರು.
ವಲಸೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಇಮ್ರಾನ್ ವಿರುದ್ಧ ಕ್ರಮ ಜರುಗಿಸಲಾಗಿದೆ. ಭಾರತದ ಪೌರನಲ್ಲದಿದ್ದರೂ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿನ್ನೆಲೆ ಕೂಡಲೇ ದೇಶ ಬಿಡುವಂತೆ ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.
ಇಮ್ರಾನ್, ಅಮೆರಿಕ ಪೌರತ್ವ ಹೊಂದಿದ್ದಾರೆ ಎಂದು ವರದಿಯಾಗಿದ್ದು, ಶೀಘ್ರದಲ್ಲೇ ಭಾರತದ ಪೌರತ್ವ ಪಡೆಯುತ್ತೇನೆ. ಈ ಸಂಬಂಧಿತ ಪ್ರಕ್ರಿಯೆ ನಡೆಯುತ್ತಿದೆ ಎಂಬ ಇಮ್ರಾನ್ ಅವರ ಹಳೆಯ ಹೇಳಿಕೆಯೊಂದನ್ನು ಇಂಡಿಯಾ ಟುಡೇ ಉಲ್ಲೇಖಿಸಿದೆ. ಆದರೆ, ಆ ಬಳಿಕ ಅವರು ಪೌರತ್ವ ಪಡೆದ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಎಂದೂ ವರದಿ ತಿಳಿಸಿದೆ.
ಇಮ್ರಾನ್ ಗಡೀಪಾರಿಗೆ ಬಿಜೆಪಿ ನಾಯಕರ ಒತ್ತಾಯ
ಇಮ್ರಾನ್ ಖಾನ್ ಅಮೆರಿಕ ನಾಗರಿಕರಾಗಿದ್ದು, ಅವರನ್ನು ಕೂಡಲೇ ಗಡೀಪಾರು ಮಾಡಬೇಕೆಂದು ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಒತ್ತಾಯಿಸಿದ್ದಾರೆ. ಅವರ ಪೌರತ್ವ ಪರಿಶೀಲಿಸಿ, ವಿದೇಶಿ ಪ್ರಜೆಗಳು ಪ್ರತಿಭಟನೆಯಲ್ಲಿ ಭಾಗವಹಿಸಬಹುದೇ ಎಂದು ಪ್ರಶ್ನಿಸಿದ್ದರು.



