ನವದೆಹಲಿ: ಬೇರೆ ಧರ್ಮಕ್ಕೆ ಮತಾಂತರಗೊಂಡ ನಂತರ, ಹಿಂದೂ ಸಾಮಾಜಿಕ ವ್ಯವಸ್ಥೆಯಲ್ಲಿ ಆತನಿಗೆ ಸಿಗುತ್ತಿದ್ದ ಮೀಸಲಾತಿಯೂ ವರ್ಗಾವಣೆ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು ಹಿಂದುಳಿದ ವರ್ಗಗಳ ಅಡಿ ಮೀಸಲಾತಿಯನ್ನು ಪಡೆಯಲಾಗದು ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಶ್ರೀ ಚಂದ್ರಶೇಖರ್ ಅವರನ್ನು ಒಳಗೊಂಡ ಪೀಠ ತೀರ್ಪು ನೀಡಿದೆ.
ಮದ್ರಾಸ್ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಮತಾಂತರಗೊಂಡ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ತಮಿಳುನಾಡು ಸರ್ಕಾರದ ಅಧಿಸೂಚನೆಯನ್ನು ರದ್ದು ಮಾಡಿದೆ.
ಒಬ್ಬ ವ್ಯಕ್ತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಅವರು ತಮಿಳುನಾಡಲ್ಲಿ ಗುರುತಿಸಲಾದ ಏಳು ಹಿಂದುಳಿದ ವರ್ಗಗಳ ಸಮುದಾಯಗಳ ಪೈಕಿ ಯಾವುದೇ ಒಂದರ ಸದಸ್ಯರಾಗಲು ಬರುವುದಿಲ್ಲ. ಅವರ ಹಿಂದಿನ ಜಾತಿ ಸ್ಥಾನಮಾನವನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.



