ನವದೆಹಲಿ: ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿರುವ ಸರ್ಕಾರಿ ನೌಕರನ ವಿರುದ್ಧ ತನಿಖೆ ಕೈಗೊಳ್ಳುವುದಕ್ಕೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪೂರ್ವ ಅನುಮತಿಯ ಅಗತ್ಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
'ಸರ್ಕಾರದ ಕರ್ತವ್ಯಗಳ ನಿರ್ವಹಣೆಗೆ ಕಾನೂನಿನ ರಕ್ಷಣೆ ಇದೆ. ಆದರೆ, ಕರ್ತವ್ಯ ನಿಭಾಯಿಸುವುದಕ್ಕೂ ಹಾಗೂ ಲಂಚಕ್ಕೆ ಬೇಡಿಕೆ ಇಡುವುದಕ್ಕೂ ಸಂಬಂಧ ಇಲ್ಲ. ಹಾಗಾಗಿ, ಲಂಚ ಕೇಳಿದ ಆರೋಪ ಎದುರಿಸುತ್ತಿರುವ ನೌಕರನ ವಿರುದ್ಧದ ತನಿಖೆಗೆ ಯಾವುದೇ ಪೂರ್ವಾನುಮತಿ ಬೇಕಿಲ್ಲ' ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿದೆ.
ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಸಿದ್ದನ್ನು ಪ್ರಶ್ನಿಸಿ ರಾಜಸ್ಥಾನದ ಪೊಲೀಸ್ ಕಾನ್‌ಸ್ಟೆಬಲ್ ತೇಜಾರಾಮ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್.ವಿ.ಎನ್.ಭಟ್ಟಿ ಹಾಗೂ ಎನ್.ವಿ.ಅಂಜಾರಿಯಾ ಅವರು ಇದ್ದ ಪೀಠ ನಡೆಸಿತು.
ತೇಜಾರಾಮ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಅಕ್ಟೋಬರ್ 16ರಂದು ನೀಡಿದ ತೀರ್ಪಿನಲ್ಲಿ ಪೀಠವು ಈ ಮಾತು ಹೇಳಿದೆ.
ತೇಜಾರಾಮ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 7ರ ಅಡಿ ಆರೋಪ ನಿಗದಿ ಮಾಡುವಂತೆ ವಿಚಾರಣಾ ನ್ಯಾಯಾಲಯವು ಹೊರಡಿಸಿದ್ದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ ರಾಜಸ್ಥಾನ ಹೈಕೋರ್ಟ್ ನೀಡಿದ್ದ ತೀರ್ಪನ್ನು ಕೂಡ ಪೀಠವು ಎತ್ತಿ ಹಿಡಿದಿದೆ.
ವಿಚಾರಣೆ ವೇಳೆ, 'ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೈಗೊಳ್ಳುವ ನಿರ್ಧಾರಗಳು ಅಥವಾ ಮಾಡುವ ಶಿಫಾರಸುಗಳೊಂದಿಗೆ ನಂಟಿರುವ ಕೆಲ ಕಾನೂನುಬಾಹಿರ ಕೃತ್ಯಗಳ ಕುರಿತು ವಿಚಾರಣೆ ಅಥವಾ ತನಿಖೆ ಕೈಗೊಳ್ಳಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 17ಎ ಅಡಿ ಪೂರ್ವ ಅನುಮೋದನೆ ಅಗತ್ಯ' ಎಂಬ ಕಾನ್‌ಸ್ಟೆಬಲ್ ತೇಜಾರಾಮ್ ಅವರ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.
ಭ್ರಷ್ಟಾಚಾರ ಆರೋಪ ಕುರಿತಂತೆ ಈ ಹಿಂದೆ ನೀಡಿರುವ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿರುವ ಪೀಠವು, 'ಅವ್ಯವಹಾರ, ವಂಚನೆ, ಕ್ರಿಮಿನಲ್ ವಿಶ್ವಾಸ ದ್ರೋಹ, ಲಂಚ ಪಡೆಯುವಂತಹ ಅಪರಾಧಗಳು ಈ ಕಾಯ್ದೆಯ ಅವಕಾಶಗಳ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣ ಏನು?
ತೇಜಾರಾಮ್ ಅವರು ರಾಜಸ್ಥಾನದ ಸಿರೋಹಿ ಡಿಎಸ್‌ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ 'ತೇಜಾರಾಮ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರವಾಗಿ ₹1.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು' ಎಂದು ಆರೋಪಿಸಿ ಕಾನ್‌ಸ್ಟೆಬಲ್ ದೇವೇಂದ್ರ ಕುಮಾರ್ 2021ರ ಏಪ್ರಿಲ್ 22ರಂದು ಇ-ಮೇಲ್ ಮೂಲಕ ದೂರು ದಾಖಲಿಸಿದ್ದರು. ಇದರ ಆಧಾರದಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 7ಎ ಹಾಗೂ ಐಪಿಸಿ ಸೆಕ್ಷನ್ 120ಬಿ ಅಡಿ ತೇಜಾರಾಮ್ ವಿರುದ್ಧ 2021ರ ಜೂನ್ 4ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಬಳಿಕ ಸೆಪ್ಟೆಂಬರ್ 1ರಂದು ಅವರನ್ನು ಬಂಧಿಸಲಾಗಿತ್ತು. ಕಾಯ್ದೆಯ ಸೆಕ್ಷನ್ 19ರಡಿ ತೇಜಾರಾಮ್ ವಿರುದ್ಧ ಕಾನೂನುಕ್ರಮಕ್ಕೆ 2023ರ ಡಿಸೆಂಬರ್ 8ರಂದು ಅನುಮತಿ ನೀಡಲಾಯಿತು. ಇದರ ಆಧಾರದಲ್ಲಿ 2024ರ ಜನವರಿ 19ರಂದು ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ಪಾಲಿ ಜಿಲ್ಲೆಯ ವಿಶೇಷ ನ್ಯಾಯಾಲಯವು ಕಾಯ್ದೆಯ ಸೆಕ್ಷನ್ 7ರ ಅಡಿ 2024ರ ಸೆಪ್ಟೆಂಬರ್ 12ರಂದು ಅವರ ವಿರುದ್ಧ ಆರೋಪ ನಿಗದಿ ಮಾಡಿ ಆದೇಶಿಸಿತು. ವಿಶೇಷ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ತೇಜಾರಾಮ್ ಅವರು ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದನ್ನು ವಜಾಗೊಳಿಸಿ 2025ರ ಮಾರ್ಚ್ 26ರಂದು ಹೈಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.



