ನವದೆಹಲಿ: ಮತದಾರರ ಪಟ್ಟಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಮಂಗಳವಾರ ವಿದ್ಯಾರ್ಥಿ ಸಂಘಟನೆಗಳು ದಿಢೀರ್ ಪ್ರತಿಭಟನೆ ನಡೆಸಿದವು. ಪ್ರತಿಭಟನೆಯನ್ನು ತಡೆಯಲು ಪೊಲೀಸರು ಮತ್ತು ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (ಆರ್‌ಎಎಫ್) ಮುಂದಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ ಎಐವೈಎಫ್ (AIYF) ಮತ್ತು ಎಐಎಸ್‌ಎಫ್ (AISF) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ತಡೆದಾಗ ವಿದ್ಯಾರ್ಥಿಗಳು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದರು. ಕೊನಾಟ್ ಪ್ಲೇಸ್ ಹಾಗೂ ಜಂತರ್ ಮಂತರ್ ಸುತ್ತಮುತ್ತ ಪ್ರತಿಭಟನೆಗಳು ನಡೆದವು.
ಪ್ರತಿಭಟನಾಕಾರರನ್ನು ವಾಹನಗಳಿಗೆ ಎಳೆದೊಯ್ದ ಪೊಲೀಸರು
ಸಂಸತ್ ಮಾರ್ಗದತ್ತ ಮೆರವಣಿಗೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರನ್ನು ಹಿಡಿದು ಎಳೆದು ಪೊಲೀಸ್ ವಾಹನಗಳಿಗೆ ಕರೆದೊಯ್ದರು ಎಂದು ವರದಿ ತಿಳಿಸಿದೆ.
ಇದೇ ವೇಳೆ, ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಕಾರ್ಯಕರ್ತರೂ ಕೊನಾಟ್ ಪ್ಲೇಸ್‌ನಲ್ಲಿ ಪ್ರತಿಭಟನೆ ನಡೆಸಿದರು. ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಯುವಜನ ಸಂಘಟನೆಗಳು ಹೋರಾಟ ನಡೆಸಿದವು.
ಕೊನಾಟ್ ಪ್ಲೇಸ್‌ನಿಂದ ಜಂತರ್ ಮಂತರ್‌ಗೆ ಸಂಪರ್ಕ ಕಲ್ಪಿಸುವ ಜನಪಥ್ ರಸ್ತೆಯ ಪ್ರವೇಶದ್ವಾರದಲ್ಲಿ ಪ್ರತಿಭಟನಾಕಾರರು ಕುಳಿತು ಧರಣಿ ನಡೆಸಿದರು.
ಬ್ಯಾರಿಕೇಡ್‌ಗಳನ್ನು ಉರುಳಿಸಲು ಯತ್ನ; ಸಂಚಾರ ಅಸ್ತವ್ಯಸ್ತ
ಕೆಲವು ವಿದ್ಯಾರ್ಥಿಗಳು ಬ್ಯಾರಿಕೇಡ್‌ಗಳನ್ನು ಉರುಳಿಸಿ ಜಂತರ್ ಮಂತರ್ ಪ್ರವೇಶಿಸಲು ಯತ್ನಿಸಿದರು. ಪೊಲೀಸ್ ವಾಹನಗಳ ಮೇಲೇರಿಯೂ ಪ್ರತಿಭಟನೆ ನಡೆಸಿದರು ಎಂದು ವರದಿ ತಿಳಿಸಿದೆ.
ಪ್ರತಿಭಟನೆಗಳ ಪರಿಣಾಮವಾಗಿ ದೆಹಲಿಯ ಹಲವು ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ನಿಯೋಜಿಸಲಾಗಿದ್ದ ಕೇಂದ್ರ ಭದ್ರತಾ ಪಡೆಗಳು ದೆಹಲಿಯಲ್ಲೇ ಮುಂದುವರಿದಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರಿಗೆ ನೆರವಾಯಿತು.



