ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ಜನಗಣತಿಯ ನಡುವೆಯೇ ಆರೆಸ್ಸೆಸ್ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಗೆ ಕರೆ ನೀಡಿದೆ. ಜನಸಂಖ್ಯಾ ಅಸಮತೋಲನವನ್ನು ನಿವಾರಿಸಲು ಹಾಗೂ ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ರಕ್ಷಿಸಲು ಪೌರರ ಗುರುತಿಸುವಿಕೆ ಅಗತ್ಯ ಎಂದು ಅದು ಹೇಳಿದೆ ಎಂದು indianexpress.com ವರದಿ ಮಾಡಿದೆ.
ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆರೆಸ್ಸೆಸ್‌ನ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್, ಮತದಾರರ ಪಟ್ಟಿಯಲ್ಲಿ ತಪ್ಪಾಗಿ ಸೇರಿಸಲ್ಪಟ್ಟಿರುವ ಜನರನ್ನು ಗುರುತಿಸುವ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ನೆರೆಯ ದೇಶಗಳಿಂದ ಭಾರತಕ್ಕೆ ಬಂದವರಿಗೆ ಪೌರತ್ವವನ್ನು ಖಾತ್ರಿಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಜನಸಂಖ್ಯಾ ಅಸಮತೋಲನಕ್ಕೆ ಪರಿಹಾರಗಳನ್ನು ಚರ್ಚಿಸುವಾಗ ಎನ್‌ಆರ್‌ಸಿ ಅಗತ್ಯ ಎಂದು ಹೇಳಲಾಗಿದೆ ಎಂದ ಅಂಬೇಕರ್, ಜನಸಂಖ್ಯಾ ಅಸಮತೋಲನದಿಂದಲೇ ಭಾರತದ ವಿಭಜನೆ ಸಂಭವಿಸಿತ್ತು ಎಂದರು. 1947ರ ನಂತರ ಇಸ್ಲಾಮಿಕ್ ರಾಷ್ಟ್ರಗಳಾದ ನೆರೆಯ ದೇಶಗಳಲ್ಲಿ ಉಳಿದುಕೊಂಡ ಹೆಚ್ಚಿನವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದು, ಅವರಿಗೆ ಕಿರುಕುಳ ಮುಂದುವರಿದಿದೆ ಎಂದು ಅವರು ವಾದಿಸಿದರು.
ದೇಶಕ್ಕೆ ಮರಳಿ ಬಂದವರಿಗೆ ಸಿಎಎ ಮೂಲಕ ಪೌರತ್ವ ನೀಡುವುದು ಮತ್ತು ಎನ್‌ಆರ್‌ಸಿ ಮೂಲಕ ಅಂತಹವರನ್ನು ಗುರುತಿಸುವುದು ಅಗತ್ಯ. ಮತದಾರರ ಪಟ್ಟಿಯಲ್ಲಿ ತಪ್ಪಾಗಿ ಸೇರ್ಪಡೆಯಾದವರನ್ನು ಗುರುತಿಸುವುದೂ ಅಗತ್ಯವಾಗಿದೆ ಎಂದು ಅಂಬೇಕರ್ ಹೇಳಿದರು.
ಎನ್‌ಆರ್‌ಸಿ ಕುರಿತು ಆಕ್ಷೇಪಣೆಗಳನ್ನು ನ್ಯಾಯಾಲಯಗಳಂತಹ ಕಾನೂನು ಮಾರ್ಗಗಳ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಹೇಳಿದ ಅವರು, ಆದರೆ ಕೇವಲ ರಾಜಕೀಯ ಲಾಭಕ್ಕಾಗಿ ಪೌರತ್ವವಿಲ್ಲದವರನ್ನು ನಾಗರಿಕರೆಂದು ಸ್ವೀಕರಿಸುವುದು ತಪ್ಪು ಎಂದು ವಾದಿಸಿದರು.
1947ರಲ್ಲಿ ಧರ್ಮ ಮತ್ತು ಜನಸಂಖ್ಯೆಯ ಆಧಾರದಲ್ಲಿಯೇ ದೇಶ ವಿಭಜನೆಯಾಗಿದ್ದರಿಂದ ಭಾರತಕ್ಕೆ ಜನಸಂಖ್ಯಾ ಸಮತೋಲನವು ಅತ್ಯಂತ ಮುಖ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.

