ಕೋಲ್ಕತಾ: ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಗೋಪಾಲಪುರ ಗ್ರಾಮದ ಮೀನು ವ್ಯಾಪಾರಿ ಅಬ್ದುಲ್ ಬಾರೆಕ್(43) ಅವರನ್ನು ಬಾಂಗ್ಲಾದೇಶದ ಅಕ್ರಮ ವಲಸಿಗ ಎಂದು ತಪ್ಪಾಗಿ ಬಿಂಬಿಸಿದ ರಾಯ್ಗಂಜ್ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಲವಂತದಿಂದ ಬಾಂಗ್ಲಾದೇಶಕ್ಕೆ ದಬ್ಬಿರುವುದಾಗಿ ಅವರ ಕುಟುಂಬವು ಆರೋಪಿಸಿದೆ.
ಬಾರೆಕ್ ಅವರ ಈ ಅನಿರೀಕ್ಷಿತ ಗಡಿಪಾರಿನಿಂದಾಗಿ ಸುಮಾರು 23 ಸದಸ್ಯರನ್ನು ಹೊಂದಿರುವ ಅವರ ಕುಟುಂಬವು ಅನಿಶ್ಚಿತತೆ ಮತ್ತು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.
ಕುಟುಂಬದವರ ಹೇಳಿಕೆಯ ಪ್ರಕಾರ, ಜೂನ್ 2ರಂದು ಮಧ್ಯಾಹ್ನ ಪೊಲೀಸರು ಬಾರೆಕ್ ಅವರ ಮನೆಗೆ ಬಂದು ಗುರುತಿನ ದಾಖಲೆಗಳ ಬಗ್ಗೆ ವಿಚಾರಣೆ ನಡೆಸಿ ಬಳಿಕ ಅವರನ್ನು ಭಟೋಲ್ ಹೊರಠಾಣೆಗೆ ಕರೆದೊಯ್ದಿದ್ದರು.
ತಾನು ಎಲ್ಲ ದಾಖಲೆಗಳನ್ನು ಒಯ್ದು ಪೋಲಿಸರಿಗೆ ತೋರಿಸಿದಾಗ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಸುಮಾರು 15 ದಿನಗಳ ನಂತರ ಅವರನ್ನು ಮತ್ತೊಮ್ಮೆ ಕರೆಸಿಕೊಂಡ ಪೊಲೀಸರು, ಯಾವುದೇ ಕಾಗದಪತ್ರಗಳನ್ನು ಪರಿಶೀಲಿಸದೆ ನೇರವಾಗಿ ವಶಕ್ಕೆ ಪಡೆದುಕೊಂಡು ರಾಯ್ಗಂಜ್ ಪೊಲೀಸ್ ಠಾಣೆ ಹಾಗೂ ಬಳಿಕ ಬಂಧನ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು ಎಂದು ಬಾರೆಕ್ ಅವರ ಪುತ್ರ ಜಹೀದುಲ್ ಇಸ್ಲಾಂ (24) ಸುದ್ದಿಸಂಸ್ಥೆಗೆ ತಿಳಿಸಿದರು.
ಕೆಲವು ದಿನಗಳ ನಂತರ ಕುಟುಂಬಕ್ಕೆ ಬಾಂಗ್ಲಾದೇಶದಿಂದ ದೂರವಾಣಿ ಕರೆ ಬಂದಾಗಲೇ ತನ್ನ ತಂದೆಯನ್ನು ಗಡಿಪಾರು ಮಾಡಲಾಗಿರುವ ವಿಷಯ ತಮಗೆ ಗೊತ್ತಾಗಿತ್ತು. ಕಳೆದ ಎರಡೂವರೆ ತಿಂಗಳಿಗೂ ಹೆಚ್ಚು ಸಮಯದಿಂದ ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಯಾವ ಮಾಹಿತಿಯೂ ಕುಟುಂಬಕ್ಕೆ ಲಭ್ಯವಿಲ್ಲ. ಬಾರೆಕ್ ಭಾರತೀಯ ಪ್ರಜೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಗಳಿವೆ. ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಬಳಿಕ ಸಿದ್ಧಪಡಿಸಲಾದ ಮತದಾರರ ಪಟ್ಟಿಯಲ್ಲಿ ಅವರ ಹೆಸರಿದೆ, ಅವರು 2026ರ ವಿಧಾನಸಭಾ ಚುನಾವಣೆಯಲ್ಲಿ ಮತವನ್ನೂ ಚಲಾಯಿಸಿದ್ದಾರೆ ಮತ್ತು 2021ರಲ್ಲಿ ವಿತರಿಸಲಾದ ಅಧಿಕೃತ ಭಾರತೀಯ ಪಾಸ್ಪೋರ್ಟ್ ಹೊಂದಿದ್ದಾರೆ. ಆದಾಗ್ಯೂ, ಪೊಲೀಸರು ಈ ದಾಖಲೆಗಳನ್ನು ಗಣನೆಗೆ ತೆಗೆದುಕೊಳ್ಳದೆ, ಬಾರೆಕ್ ಬಾಂಗ್ಲಾದೇಶಿ ಎಂದು ಹೇಳಿ ಅವರನ್ನು ಬಾಂಗ್ಲಾದೇಶಕ್ಕೆ ಅಟ್ಟಿದ್ದಾರೆ ಎಂದು ಜಹೀದುಲ್ ಅಳಲು ತೋಡಿಕೊಂಡಿದ್ದಾರೆ.
ಸುದ್ದಿಸಂಸ್ಥೆಯು ಈ ಕುರಿತು ರಾಯಗಂಜ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ರನ್ನು ಸಂಪರ್ಕಿಸಿದಾಗ, ಅವರು 'ಅಧಿಕೃತ ರಹಸ್ಯಗಳ ಕಾಯ್ದೆ'ಯನ್ನು ಉಲ್ಲೇಖಿಸಿ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಬುಧವಾರ ಮಾನವ ಹಕ್ಕುಗಳ ಸಂಘಟನೆ 'ಬಾಂಗ್ಲಾರ್ ಮಾನವಾಧಿಕಾರ ಸುರಕ್ಷಾ ಮಂಚ್' ರಾಜ್ಯ ಗೃಹ ಇಲಾಖೆಗೆ ದೂರು ಸಲ್ಲಿಸಿ ಬಾರೆಕ್ ಅವರ ಅಕ್ರಮ ಬಂಧನ ಮತ್ತು ನಾಪತ್ತೆಯ ಕುರಿತು ತುರ್ತು ಹಸ್ತಕ್ಷೇಪಕ್ಕೆ ಒತ್ತಾಯಿಸಿದೆ.
ಭಾರತೀಯ ಪಾಸ್ಪೋರ್ಟ್ ಸೇರಿದಂತೆ ಅಧಿಕೃತ ದಾಖಲೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯನ್ನು ಕಾನೂನು ಪ್ರಕ್ರಿಯೆ ಅನುಸರಿಸದೆ ವಿದೇಶಿ ಪ್ರಜೆ ಎಂದು ಪರಿಗಣಿಸಿ ದೇಶದಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಸಂಘಟನೆಯ ಕಾರ್ಯದರ್ಶಿ ಕಿರೀಟಿ ರಾಯ್ ಹೇಳಿದರು.

