ಮುಂಬೈ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡುವಂತೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಗುರುವಾರ ಆಗ್ರಹಿಸಿದ್ದಾರೆ.
ತಮ್ಮ ಬೇಡಿಕೆ ಈಡೇರದಿದ್ದರೆ, ದೇಶಾದ್ಯಂತ ಪ್ರತಿಭಟನೆ ಹಾಗೂ ಅಕ್ಟೋಬರ್ ಅಂತ್ಯದಿಂದ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲಾಗುವುದು ಎದು ಅವರು ಎಚ್ಚರಿಸಿದ್ದಾರೆ.
ಮುಂಬೈ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ದೀಪ್ಕೆ, ಸಿಇಸಿ ರಾಜೀನಾಮೆಗೆ ಆಗ್ರಹಿಸಿ ಅಕ್ಯೋಬರ್ 2ರಂದು ನಗರದ ದಾದರ್ ಪ್ರದೇಶದ ಶಿವಾಜಿ ಪಾರ್ಕ್‌ನಲ್ಲಿ ಸಿಜೆಪಿ ಧರಣಿ ನಡೆಸಲಿದೆ ಎಂದರು.
''ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು'' ಎಂದು ಅವರು ಹೇಳಿದರು.
ಜ್ಞಾನೇಶ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಿಂದ ಕೆಳಗಿಳಿಯುವವರೆಗೆ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಅವರು ತಿಳಿಸಿದರು.
''ಗೋವಾ, ಕರ್ನಾಟಕ, ಪಶ್ಚಿಮಬಂಗಾಳ, ಉತ್ತರಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಲಾಗುವುದು'' ಎಂದು ಅವರು ಹೇಳಿದರು.
ಸಿಇಸಿ ಹುದ್ದೆಗೆ ನೇಮಕಾತಿಯನ್ನು ಪಾರದರ್ಶಕವಾಗಿ ಮಾಡಬೇಕು ಮತ್ತು ಅದರಲ್ಲಿ ನಾಗರಿಕ ಸಮಾಜದ ಪಾಲ್ಗೊಳ್ಳುವಿಕೆ ಇರಬೇಕು ಎಂದು ದೀಪ್ಕೆ ಆಗ್ರಹಿಸಿದರು.

