ಅಮೆರಿಕ ಮತ್ತು ಮೆಕ್ಸಿಕೊ ಗಡಿಯ ಬಳಿ ಕಂಡುಬಂದಿದೆ ಎಂದು ವರದಿಯಾದ ಡೆಮೊಗೊರ್ಗೊನ್, ಪ್ರದೇಶದಲ್ಲಿ ಅಡಗಿರಬಹುದಾದ ಅಪರಿಚಿತ ಪರಭಕ್ಷಕ ಜೀವಿಯ ಕುರಿತು ಊಹಾಪೋಹಗಳಿಗೆ ಕಾರಣವಾಗಿದೆ.
ನೆಟ್‌ಫ್ಲಿಕ್ಸ್‌ನ ಪ್ರಸಿದ್ಧ ವೈಜ್ಞಾನಿಕ ಕಾಲ್ಪನಿಕ ಸರಣಿ 'ಸ್ಟ್ರೇಂಜರ್ ಥಿಂಗ್ಸ್'ನಲ್ಲಿ ಕಾಣಿಸಿಕೊಳ್ಳುವ ದೈತ್ಯಾಕಾರದ ಮಾನವಸದೃಶ ಜೀವಿ 'ಡೆಮೊಗೊರ್ಗೊನ್'ನಂತೆಯೇ ಇರುವ ವಿಲಕ್ಷಣ ಜೀವಿಯೊಂದು ಅಮೆರಿಕದ ಗಡಿಭಾಗದಲ್ಲಿ ಕಂಡುಬಂದಿದೆ ಎಂದು ಅಲ್ಲಿನ ಜನರು ವರದಿ ಮಾಡಿದ್ದಾರೆ.
ಡೆಮೊಗೊರ್ಗೊನ್ ಎಂದರೆ ಹೂವಿನ ದಳಗಳಂತೆ ಮುಖ ತೆರೆದುಕೊಳ್ಳುವ ಭಯಾನಕ ರಾಕ್ಷಸ ಜೀವಿ. ಅಮೆರಿಕ ಮತ್ತು ಮೆಕ್ಸಿಕೊ ಗಡಿಯ ಬಳಿ ಇಂತಹ ಜೀವಿಯೊಂದು ಕಾಣಿಸಿಕೊಂಡಿದೆ ಎಂಬ ವರದಿಗಳು, ಈ ಪ್ರದೇಶದಲ್ಲಿ ಅಪರಿಚಿತ ಪರಭಕ್ಷಕ ಜೀವಿಯೊಂದು ಅಡಗಿರಬಹುದೇ ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ.
ಕಣ್ಗಾವಲು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ ಎಂದು ಹೇಳಲಾದ ಚಿತ್ರಗಳು ಕುತೂಹಲ ಮೂಡಿಸಿವೆ. ಆದರೆ, ಈ ಜೀವಿಯ ಅಸ್ತಿತ್ವ ಇನ್ನೂ ದೃಢಪಟ್ಟಿಲ್ಲ.
ಮೆಕ್ಸಿಕೊದ ಪತ್ರಕರ್ತ ಹಾಗೂ UFO ತನಿಖಾಧಿಕಾರಿ ಜೈಮ್ ಮೌಸನ್ ಅವರು ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ಈ ಜೀವಿ ರಿಯೊ ಗ್ರಾಂಡೆ ನದಿಯುದ್ದಕ್ಕೂ ಇರುವ ಕೃಷಿ ಸಮುದಾಯಗಳ ಗ್ರಾಮೀಣ ಪ್ರದೇಶವಾದ ಮೆಕ್ಸಿಕೊದ ಜುವಾರೆಜ್ ಕಣಿವೆಯಲ್ಲಿ ಕೋಳಿಗಳು, ಹುಂಜಗಳು ಮತ್ತು ಮೊಲಗಳನ್ನು ಬೇಟೆಯಾಡುತ್ತಿದೆ.
ಅಕ್ಟೋಬರ್ 17ರಂದು ಬಿಡುಗಡೆ ಮಾಡಲಾದ ಚಿತ್ರಗಳಲ್ಲಿ ಉದ್ದನೆಯ ಅಂಗಗಳು ಮತ್ತು ಬಾಲವನ್ನು ಹೊಂದಿರುವ ದೊಡ್ಡ ಗಾತ್ರದ ಬಿಳಿ ಬಣ್ಣದ ಜೀವಿ ಕಾಣಿಸಿಕೊಂಡಿದೆ. ದಂಶಕಗಳು, ರಕೂನ್‌ಗಳು ಮತ್ತು ಮೊಲಗಳು ಸೇರಿದಂತೆ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಾಣಿಗಳ ಪೈಕಿ ಯಾವುದಕ್ಕೂ ಇದು ಹೋಲುವುದಿಲ್ಲ ಎಂದು ತನಿಖಾ ತಂಡ ಹೇಳಿಕೊಂಡಿದೆ.
'ಸ್ಟ್ರೇಂಜರ್ ಥಿಂಗ್ಸ್'ನ ಡೆಮೊಗೊರ್ಗೊನ್ ತನ್ನ ವಿಲಕ್ಷಣ ರೂಪ ಮತ್ತು ಪರಭಕ್ಷಕ ಪ್ರವೃತ್ತಿಗೆ ಹೆಸರುವಾಸಿಯಾಗಿದೆ. ಜೈಮ್ ಮೌಸನ್ ಅವರು ವರದಿಯಾದ ಜೀವಿಯನ್ನು ಚುರುಕಾದ ಮತ್ತು ಬುದ್ಧಿವಂತ ಎಂದು ಬಣ್ಣಿಸಿದ್ದಾರೆ. ಅದು ಸ್ವಲ್ಪಮಟ್ಟಿಗೆ ಮಾನವನನ್ನು ಹೋಲುತ್ತದೆ ಎಂದೂ ಹೇಳಿದ್ದಾರೆ.
ತಮ್ಮ ತಂಡದ ಅಂದಾಜಿನ ಪ್ರಕಾರ, ಜೀವಿಯು ತಲೆಯಿಂದ ಬಾಲದವರೆಗೆ ಸುಮಾರು ಆರು ಅಡಿ ಉದ್ದವಿದೆ. ಅದರ ಬಾಲವೇ ಸುಮಾರು ಮೂರು ಅಡಿ ಉದ್ದವಿದೆ. ಜೀವಿಯು ಹತ್ತುತ್ತಿರುವ ಇಟ್ಟಿಗೆ ಗೋಡೆಯ ಗಾತ್ರದೊಂದಿಗೆ ಹೋಲಿಕೆ ಮಾಡಿ ಈ ಅಂದಾಜು ಮಾಡಲಾಗಿದೆ.
ಈ ಪ್ರಾಣಿಯು ಎರಡು ಕಾಲುಗಳ ಮೇಲೆ ನೇರವಾಗಿ ನಡೆಯಬಲ್ಲದು ಎಂದು ಮೌಸನ್ ಹೇಳಿಕೊಂಡಿದ್ದಾರೆ. ಆದರೆ, ಲಭ್ಯವಿರುವ ದೃಶ್ಯಗಳು ಇದನ್ನು ದೃಢಪಡಿಸುವುದಿಲ್ಲ.
ವರದಿಯಾದ ಜೀವಿಯು ಅನ್ಯಗ್ರಹದಿಂದ ಬಂದ ಜೀವಿಯಾಗಿರದೆ, ಬೇರೆ ಆಯಾಮದಿಂದ ಬಂದ ಬುದ್ಧಿವಂತ ಜೀವಿಯಾಗಿರಬಹುದೆಂಬ ಸಾಧ್ಯತೆಯನ್ನೂ ಮೌಸನ್ ಮುಂದಿಟ್ಟಿದ್ದಾರೆ.
"ಅದು ಅಲ್ಲಿ ಏಕೆ ಕಾಣಿಸಿಕೊಂಡಿದೆ? ಇದು ನಿಗೂಢವಾಗಿದೆ. ಅವು ಅಂತರ ಆಯಾಮದ ಜೀವಿಗಳೇ? ಇತರ ಜೀವಿಗಳೊಂದಿಗೆ ಬಂದಿವೆಯೇ? ಅವು ಹಡಗುಗಳಲ್ಲಿ ಬಂದಿವೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.
ಈ ಜೀವಿಯನ್ನು ಪರಭಕ್ಷಕ ಎಂದು ಬಣ್ಣಿಸಿರುವ ಮೌಸನ್, ಅದರ ಚುರುಕುತನ ಮತ್ತು ಬುದ್ಧಿವಂತಿಕೆ ಭಯ ಹುಟ್ಟಿಸುವಂತಿದೆ ಎಂದಿದ್ದಾರೆ. ಅದರ ಉಪಸ್ಥಿತಿಯು ಸ್ಥಳೀಯ ನಿವಾಸಿಗಳು ಮತ್ತು ಅವರ ಜಾನುವಾರುಗಳ ಮೇಲೆ ಪರಿಣಾಮ ಬೀರಬಹುದು. ಆದರೆ, ಅದು ಜನರ ಮೇಲೆ ದಾಳಿ ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.
ಕೋಳಿಯೊಂದರ ತಲೆಯನ್ನು ಹಿಡಿದುಕೊಂಡು ಸಮೀಪದ ಮರದ ಮೇಲೆ ಜೀವಿಯೊಂದು ಓಡಿಹೋಗುವುದನ್ನು ಕಂಡಿದ್ದಾಗಿ ಬಾಲಕನೊಬ್ಬ ಹೇಳಿದ ಬಳಿಕ ತನಿಖೆ ಆರಂಭವಾಯಿತು ಎಂದು ಅವರು ತಿಳಿಸಿದ್ದಾರೆ. ಈ ಘಟನೆ ಬಳಿಕ ಕೆಲವು ನಿವಾಸಿಗಳು ಭಯದಿಂದ ಮನೆಗಳನ್ನು ತೊರೆದಿದ್ದಾರೆ ಎಂದೂ ಹೇಳಿದ್ದಾರೆ.
ಆದರೆ, ಈ ಎಲ್ಲ ಹೇಳಿಕೆಗಳ ನಡುವೆಯೂ ಜುವಾರೆಜ್‌ನ ನಾಗರಿಕ ರಕ್ಷಣಾ ಅಧಿಕಾರಿಗಳು ಪ್ರದೇಶದಲ್ಲಿ ಅಪಾಯಕಾರಿ ಜೀವಿಯೊಂದು ಕಾಣಿಸಿಕೊಂಡಿರುವ ಬಗ್ಗೆ ಅಥವಾ ಕೃಷಿ ಪ್ರಾಣಿಗಳಿಗೆ ತೊಂದರೆಯಾಗಿರುವ ಬಗ್ಗೆ ಯಾವುದೇ ವರದಿಗಳು ತಮ್ಮ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 5ರಂದು ಮೌಸನ್ ಈ ಕುರಿತು ಹೇಳಿಕೆಗಳನ್ನು ನೀಡಲು ಆರಂಭಿಸಿದ ಬಳಿಕವೂ ಅಸಾಮಾನ್ಯ ಜೀವಿಗಳ ಮುಖಾಮುಖಿ ಅಥವಾ ಕೃಷಿ ಪ್ರಾಣಿಗಳ ಸಾವಿನ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ ಎಂದು ಟೆಕ್ಸಾಸ್‌ನಲ್ಲಿರುವ ಅಮೆರಿಕದ ಗಡಿಭಾಗದ ಪೊಲೀಸರು ತಿಳಿಸಿದ್ದಾರೆ.
ಜೈಮ್ ಮೌಸನ್ ಈ ಹಿಂದೆಯೂ ಅನ್ಯಗ್ರಹ ಜೀವಿಗಳ ಕುರಿತು ಹಲವು ಉನ್ನತ ಮಟ್ಟದ ತನಿಖೆಗಳನ್ನು ನಡೆಸಿದ್ದಾರೆ. 2023ರಲ್ಲಿ ಪೆರುವಿನಲ್ಲಿ ಪತ್ತೆಯಾಗಿವೆ ಎಂದು ಹೇಳಲಾದ ಮಾನವರಲ್ಲದ ಮಮ್ಮಿಗಳನ್ನು ಮೆಕ್ಸಿಕೊದ ಕಾಂಗ್ರೆಸ್ ಮುಂದೆ ಪ್ರದರ್ಶಿಸಿ, ಅವು ಅನ್ಯಗ್ರಹ ಜೀವಿಗಳ ಅಸ್ತಿತ್ವಕ್ಕೆ ಪುರಾವೆ ಎಂದು ಪ್ರತಿಪಾದಿಸಿದ್ದರು.
ಆದರೆ, ತಜ್ಞರು ಬಳಿಕ ಆ ಮಾದರಿಗಳು ಮಾನವ ಮತ್ತು ಪ್ರಾಣಿಗಳ ಮೂಳೆಗಳು, ಅಂಟು ಹಾಗೂ ಕಾಗದವನ್ನು ಬಳಸಿ ಸಿದ್ಧಪಡಿಸಿದ ಕೃತಕ ರಚನೆಗಳು ಎಂದು ತೀರ್ಮಾನಿಸಿದ್ದರು. ಇದೇ ರೀತಿ, ಅವರು ಅನ್ಯಗ್ರಹ ಜೀವಿ ಎಂದು ಹೇಳಿಕೊಂಡಿದ್ದ 'ಎಲ್ ಸೆರ್ ಡಿ ಮೆಟೆಪೆಕ್' ಅನ್ನು ಬಳಿಕ ಅಳಿಲು ಮಂಗ ಎಂದು ಗುರುತಿಸಲಾಗಿತ್ತು.



