ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿರುವಾಗಲೇ, ಜ್ಞಾನೇಶ್ ಕುಮಾರ್ ಅವರು ತಮ್ಮ ಎರಡು ದಿನಗಳ ಛತ್ತೀಸ್ ಗಢ ಭೇಟಿಯನ್ನು ಮುಂದೂಡಿದ್ದಾರೆ. ಅಕ್ಟೋಬರ್ 7 ಮತ್ತು 8ರಂದು ನಿಗದಿಯಾಗಿದ್ದ ಈ ಭೇಟಿಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜ್ಞಾನೇಶ್ ಕುಮಾರ್ ವಿರುದ್ಧ ವಾಗ್ದಂಡನೆ ನಿರ್ಣಯ ಮಂಡಿಸಬಹುದು ಎಂಬ ವದಂತಿಗಳು ಹಾಗೂ ಸುಪ್ರೀಂ ಕೋರ್ಟ್ ಎದುರು ಚುನಾವಣಾ ಆಯೋಗದ ಕುರಿತ ಅರ್ಜಿಗಳು ಬಾಕಿ ಇರುವಾಗಲೇ ಈ ಬೆಳವಣಿಗೆ ನಡೆದಿದೆ. ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಹಾಗೂ ಅರ್ಜಿ ನಮೂನೆ 6ರ ಮಾರ್ಪಾಡಿಗಾಗಿಯೂ ಚುನಾವಣಾ ಆಯೋಗ ಟೀಕೆಯನ್ನು ಎದುರಿಸುತ್ತಿದೆ.
ತಮ್ಮ 2 ದಿನಗಳ ಭೇಟಿಯ ವೇಳೆ ಜ್ಞಾನೇಶ್ ಕುಮಾರ್ ಅವರು ದಾಂತೇವಾಡದಲ್ಲಿನ ದಾಂತೇಶ್ವರಿ ಮಠ ದೇವಾಲಯ, ಬಸ್ತಾರ್ ನಲ್ಲಿರುವ ಚಿತ್ರಕೋಟೆ ಜಲಪಾತ ಹಾಗೂ ಕಬೀರ್ ಧಾಮ್ ಜಿಲ್ಲೆಯಲ್ಲಿರುವ ಭೊರಂಡಿಯೊ ದೇವಾಲಯಕ್ಕೆ ಭೇಟಿ ನೀಡಬೇಕಿತ್ತು.
ಈ ಭೇಟಿಯ ವೇಳೆ ಛತ್ತೀಸ್ ಗಢ ಸರಕಾರ ಜ್ಞಾನೇಶ್ ಕುಮಾರ್ ಅವರಿಗೆ ಸರಕಾರಿ ಅತಿಥಿಯ ಗೌರವ ನೀಡಿತ್ತು. ಜ್ಞಾನೇಶ್ ಕುಮಾರ್ ಅವರನ್ನು ಸ್ವಾಗತಿಸಲು ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲು ರಾಯ್ಪುರ ಜಿಲ್ಲಾಡಳಿತ, ಪೊಲೀಸರು ಹಾಗೂ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣ ಪ್ರಾಧಿಕಾರಗಳು ಸಿದ್ಧತೆ ಪ್ರಾರಂಭಿಸಿದ್ದವು.



