ನವದೆಹಲಿ: ಭಾರತದ ಬಳಿ ಸುಮಾರು 190 ಪರಮಾಣು ಸಿಡಿತಲೆಗಳು ಇರಬಹುದು ಎಂದು ಅಮೆರಿಕದ Federation of American Scientists (FAS)ನ ಸಂಶೋಧಕರು ಅಂದಾಜಿಸಿದ್ದಾರೆ. ಶತ್ರು ಪ್ರದೇಶದ ಆಳಕ್ಕೆ ಇವುಗಳನ್ನು ತಲುಪಿಸಲು ಭಾರತಕ್ಕೆ ದೀರ್ಘವ್ಯಾಪ್ತಿಯ ಕ್ಷಿಪಣಿಗಳ ಬಲವಿದೆ.
'ಬುಲೆಟಿನ್ ಆಫ್ ದಿ ಅಟಾಮಿಕ್ ಸೈಂಟಿಸ್ಟ್ಸ್'ನ (BAS) ನೂತನ ವರದಿಯ ಪ್ರಕಾರ, ಭಾರತವು 'ಮೊದಲು ಬಳಸುವುದಿಲ್ಲ' ಎಂಬ ತನ್ನ ನೀತಿಯನ್ನು ಅನುಸರಿಸುತ್ತಲೇ ತನ್ನ ಪರಮಾಣು ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಆಧುನೀಕರಿಸುತ್ತಿದೆ.
ಹಾನ್ಸ್ ಎಂ. ಕ್ರಿಸ್ಟೆನ್ಸನ್, ಮ್ಯಾಟ್ ಕೊರ್ಡಾ, ಎಲಿಯಾನಾ ಜಾನ್ಸ್ ಮತ್ತು ಮೆಕೆಂಝಿ ನೈಟ್-ಬಾಯ್ಲ್ ಸಿದ್ಧಪಡಿಸಿರುವ ಈ ವರದಿಯು, ಭಾರತವು ಆಕಾಶ, ಭೂಮಿ ಮತ್ತು ಸಮುದ್ರ-ಈ ಮೂರೂ ಮಾರ್ಗಗಳಿಂದ ಪರಮಾಣು ದಾಳಿ ನಡೆಸಬಲ್ಲ 'ನ್ಯೂಕ್ಲಿಯರ್ ಟ್ರಯಾಡ್ (ಪರಮಾಣು ತ್ರಯ)' ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದೆ. ಭಾರತವು ತನ್ನ ಕಾರ್ಯತಂತ್ರದ ಶಸ್ತ್ರಾಸ್ತ್ರಗಳ ನಿಜವಾದ ಸಾಮರ್ಥ್ಯ ಹಾಗೂ ವ್ಯಾಪ್ತಿಯನ್ನು ಬಹಿರಂಗಪಡಿಸದೆ ರಹಸ್ಯವಾಗಿರಿಸಿದೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ಮಿರಾಜ್ 2000 ಮತ್ತು ಜಾಗ್ವಾರ್ ಯುದ್ಧವಿಮಾನಗಳು ಪ್ರಸ್ತುತ ಪರಮಾಣು ದಾಳಿ ಸಾಮರ್ಥ್ಯ ಹೊಂದಿವೆ. ಭವಿಷ್ಯದಲ್ಲಿ ರಫೇಲ್ ಯುದ್ಧವಿಮಾನಗಳು ಜಾಗ್ವಾರ್ ನ ಪರಮಾಣು ಪಾತ್ರವನ್ನು ವಹಿಸಬಹುದೆಂದು ವರದಿ ಹೇಳಿದೆ. ಭಾರತವು ಭೂಮಿ, ಆಕಾಶ ಮತ್ತು ಸಮುದ್ರ-ಮೂರೂ ಮಾರ್ಗಗಳಲ್ಲಿ ತನ್ನ ಪರಮಾಣು ತ್ರಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿ ತಿಳಿಸಿದೆ.
ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಸ್ವದೇಶಿ ತಂತ್ರಜ್ಞಾನದ ಮೂಲಕ ಅಭಿವೃದ್ಧಿಪಡಿಸಿರುವ 'ಅಗ್ನಿ' ಸರಣಿಯ ವಿವಿಧ ಕ್ಷಿಪಣಿಗಳು ಈ ಸಾಮರ್ಥ್ಯದ ಪ್ರಮುಖ ಭಾಗವಾಗಿವೆ. ಈ ಸರಣಿಯ ಕ್ಷಿಪಣಿಗಳಿಗೆ ವಿಭಿನ್ನ ವ್ಯಾಪ್ತಿಯ ಸಾಮರ್ಥ್ಯವಿದೆ. ಅಗ್ನಿ-III 3,200 ಕಿ.ಮೀ.ಗೂ ಹೆಚ್ಚು, ಅಗ್ನಿ-IV 3,500 ಕಿ.ಮೀ.ಗೂ ಹೆಚ್ಚು ಹಾಗೂ ಅಗ್ನಿ-V 6,000 ಕಿ.ಮೀ.ಗಿಂತ ಕಡಿಮೆ ವ್ಯಾಪ್ತಿಯನ್ನು ಹೊಂದಿವೆ ಎಂದು ವರದಿ ಹೇಳಿದೆ. ಈ ದೀರ್ಘವ್ಯಾಪ್ತಿಯಿಂದಾಗಿ ಭಾರತವು ತನ್ನ ಕ್ಷಿಪಣಿಗಳನ್ನು ಗಡಿಭಾಗದಿಂದ ದೂರದ, ಹೆಚ್ಚು ಸುರಕ್ಷಿತ ಒಳಪ್ರದೇಶಗಳಲ್ಲಿ ನಿಯೋಜಿಸಲು ಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.
ಅಗ್ನಿ-5 ಕ್ಷಿಪಣಿಯು ಪಾಕಿಸ್ತಾನ, ಸಂಪೂರ್ಣ ಚೀನಾ, ಮಧ್ಯ ಏಷ್ಯಾ, ರಷ್ಯಾದ ಪ್ರಮುಖ ಭಾಗಗಳು, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ ಹಾಗೂ ಯುರೋಪ್ನ ಬಹುತೇಕ ಪ್ರದೇಶಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಅಗ್ನಿ-V ಕ್ಷಿಪಣಿಯಲ್ಲಿ ಒಂದೇ ಕ್ಷಿಪಣಿಯಿಂದ ಹಲವು ಗುರಿಗಳನ್ನು ಪ್ರತ್ಯೇಕವಾಗಿ ಹೊಡೆಯುವ MIRV ತಂತ್ರಜ್ಞಾನದ ಪರೀಕ್ಷೆಗಳನ್ನು ಭಾರತ ನಡೆಸಿದೆ. ಈ ಸಾಮರ್ಥ್ಯವನ್ನು ಮತ್ತಷ್ಟು ಪರೀಕ್ಷಿಸುವ ಅಗತ್ಯವಿದೆ ಎಂದು ವರದಿ ಹೇಳಿದೆ. ಕ್ಷಿಪಣಿಯನ್ನು ವೇಗವಾಗಿ ನಿಯೋಜಿಸಲು ಅನುಕೂಲವಾಗುವ ಕ್ಯಾನಿಸ್ಟರ್ ವಿನ್ಯಾಸವನ್ನೂ ಭಾರತ ಬಳಸುತ್ತಿದೆ.
2026ರ ಎಪ್ರಿಲ್ 3ರಂದು ಸೇವೆಗೆ ಸೇರ್ಪಡೆಯಾದ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ INS ಅರಿಧಮನ್, INS ಅರಿಹಂತ್ ಮತ್ತು INS ಅರಿಘಾತ್ ಜೊತೆ ಸೇರಿ ಸಮುದ್ರದಲ್ಲಿ ಪ್ರತಿದಾಳಿ ನಡೆಸುವ ಭಾರತದ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ವರದಿ ಬೆಟ್ಟು ಮಾಡಿದೆ. INS ಅರಿಧಮನ್ ಭಾರತದ ಮೂರನೇ ಸ್ವದೇಶಿ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿಯಾಗಿದೆ.
ಭಾರತವು ದೀರ್ಘಕಾಲದಿಂದ 'ಮೊದಲು ಬಳಸುವುದಿಲ್ಲ' (NFU) ನೀತಿಯನ್ನು ಅನುಸರಿಸುತ್ತಿದೆ. ಆದರೂ, 2003ರ ಪರಮಾಣು ನೀತಿಯಲ್ಲಿ ರಾಸಾಯನಿಕ ಅಥವಾ ಜೈವಿಕ ದಾಳಿಗೆ ಪ್ರತಿಯಾಗಿ ಪರಮಾಣು ಅಸ್ತ್ರ ಬಳಸುವ ಸಾಧ್ಯತೆಯನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಭಾರತದ ಪರಮಾಣು ನೀತಿಯು ಸಂಪೂರ್ಣವಾಗಿ ಬದಲಾಗದ, ನಿರ್ವಿವಾದ NFU ನೀತಿಯಾಗಿದೆ ಎಂದು ಸರಳವಾಗಿ ಹೇಳಲಾಗುವುದಿಲ್ಲ ಎಂದು ವರದಿ ಸೂಚಿಸಿದೆ.
ಶತ್ರುಗಳ ದಾಳಿಯ ಸಂದರ್ಭದಲ್ಲಿ ಪರಿಣಾಮಕಾರಿ ಪರಮಾಣು ಪ್ರತಿದಾಳಿ ನಡೆಸುವ ಸಾಮರ್ಥ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಭಾರತ ತನ್ನ ಪರಮಾಣು ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಆಧುನೀಕರಿಸುತ್ತಿದೆ ಎಂದು ವರದಿ ಹೇಳಿದೆ.

