ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA)ಗೆ ಪ್ರಸ್ತಾವಿತ ತಿದ್ದುಪಡಿ ಮಸೂದೆ-2026ರಲ್ಲಿ ಯುಪಿಎ ಸರಕಾರದ ಅವಧಿಯಲ್ಲಿ 2010ರಲ್ಲಿ ಜಾರಿಗೊಳಿಸಲಾದ ಕಾಯ್ದೆಯಲ್ಲಿದ್ದ ಪ್ರಮುಖ ನಿಯಮಗಳನ್ನೇ ಉಳಿಸಿಕೊಳ್ಳಲಾಗಿದೆ ಎಂದು ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಹೇಳಿದ್ದಾರೆ.
ಜಂಟಿ ಸಂಸದೀಯ ಸಮಿತಿಯ ಸಭೆಯ ಬಳಿಕ ಮಾತನಾಡಿದ ಅವರು, ಪ್ರಸ್ತಾವಿತ ಮಸೂದೆಯ ಕುರಿತು ಹಿಂದೂ, ಕ್ರಿಶ್ಚಿಯನ್ ಸೇರಿದಂತೆ ವಿವಿಧ ಧಾರ್ಮಿಕ ಗುಂಪುಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಲಿಸಲಾಗಿದೆ ಎಂದರು. ಮಸೂದೆಯ ಕೆಲವು ನಿಯಮಗಳಿಗೆ ವಿವಿಧ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
FCRA ಅಡಿಯಲ್ಲಿ ವಿದೇಶಿ ದೇಣಿಗೆ ಸ್ವೀಕರಿಸುವ ಸರಕಾರೇತರ ಸಂಸ್ಥೆಗಳು (ಎನ್ಜಿಒ) ಅಕ್ರಮ ಎಸಗಿರುವುದು ಪತ್ತೆಯಾದರೆ, ಅವುಗಳ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು 2010ರ ಕಾಯ್ದೆಯು ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಸಂಬಂಧಿತ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದೆ. ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲೂ ಇದೇ ಅಧಿಕಾರವನ್ನು ನಿಯೋಜಿತ ಪ್ರಾಧಿಕಾರಕ್ಕೆ ನೀಡಲಾಗಿದೆ ಎಂದು ಜೈಸ್ವಾಲ್ ವಿವರಿಸಿದರು.
"ಯುಪಿಎ ಸರಕಾರ ಜಾರಿಗೆ ತಂದಿದ್ದ ಕಾನೂನಿನ ಪ್ರಕಾರ, FCRA ಅಡಿಯಲ್ಲಿ ಅಕ್ರಮಗಳು ಪತ್ತೆಯಾದರೆ, ಸಂಬಂಧಿತ ಆಸ್ತಿಪಾಸ್ತಿಗಳನ್ನು ಕೇಂದ್ರ ಗೃಹ ಕಾರ್ಯದರ್ಶಿ ಅಥವಾ ಸಂಬಂಧಿತ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ವಶಕ್ಕೆ ನೀಡುವ ವ್ಯವಸ್ಥೆ ಇತ್ತು. ಈಗ ಆ ಅಧಿಕಾರವನ್ನು ನಿಯೋಜಿತ ಪ್ರಾಧಿಕಾರಕ್ಕೆ ನೀಡಲಾಗಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಮಂಗಳವಾರ ಜಂಟಿ ಸಂಸದೀಯ ಸಮಿತಿಯ ಮುಂದೆ ಅಭಿಪ್ರಾಯ ಮಂಡಿಸಿದವರಲ್ಲಿ ಸೈರೊ ಮಲಬಾರ್ ಚರ್ಚ್, ರಾಮಕೃಷ್ಣ ಮಠ, ಇಸ್ಕಾನ್ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು. ಎಲ್ಲರ ಅಭಿಪ್ರಾಯಗಳನ್ನೂ ಎಚ್ಚರಿಕೆಯಿಂದ ಆಲಿಸಲಾಗಿದ್ದು, ಮುಂದಿನ ಸಭೆಯಲ್ಲಿ ಅವುಗಳ ಕುರಿತು ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜೈಸ್ವಾಲ್ ಹೇಳಿದರು.
ಮಾರ್ಚ್ 25ರಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲಾಗಿತ್ತು. ವಿರೋಧ ಪಕ್ಷಗಳ ನಿರಂತರ ಒತ್ತಾಯದ ಹಿನ್ನೆಲೆಯಲ್ಲಿ ಆಗಸ್ಟ್ 12ರಂದು ಅದನ್ನು ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಲಾಗಿತ್ತು. ಮಸೂದೆಯ ಕೆಲವು ನಿಯಮಗಳು ತೀವ್ರ ಆಕ್ಷೇಪಾರ್ಹವಾಗಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.



