ಅಹಮದಾಬಾದ್: ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ, ಅರಬ್ಬಿ ಸಮುದ್ರದಲ್ಲಿ ಇರಾನ್ ಮೂಲದ ಜಲ ನೌಕೆಯಿಂದ 3,000 ಕೋಟಿ ರೂ.ಗೂ ಅಧಿಕ ಮೌಲ್ಯದ 526 ಕೆಜಿ ಮೆಥಾಂಫೆಟಮೈನ್ ಮತ್ತು ಹೆರಾಯಿನ್ ಮಾದಕವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಭಾರತೀಯ ಕರಾವಳಿ ಕಾವಲು ಪಡೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸೆಪ್ಟೆಂಬರ್ 25ರಂದು ಲಕ್ಷದ್ವೀಪದ ಬಳಿ ನಡೆದ ಈ ಕಾರ್ಯಾಚರಣೆಯಲ್ಲಿ ನೌಕೆಯಲ್ಲಿದ್ದ ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕರಾವಳಿ ಕಾವಲು ಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
ಲಭ್ಯವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಕರಾವಳಿ ಕಾವಲು ಪಡೆ ಸಮುದ್ರ ಮತ್ತು ವಾಯು ಮಾರ್ಗದ ಮೂಲಕ ಕಣ್ಗಾವಲು ನಡೆಸಿ, ಅನುಮಾನಾಸ್ಪದ ನೌಕೆಯನ್ನು ಬೆನ್ನಟ್ಟಿ, ಲಕ್ಷದ್ವೀಪದ ಪಶ್ಚಿಮ ಭಾಗದಲ್ಲಿ ತಡೆದು ಪರಿಶೀಲನೆ ನಡೆಸಿತು ಎಂದು ತಿಳಿಸಿದೆ.
ವಶಪಡಿಸಿಕೊಂಡ ನಿಷೇಧಿತ ಸರಕಿನಲ್ಲಿ ಉನ್ನತ ದರ್ಜೆಯ ಮೆಥಾಂಫೆಟಮೈನ್ ಮತ್ತು ಹೆರಾಯಿನ್ ಸೇರಿವೆ ಎಂದು ಕರಾವಳಿ ಕಾವಲು ಪಡೆ ಸ್ಪಷ್ಟಪಡಿಸಿದೆ.
ಜಂಟಿ ವಿಚಾರಣೆ ಹಾಗೂ ಮುಂದಿನ ಕಾನೂನು ಕ್ರಮಗಳಿಗಾಗಿ ನೌಕೆ, ಅದರಲ್ಲಿದ್ದ ಸಿಬ್ಬಂದಿ ಮತ್ತು ವಶಪಡಿಸಿಕೊಂಡ ಮಾದಕವಸ್ತುಗಳನ್ನು ಬಿಗಿ ಭದ್ರತೆಯೊಂದಿಗೆ ಮುಂಬೈಗೆ ತರಲಾಗಿದೆ.
ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ATS) ಸಮನ್ವಯದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಐವರು ಪಾಕಿಸ್ತಾನಿ ಪ್ರಜೆಗಳನ್ನು ವಶಕ್ಕೆ ಪಡೆದಿರುವುದನ್ನು ರಾಜ್ಯ ATS ಕೂಡ ಖಚಿತಪಡಿಸಿದ್ದು, ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡುವುದಾಗಿ ತಿಳಿಸಿದೆ.
ಸಮುದ್ರ ಮಾರ್ಗದ ಮೂಲಕ ನಡೆಯುತ್ತಿರುವ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ತಡೆಯಲು ಭದ್ರತಾ ಸಂಸ್ಥೆಗಳು ಕಣ್ಗಾವಲು ಬಿಗಿಗೊಳಿಸಿರುವ ಸಂದರ್ಭದಲ್ಲೇ ಈ ಕಾರ್ಯಾಚರಣೆ ನಡೆದಿದೆ.
ಈ ಕಾರ್ಯಾಚರಣೆಯು ತನ್ನ ಕಣ್ಗಾವಲು ಮತ್ತು ಕಡಲ ತಡೆ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿರುವುದನ್ನು ತೋರಿಸುತ್ತದೆ. ಭಾರತದ ಕಡಲ ವಲಯಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯುವ ಪ್ರಯತ್ನಗಳ ಭಾಗವಾಗಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕರಾವಳಿ ಕಾವಲು ಪಡೆ ಹೇಳಿದೆ.
ಅಂತರರಾಷ್ಟ್ರೀಯ ಮಾದಕವಸ್ತು ಜಾಲದ ಆರ್ಥಿಕ ಮೂಲಗಳನ್ನು ದುರ್ಬಲಗೊಳಿಸುವುದರ ಜೊತೆಗೆ, ಸಂಶ್ಲೇಷಿತ ಮಾದಕವಸ್ತುಗಳು ದೇಶದ ಮುಖ್ಯ ಭೂಭಾಗ ತಲುಪದಂತೆ ತಡೆಯಲು ಈ ಕಾರ್ಯಾಚರಣೆ ನೆರವಾಗಲಿದೆ ಎಂದು ಅದು ತಿಳಿಸಿದೆ.




