ನವದೆಹಲಿ: ನೀಟ್ ಪ್ರವೇಶ ಪರೀಕ್ಷೆಯನ್ನು ಪೆನ್ ಮತ್ತು ಪೇಪರ್ ಆಧಾರಿತ ಮಾದರಿಯಿಂದ ಆನ್‌ಲೈನ್ ಮಾದರಿಗೆ ಸುಲಭವಾಗಿ ಬದಲಾವಣೆ ಮಾಡಲು ರಾಷ್ಟ್ರೀಯ ಪರೀಕ್ಷಾ ದರ್ಜೆಯ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಗೆ ಮೂಲ ಸೌಕರ್ಯ ತಂತ್ರ ರೂಪಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯ ಕಾರ್ಯ ನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ಕೇಂದ್ರ ಸರಕಾರ, ಮುಂದಿನ ವರ್ಷದಿಂದ ವೈದ್ಯಕೀಯ ಪರೀಕ್ಷೆಯನ್ನು ಸಿಬಿಟಿ ಮಾದರಿಯಲ್ಲಿ ನಡೆಸಲಾಗುವುದು ಎಂದು ಘೋಷಿಸಿತ್ತು.
ಈ ಯೋಜನೆ ಸಕ್ರಿಯ ಪರಿಶೀಲನೆಯಲ್ಲಿದ್ದರೂ ಭಾರತದ ಪಬ್ಲಿಕ್ ಪರೀಕ್ಷಾ ವ್ಯವಸ್ಥೆಗಳನ್ನು ಸುಧಾರಿಸಲು ರಚಿಸಲಾದ ನಂದನ್ ನಿಲೇಕಣಿ ನೇತೃತ್ವದ ಕಾರ್ಯ ಪಡೆ ವರದಿ ಸ್ವೀಕರಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ರಾಷ್ಟ್ರೀಯ ಪರೀಕ್ಷಾ ದರ್ಜೆಯ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೂಲ ಸೌಕರ್ಯ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ. ದೇಶಾದ್ಯಂತ ಪರೀಕ್ಷಾ ಕೇಂದ್ರಗಳ ಲಭ್ಯತೆಯಲ್ಲಿರುವ ಭೌಗೋಳಿಕ ಅಂತರವನ್ನು ಕಡಿಮೆ ಮಾಡುವುದು ಮತ್ತು ಕೇಂದ್ರ ಮಟ್ಟದ ಪರೀಕ್ಷಾ ದರ್ಜೆಯ ವಿವರಣೆಗಳನ್ನು ಪ್ರಮಾಣೀಕರಿಸುವುದು ಇದರ ಮುಖ್ಯ ಗುರಿಯಾಗಿದೆ. ಅಲ್ಲದೆ, ಇದು ಪೆನ್ ಮತ್ತು ಪೇಪರ್ ಮಾದರಿಯ ಪರೀಕ್ಷೆಗಳಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ)ಗೆ ಸುಲಭವಾಗಿ ಬದಲಾಗಲು ಅನುವು ಮಾಡಿಕೊಡುತ್ತದೆ. ಬಹು ಮಾದರಿ ಮೂಲ ಕಾರ್ಯತಂತ್ರದ ಆಧಾರದ ಮೇಲೆ ಈ ಯೋಜನೆ ಸಕ್ರಿಯ ಪರಿಶೀಲನೆಯಲ್ಲಿದೆ ಎಂದು ಶಿಕ್ಷಣ ಸಚಿವಾಲಯದ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೀಟ್-ಯುಜಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಇತರ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಸ್ವಾಯತ್ತ ನೋಡಲ್ ಸಂಸ್ಥೆಯಾದ ಎನ್‌ಟಿಎಯಲ್ಲಿ ನಡೆಯುತ್ತಿರುವ ಸಮಗ್ರ ಸುಧಾರಣೆಯ ಮಧ್ಯೆಯೇ ಈ ಕ್ರಮ ಕೈಗೊಳ್ಳಲಾಗಿದೆ.

