HEALTH TIPS

ಪ್ರತಿಭಟನೆಯಲ್ಲಿ ಭಾಗಿ: ಇಮ್ರಾನ್ ಖಾನ್ OCI ಸ್ಥಾನಮಾನಕ್ಕೆ ಕುತ್ತು?

ಮುಂಬೈ:  ಪ್ರತಿಭಟನೆಯಲ್ಲಿ ಭಾಗವಹಿಸಿದ ಆರೋಪದ ಹಿನ್ನೆಲೆಯಲ್ಲಿ ನಟ ಇಮ್ರಾನ್ ಖಾನ್ ಅವರ ಸಾಗರೋತ್ತರ ಭಾರತೀಯ ಪ್ರಜೆ (OCI) ಸ್ಥಾನಮಾನ ರದ್ದುಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರಕಾರ ಮುಂದಾಗಿದೆ. ಈ ಸಂಬಂಧ ಮುಂಬೈನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಶನಿವಾರ ಅವರಿಗೆ ಎರಡನೇ ನೋಟಿಸ್ ಜಾರಿಗೊಳಿಸಿದ್ದು, 15 ದಿನಗಳೊಳಗೆ ವಿವರಣೆ ನೀಡುವಂತೆ ಸೂಚಿಸಿದೆ.


ಅಕ್ಟೋಬರ್ 14ರಂದು ಭಾರತ ತೊರೆಯುವಂತೆ ಸೂಚನೆ ನೀಡಿದ್ದ ಬೆನ್ನಲ್ಲೇ OCI ಸ್ಥಾನಮಾನ ರದ್ದತಿಯ ಸಾಧ್ಯತೆಯ ಕುರಿತು ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅಮೆರಿಕದ ಪ್ರಜೆಯಾಗಿರುವ ಇಮ್ರಾನ್ ಖಾನ್ ಅವರಿಗೆ 2006ರ ಡಿಸೆಂಬರ್ 15ರಂದು OCI ಕಾರ್ಡ್ ನೀಡಲಾಗಿತ್ತು.

ಅನುಮತಿಯಿಲ್ಲದ ಪ್ರತಿಭಟನೆಯಲ್ಲಿ ಭಾಗಿ

ದಿಲ್ಲಿಯಲ್ಲಿ CJP ನಡೆಸಿದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಭಾಗವಹಿಸಿದ್ದನ್ನು FRRO ನೋಟಿಸ್‌ ನಲ್ಲಿ ಉಲ್ಲೇಖಿಸಿದೆ. ಪ್ರತಿಭಟನೆಗೆ ಪೊಲೀಸರಿಂದ ಅನುಮತಿ ಪಡೆದಿರಲಿಲ್ಲ. ಕಾನೂನುಬಾಹಿರವಾಗಿ ಸಭೆ ಸೇರಿದ ಆರೋಪದಡಿ ಇಮ್ರಾನ್ ಖಾನ್ ಸೇರಿದಂತೆ ಇತರ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ನೋಟಿಸ್‌ ನಲ್ಲಿ ತಿಳಿಸಲಾಗಿದೆ.

ಪೌರತ್ವ ಕಾಯಿದೆ, 1955ರ ಸೆಕ್ಷನ್ 7D(e) ಅಡಿಯಲ್ಲಿ ಭಾರತದ ಸಾರ್ವಭೌಮತ್ವ, ಅಖಂಡತೆ ಮತ್ತು ಭದ್ರತೆ, ವಿದೇಶಗಳೊಂದಿಗಿನ ಸ್ನೇಹ ಸಂಬಂಧಗಳು ಅಥವಾ ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ OCI ನೋಂದಣಿ ರದ್ದುಗೊಳಿಸಲು ಅವಕಾಶವಿದೆ. ಈ ನಿಬಂಧನೆಯಡಿ ಇಮ್ರಾನ್ ಖಾನ್ ಅವರ OCI ಸ್ಥಾನಮಾನ ರದ್ದುಗೊಳಿಸಬಹುದು ಎಂಬುದು ಕೇಂದ್ರ ಸರಕಾರದ ತಾತ್ಕಾಲಿಕ ಅಭಿಪ್ರಾಯ. ಆದರೆ, ಅಂತಿಮ ನಿರ್ಧಾರವು ಅವರು ನೀಡುವ ವಿವರಣೆಯನ್ನು ಅವಲಂಬಿಸಿರುತ್ತದೆ.

ಪ್ರತಿಭಟನೆ ಮಾತ್ರವೇ ಆಧಾರವಲ್ಲ

FIR ದಾಖಲಾಗಿರುವುದು ಅಥವಾ ವ್ಯಕ್ತಿಯನ್ನು ವಶಕ್ಕೆ ಪಡೆದಿರುವುದು ಮಾತ್ರವೇ ಆರೋಪಗಳು ಸಾಬೀತಾದಂತಾಗುವುದಿಲ್ಲ. ಇವು OCI ನೋಂದಣಿ ರದ್ದತಿಗೆ ಸ್ವಯಂಚಾಲಿತ ಆಧಾರವೂ ಅಲ್ಲ ಎಂದು FRRO ಸ್ಪಷ್ಟಪಡಿಸಿದೆ. ಕೇವಲ ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಮಾತ್ರ OCI ಸ್ಥಾನಮಾನ ರದ್ದುಗೊಳಿಸಲು ಸಾಧ್ಯವಿಲ್ಲ ಎಂದೂ ತಿಳಿಸಿದೆ.

ಆದರೆ, ಸಂಬಂಧಪಟ್ಟ ಚಟುವಟಿಕೆಗಳ ಸ್ವರೂಪ, ಸನ್ನಿವೇಶಗಳು, ಸಾರ್ವಜನಿಕ ಹಿತಾಸಕ್ತಿಯ ಮೇಲಿನ ಪರಿಣಾಮಗಳು ಮತ್ತು OCI ಕಾರ್ಡ್‌ ದಾರರ ನಡವಳಿಕೆಯನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ನೋಟಿಸ್‌ ನಲ್ಲಿ ಹೇಳಲಾಗಿದೆ. ನೋಂದಣಿ ರದ್ದುಗೊಳಿಸುವ ಮೊದಲು ಸಂಬಂಧಪಟ್ಟ ವ್ಯಕ್ತಿಗೆ ತನ್ನ ವಾದ ಮಂಡಿಸಲು ಅವಕಾಶ ನೀಡಬೇಕೆಂಬ ಕಾನೂನು ನಿಯಮದಂತೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ರಾಷ್ಟ್ರೀಯ ಭದ್ರತೆಯು ಸಾರ್ವಜನಿಕ ಹಿತಾಸಕ್ತಿಯ ವಿಶಾಲ ವ್ಯಾಪ್ತಿಗೆ ಸೇರಿದೆ ಎಂಬ ಸುಪ್ರೀಂ ಕೋರ್ಟ್‌ನ ತೀರ್ಪನ್ನೂ FRRO ಉಲ್ಲೇಖಿಸಿದೆ.

ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಸಿದ್ಧತೆ

ಇಮ್ರಾನ್ ಖಾನ್ ಅವರ ವಕೀಲರಾದ MZM ಲೀಗಲ್‌ನ ಜುಲ್ಫಿಕರ್ ಮೆಮನ್, ಹೊಸ ಶೋಕಾಸ್ ನೋಟಿಸ್‌ ನ ವಿಷಯಗಳನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದಾರೆ.

"ನೋಟಿಸ್‌ಗೆ ಉತ್ತರಿಸುವ ಪ್ರಕ್ರಿಯೆಯಲ್ಲಿ FRRO ಜತೆ ಸಹಕರಿಸಲಿದ್ದೇವೆ. ಆದರೆ, ಹೊಸ ನೋಟಿಸ್‌ ನ ಹಿನ್ನೆಲೆಯಲ್ಲಿ ಈ ಹಿಂದೆ ನೀಡಲಾದ ಭಾರತ ತೊರೆಯುವಂತೆ ಸೂಚಿಸಿದ ನೋಟಿಸ್‌ ನ ಸ್ಥಿತಿಯ ಕುರಿತು ಸ್ಪಷ್ಟನೆ ಪಡೆಯಲು ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್‌ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದ್ದೇವೆ" ಎಂದು ಅವರು ಹೇಳಿದ್ದಾರೆ.

ಇಮ್ರಾನ್ ಖಾನ್ ಅವರ ಪ್ರತಿಭಟನೆಯಲ್ಲಿ ಭಾಗವಹಿಸುವಿಕೆ, ಬಂಧನ ಮತ್ತು ಸಂಬಂಧಿತ ಸನ್ನಿವೇಶಗಳು ಅವರ OCI ಸ್ಥಾನಮಾನವನ್ನು ಮುಂದುವರಿಸುವುದು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿದೆಯೇ ಎಂಬ ಪರಿಶೀಲನೆಗೆ ಅಗತ್ಯವಾಗಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಭಾರತೀಯ ನಾಗರಿಕರು ಮತ್ತು OCI ಕಾರ್ಡ್‌ದಾರರ ನಡುವಿನ ವ್ಯತ್ಯಾಸ ಹಾಗೂ OCI ಕಾರ್ಡ್‌ದಾರರಿಗೆ ಲಭ್ಯವಿರುವ ಸೀಮಿತ ಮತ್ತು ನಿಯಂತ್ರಿತ ಹಕ್ಕುಗಳನ್ನೂ ಈ ಸಂದರ್ಭದಲ್ಲಿ ಪರಿಗಣಿಸಲಾಗಿದೆ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries