ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ್ದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಆಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದಾನೆ. ಅಲ್ಲದೆ, ನಟ ಸಲ್ಮಾನ್ ಖಾನ್ ಜತೆ ಕೆಲಸ ಮಾಡುವ ಚಿತ್ರರಂಗದ ಇತರರಿಗೂ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು NDTV ವರದಿ ಮಾಡಿದೆ.
ರವಿವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಮೋಟಾರ್ ಸೈಕಲ್ ನಲ್ಲಿ ಬಂದ ಮೂವರು ವ್ಯಕ್ತಿಗಳು ಗುಂಡು ಹಾರಿಸಿದಾಗ ಟೈಗರ್ ಶ್ರಾಫ್ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅವರ ಚಾಲಕನ ಕೈಗೆ ಗುಂಡು ತಗುಲಿ ಗಾಯವಾಗಿದೆ. ದಾಳಿಕೋರರ ಗುರುತು ಮತ್ತು ಕೃತ್ಯದ ಹಿಂದಿನ ಉದ್ದೇಶದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಡಿಯೊ ಸಂದೇಶದಲ್ಲಿ ತನ್ನನ್ನು 'ಅನಿಲ್ ಪಂಡಿತ್' ಎಂದು ಪರಿಚಯಿಸಿಕೊಂಡ ವ್ಯಕ್ತಿ, ಗ್ಯಾಂಗ್ ನ ಸೂಚನೆಗಳನ್ನು ನಿರ್ಲಕ್ಷಿಸಿ ಸಲ್ಮಾನ್ ಖಾನ್ ಜತೆ ಕೆಲಸ ಮುಂದುವರಿಸಿದ್ದರಿಂದ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಲಾಗಿದೆ ಎಂದು ಹೇಳಿಕೊಂಡಿದ್ದಾನೆ.
"ಚಿತ್ರರಂಗದಲ್ಲಿ ನಮ್ಮ ಮಾತು ಕೇಳದೆ, ಸಲ್ಮಾನ್ ಖಾನ್ ಜತೆ ಕೆಲಸ ಮಾಡುವ ಯಾರನ್ನಾದರೂ ನಾವು ಕೊಲ್ಲುತ್ತೇವೆ. ಇದು ನಮ್ಮ ಮೊದಲ ಮತ್ತು ಕೊನೆಯ ಎಚ್ಚರಿಕೆ" ಎಂದು ಆಡಿಯೊ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ. "ಈ ಸಲ್ಮಾನ್ ಖಾನ್ ದಾವೂದ್ ಇಬ್ರಾಹಿಂನ ನಾ*" ಎಂದು ಆಡಿಯೊ ಸಂದೇಶದಲ್ಲಿ ವ್ಯಕ್ತಿ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ.
"ನಾವು ಆತನಿಗೆ ಕರೆ ಮಾಡಿ ವಿಷಯವನ್ನು ವಿವರಿಸಿದ್ದೆವು. ಆದರೆ, ಆತನಿಗೆ ಅರ್ಥವಾಗಲಿಲ್ಲ. ಹೀಗಾಗಿ, ಇಂದು ಆತನಿಗೆ ಸರಿಯಾಗಿ ಅರ್ಥ ಮಾಡಿಸಿದ್ದೇವೆ" ಎಂದೂ ಸಂದೇಶದಲ್ಲಿ ಹೇಳಲಾಗಿದೆ.
ಟೈಗರ್ ಶ್ರಾಫ್ ಫುಟ್ ಬಾಲ್ ಮೈದಾನದಿಂದ ಹೊರಬರುತ್ತಿದ್ದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ. ನಟ ಪಾರಾಗಿದ್ದರೆ, ಅವರ ಚಾಲಕ ಗಾಯಗೊಂಡಿದ್ದಾರೆ.
ಸಲ್ಮಾನ್ ಖಾನ್‌ಗೆ ಹಲವು ಬಾರಿ ಬೆದರಿಕೆ
ಪ್ರಸ್ತುತ ಗುಜರಾತ್ ನ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಈ ಹಿಂದೆ ಹಲವು ಬಾರಿ ಬೆದರಿಕೆ ಹಾಕಿದ್ದಾನೆ. ಸಲ್ಮಾನ್ ಖಾನ್ ಕ್ಷಮೆ ಕೇಳದಿದ್ದರೆ ಅವರ ಕುಟುಂಬದ ಸದಸ್ಯರನ್ನೂ, ಸಾಕು ನಾಯಿಗಳನ್ನೂ ಬಿಡುವುದಿಲ್ಲ ಎಂದು ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
2023ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನೀಡಿದ್ದ ಮಾಹಿತಿಯ ಪ್ರಕಾರ, ಬಿಷ್ಣೋಯ್ ಗ್ಯಾಂಗ್ ಹತ್ಯೆಗೆ ಸಂಚು ರೂಪಿಸಿದ್ದ 10 ಪ್ರಮುಖ ವ್ಯಕ್ತಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮೊದಲ ಸ್ಥಾನದಲ್ಲಿದ್ದರು. 1998ರಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣವು ಸಲ್ಮಾನ್ ಖಾನ್ ವಿರುದ್ಧದ ದ್ವೇಷಕ್ಕೆ ಕಾರಣ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿಕೊಂಡಿದ್ದಾನೆ. ಈ ಪ್ರಕರಣದಿಂದ ಬಿಷ್ಣೋಯ್ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬುದು ಆತನ ಆರೋಪ.
ತನಿಖೆಗೆ ಫಡ್ನವೀಸ್ ಸೂಚನೆ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಂಬೈ ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿ, ಗುಂಡಿನ ದಾಳಿಯ ಕುರಿತು ಮಾಹಿತಿ ಪಡೆದಿದ್ದಾರೆ. ತನಿಖೆಯನ್ನು ತ್ವರಿತಗೊಳಿಸಿ, ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚಿಸಿದ್ದಾರೆ.



