ಮುಂಬೈ: ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಅವರ ಪೋಷಕರು, ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ಮುಂಬೈ ಪೊಲೀಸರು ರವಿವಾರ ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಮಹಿಳಾ ಪ್ರತಿಭಟನಾಕಾರರೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದು, ಅವರ ಬಟ್ಟೆಗಳನ್ನು ಹರಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಒಂದು ತಿಂಗಳಿಂದ ಕ್ಯಾಂಪಸ್ ನ ಮುಖ್ಯ ಗೇಟ್ ಬಳಿ ನಡೆಯುತ್ತಿದ್ದ 'ಜಸ್ಟಿಸ್ ಕಾರ್ನರ್' (ನ್ಯಾಯದ ಮೂಲೆ) ಎಂಬ ಪ್ರತಿಭಟನಾ ಸ್ಥಳವನ್ನೂ ಪೊಲೀಸರು ತೆರವುಗೊಳಿಸಿದ್ದಾರೆ.
ಸೆಪ್ಟೆಂಬರ್ 18ರಂದು ಮೃತಪಟ್ಟ ಸಾಹಿಲ್ ಅವರ ಸಾವನ್ನು ಪ್ರತಿಭಟನಾಕಾರರು 'ಸಾಂಸ್ಥಿಕ ಹತ್ಯೆ' ಎಂದು ಹೇಳಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದರು. ರವಿವಾರ ಸಾಹಿಲ್ ಅವರ ಪೋಷಕರಾದ ರವೀಂದ್ರ ಮತ್ತು ಸೋನಾಲಿ ವಾಕೋಡೆ, ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಐಐಟಿ ಬಾಂಬೆ ಆವರಣದಲ್ಲಿ ಜಮಾಯಿಸಿದ್ದರು.
ಕ್ಯಾಂಪಸ್ ನೊಳಗಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಪ್ರತ್ಯೇಕವಾಗಿ ವಶಕ್ಕೆ ಪಡೆದು ಆವರಣದ ಒಳಗೇ ಇರಿಸಿದರು. ಸಂಸ್ಥೆಯ ಗೇಟ್ ಹೊರಭಾಗದಲ್ಲಿ ವಶಕ್ಕೆ ಪಡೆದ ಕೆಲವರನ್ನು ಆಜಾದ್ ಮೈದಾನ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ವಶಕ್ಕೆ ಪಡೆದವರಲ್ಲಿ ರಾಹುಲ್ ಸೋನ್‌ಪಿಂಪಲೆ ಮತ್ತು ಸಾಹಿಲ್ ಕುಟುಂಬದ ಪರ ವಕೀಲ ಸಿದ್ಧಾರ್ಥ ಇಂಗಳೆ ಕೂಡ ಸೇರಿದ್ದಾರೆ.
ಕಳೆದ ಒಂದು ತಿಂಗಳಿಂದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಸಾಹಿಲ್ ಅವರ ಪೋಷಕರಿಗೆ ಸಂಸ್ಥೆಯೊಳಗೆ ಪ್ರವೇಶಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಅವರು ಆಜಾದ್ ಮೈದಾನ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಮಗನಿಗೆ ಗೌರವ ಸಲ್ಲಿಸಲು ರವಿವಾರ ಕ್ಯಾಂಪಸ್‌ಗೆ ಆಗಮಿಸಿದ್ದ ಸಾಹಿಲ್ ಅವರ ತಂದೆ ರವೀಂದ್ರ ವಾಕೋಡೆ ಅವರು ಸಂಸ್ಥೆಯ ರಿಜಿಸ್ಟ್ರಾರ್ ಗೆ ಪತ್ರವನ್ನೂ ಸಲ್ಲಿಸಿದರು.
► ಮಹಿಳಾ ಪ್ರತಿಭಟನಾಕಾರರೊಂದಿಗೆ ಅನುಚಿತ ವರ್ತನೆ ಆರೋಪ
ಪ್ರತಿಭಟನಾಕಾರರೊಂದಿಗೆ ಪೊಲೀಸರು ಕ್ರೂರವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕ್ಯಾಂಪಸ್ ನೊಳಗೆ ಮಹಿಳಾ ಪ್ರತಿಭಟನಾಕಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಅವರ ಬಟ್ಟೆಗಳು ಹರಿದಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಗೇಟ್ ಹೊರಭಾಗದಲ್ಲಿಯೂ ಪುರುಷ ಪೊಲೀಸ್ ಸಿಬ್ಬಂದಿ ಸೇರಿದಂತೆ ಪೊಲೀಸರು ಮಹಿಳಾ ಪ್ರತಿಭಟನಾಕಾರರು ಮತ್ತು ಪತ್ರಕರ್ತರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸಾಹಿಲ್ ಅವರ ಪೋಷಕರಿಗೆ ಬೆಂಬಲ ಸೂಚಿಸಲು ಕ್ಯಾಂಪಸ್‌ಗೆ ಭೇಟಿ ನೀಡಿದ್ದ ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಅವರು ಅಲ್ಲಿಂದ ನಿರ್ಗಮಿಸಿದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.



