ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆ ವಿಮಾನ ಇಂಧನದ ಬೆಲೆ ಏರಿಕೆ ಕುರಿತು ವಿಮಾನಯಾನ ಸಂಸ್ಥೆಗಳು ಹಾಗೂ ತೈಲ ಮಾರುಕಟ್ಟೆ ಕಂಪೆನಿಗಳೊಂದಿಗೆ ಸಚಿವಾಲಯ ಚರ್ಚೆ ನಡೆಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
ವಿಮಾನಯಾನ ಸಂಸ್ಥೆಗಳು ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ಬೆಲೆ ಏರಿಕೆಯಿಂದಾಗಿ ಸಂಕಷ್ಟ ಎದುರಿಸುತ್ತಿವೆ. ವಿಮಾನಯಾನ ಸಂಸ್ಥೆಯ ಕಾರ್ಯಾಚರಣಾ ವೆಚ್ಚದಲ್ಲಿ ATF ಸುಮಾರು ಶೇ.40ರಷ್ಟು ಪಾಲು ಹೊಂದಿದೆ.
"ಪಶ್ಚಿಮ ಏಷ್ಯಾ ಬಿಕ್ಕಟ್ಟು ATF ಬೆಲೆಗಳ ಮೇಲೆ ದೊಡ್ಡ ಹೊರೆ ಹೇರುತ್ತಿರುವುದು ಅತ್ಯಂತ ಪ್ರಮುಖ ವಿಚಾರಗಳಲ್ಲಿ ಒಂದಾಗಿದೆ. ಈ ಕುರಿತು ನಾವು ವಿಮಾನಯಾನ ಸಂಸ್ಥೆಗಳು ಹಾಗೂ ತೈಲ ಮಾರುಕಟ್ಟೆ ಕಂಪೆನಿಗಳ ಜೊತೆ ಚರ್ಚೆ ನಡೆಸುತ್ತಿದ್ದೇವೆ" ಎಂದು ಕೆ.ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
ಜೆಟ್ ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಸೋಮವಾರ, ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಇಂಧನ ಸರ್ಚಾರ್ಜ್ ಹೆಚ್ಚಳವನ್ನು ಘೋಷಿಸಿತ್ತು.



