HEALTH TIPS

ರಾಹುಲ್ ಗಾಂಧಿ ಹೇಳಿಕೆ ʼದಾರಿ ತಪ್ಪಿಸುವಂತಿದೆʼ ಎಂದ ಚುನಾವಣಾ ಆಯೋಗಕ್ಕೆ ಪ್ರಶ್ನೆಗಳ ಸುರಿಮಳೆ

 ನವದೆಹಲಿ: ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರು ಮತದಾರರ ನೋಂದಣಿಗೆ ಬಳಸುವ ಫಾರ್ಮ್-6 ಕುರಿತು ನೀಡಿದ ಹೇಳಿಕೆ ವಿಚಾರವಾಗಿ ರಾಜಕೀಯ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ, ಭಾರತೀಯ ಚುನಾವಣಾ ಆಯೋಗ (ECI) ಪ್ರತಿಕ್ರಿಯಿಸಿದೆ. 


ಫಾರ್ಮ್-6ನಲ್ಲಿ ಮಾಡಲಾದ ಬದಲಾವಣೆಗಳ ಕುರಿತು ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 26ರಂದು ಚುನಾವಣಾ ಆಯೋಗ ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ, ಫಾರ್ಮ್-6ಗೆ ಲಗತ್ತಿಸಲಾದ ಘೋಷಣಾ ನಮೂನೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಹೇಳಿತ್ತು.

ಆದರೆ ಸೋಮವಾರ ಸಿಜೆಐ ಅವರು "ಫಾರ್ಮ್-6ನಲ್ಲಿ ಮಾಡಲಾದ ಯಾವುದೇ ಬದಲಾವಣೆಯನ್ನು ನಾವು ಅನುಮೋದಿಸಿಲ್ಲ. ಇದರಲ್ಲಿ ಯಾವುದೇ ಗೊಂದಲ ಬೇಡ" ಎಂದು ಸ್ಪಷ್ಟಪಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ (CEC) ವಿರುದ್ಧ ವಾಗ್ದಾಳಿ ನಡೆಸಿದರು. "ಜ್ಞಾನೇಶ್ ಕುಮಾರ್ ಅವರು ಫಾರ್ಮ್-6 ಅನ್ನು ಕಾನೂನುಬಾಹಿರವಾಗಿ ಹಾಗೂ ಏಕಪಕ್ಷೀಯವಾಗಿ ಬದಲಾಯಿಸಿದ್ದಾರೆ ಎಂಬುದು ಇದೀಗ ಯಾವುದೇ ಅನುಮಾನವಿಲ್ಲದೆ ಸಾಬೀತಾಗಿದೆ. ಬಿಜೆಪಿಗೆ ನೆರವಾಗಲು ಅವರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದಕ್ಕೆ ಇದು ಮತ್ತೊಂದು ಸಾಕ್ಷಿ. ಪ್ರಜಾಪ್ರಭುತ್ವದ ಮೇಲೆ ನಡೆದಿರುವ ಈ ಗಂಭೀರ ದಾಳಿಯಲ್ಲಿ ಭಾಗಿಯಾಗಿರುವ ಅವರು ಹಾಗೂ ಇತರರೆಲ್ಲರೂ ಹೊಣೆಗಾರರಾಗಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ಆರೋಪವನ್ನು ಚುನಾವಣಾ ಆಯೋಗ (ECI) ಸೋಮವಾರ ತಳ್ಳಿಹಾಕಿದ್ದು, ಈ ಆರೋಪ "ದಾರಿತಪ್ಪಿಸುವಂತಿದೆ" ಎಂದು ಎಕ್ಸ್ನಲ್ಲಿ ಹೇಳಿದೆ.

2025ರ ಜೂನ್ 24ರಂದು ಬಿಹಾರದಲ್ಲಿ SIR ಆರಂಭಿಸಲು ಹೊರಡಿಸಿದ ಆದೇಶವನ್ನು ಚುನಾವಣಾ ಆಯೋಗ ಸರ್ವಾನುಮತದಿಂದ ಅನುಮೋದಿಸಿತ್ತು. ಈ ಆದೇಶವನ್ನು 2026ರ ಮೇ 27ರಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ಇಸಿಐ ಹೇಳಿದೆ. ಸೆಪ್ಟೆಂಬರ್ 26ರಂದು ECI ಹೊರಡಿಸಿದ್ದ ಪ್ರಕಟಣೆಯಲ್ಲೂ, "SIRಗೆ ಸಂಬಂಧಿಸಿದ ಫಾರ್ಮ್-6ಗೆ ಲಗತ್ತಿಸಲಾದ ಘೋಷಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ" ಎಂದು ಹೇಳಲಾಗಿತ್ತು.

ಆದರೆ, ಪ್ರಸ್ತುತ ಬಳಸುತ್ತಿರುವ ಬದಲಾಯಿಸಲಾದ ಫಾರ್ಮ್-6 ಅನ್ನು ಯಾರು ಮತ್ತು ಯಾವ ಅನುಮೋದನೆಯೊಂದಿಗೆ ಬದಲಾಯಿಸಿದರು ಎಂಬ ಪ್ರಶ್ನೆಗೆ ECI ನೇರವಾಗಿ ಉತ್ತರಿಸಿಲ್ಲ.

ಇದೇ ವೇಳೆ, SIRಗೆ ಸಂಬಂಧಿಸಿದ ಹಲವು ನಿರ್ಧಾರಗಳನ್ನು ಇತರ ಇಬ್ಬರು ಚುನಾವಣಾ ಆಯುಕ್ತರ ಒಪ್ಪಿಗೆ ಪಡೆಯದೆ ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವಂತೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಾದ ಅರ್ಜಿಯನ್ನು ಸೋಮವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, "ಬದಲಾಯಿಸಲಾದ ಯಾವುದೇ ಫಾರ್ಮ್-6 ಅನ್ನು ನಾವು ಅನುಮೋದಿಸಿಲ್ಲ. ದಾಖಲೆಗಳು ಬಂದ ನಂತರ ಅದನ್ನು ಯಾರು ಬದಲಾಯಿಸಿದ್ದಾರೆ ಎಂಬುದನ್ನು ನೋಡುತ್ತೇವೆ" ಎಂದು ಹೇಳಿತ್ತು.

ಇಂಡಿಯನ್ ಎಕ್ಸ್ಪ್ರೆಸ್ ವರದಿಯನ್ನು ಆಧರಿಸಿ ಅರ್ಜಿ ಸಲ್ಲಿಸಿರುವುದನ್ನು ಗಮನಿಸಿದ ನ್ಯಾಯಾಲಯ, ಕೇವಲ ಮಾಧ್ಯಮ ವರದಿಯ ಆಧಾರದಲ್ಲಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತು. ಚುನಾವಣಾ ಆಯೋಗದಿಂದ ಅಧಿಕೃತ ದಾಖಲೆಗಳನ್ನು ಪಡೆದು ಪರಿಶೀಲಿಸಿದ ನಂತರವೇ ವಿಷಯದ ಬಗ್ಗೆ ತೀರ್ಮಾನ ಕೈಗೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿತು.

ಆಯೋಗದ ಆಂತರಿಕ ಚರ್ಚೆಗಳಲ್ಲಿ ಭಿನ್ನಾಭಿಪ್ರಾಯಗಳು ಇರುವುದು ಸಾಮಾನ್ಯ. ಆದರೆ ಅಂತಿಮ ನಿರ್ಧಾರಗಳನ್ನು ಇಡೀ ಆಯೋಗ ಸರ್ವಾನುಮತದಿಂದ ತೆಗೆದುಕೊಂಡಿದೆ ಎಂದು ECI ಹೇಳಿದೆ.

"ಆಯೋಗದ ಆಂತರಿಕ ಚರ್ಚೆಗಳು ನಡೆಯುವಾಗ ಆಯುಕ್ತರ ನಡುವೆ ವಿಭಿನ್ನ ಅಭಿಪ್ರಾಯಗಳು ಅಥವಾ ಆಕ್ಷೇಪಗಳು ಇರುವುದು ರೂಢಿ ಮತ್ತು ಸಹಜ ಪ್ರಕ್ರಿಯೆ. ಆಂತರಿಕ ಕೇವಲ ಸಮಾಲೋಚನೆಯನ್ನು ತೋರಿಸುತ್ತವೆಯೇ ಹೊರತು ಸಾಂವಿಧಾನಿಕ ಸಂಸ್ಥೆಯ ವಿಘಟನೆಯನ್ನಲ್ಲ. ಆಂತರಿಕವಾಗಿ ಭಿನ್ನಾಭಿಪ್ರಾಯಗಳಿದ್ದರೂ, ಚರ್ಚೆಯ ನಂತರ ತೆಗೆದುಕೊಳ್ಳಲಾದ ಎಲ್ಲಾ ಅಂತಿಮ ನಿರ್ಧಾರಗಳು ಇಡೀ ಆಯೋಗದ ಒಮ್ಮತದ ಒಪ್ಪಿಗೆಯೊಂದಿಗೇ ಹೊರಬಿದ್ದಿವೆ ಎಂದು ಇಸಿಐ ವಾದಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳ ಸುರಿಮಳೆ:

ಆಯೋಗದ ಈ ಸಮರ್ಥನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ. ಫಾರ್ಮ್-6 ಬದಲಾವಣೆ ಮಾಡುವ ಅಧಿಕಾರ ಸರ್ಕಾರಕ್ಕೆ ಮಾತ್ರ ಇದ್ದರೂ, ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪಗಳ ನಡುವೆಯೂ ಈ ಘೋಷಣೆಯನ್ನು ಸೇರಿಸಿದ್ದು ಯಾರು? ಮತ್ತು ಸುಪ್ರೀಂ ಕೋರ್ಟ್ ಯಾವುದೇ ಬದಲಾವಣೆಯನ್ನು ಅನುಮೋದಿಸಿಲ್ಲ ಎಂದು ಸ್ಪಷ್ಟಪಡಿಸಿರುವಾಗ ಆಯೋಗದ ನಡೆ ಎಷ್ಟು ಸಮರ್ಥನೀಯ? ಎಂದು ಹಿರಿಯ ಪತ್ರಕರ್ತರು ಸೇರಿದಂತೆ ಹಲವು ಬಳಕೆದಾರರು ಇಸಿಐ ಅನ್ನು ಪ್ರಶ್ನಿಸಿದ್ದಾರೆ.

ಇಸಿಐ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯಿಸಿರುವ ಪತ್ರಕರ್ತ ಅರವಿಂದ ಗುಣಶೇಖರ್, " ಫಾರ್ಮ್ 6ಕ್ಕೆ ಘೋಷಣೆಯನ್ನು (Declaration) ಸೇರಿಸಿದವರು ಯಾರು? ಫಾರ್ಮ್ 6ಕ್ಕೆ ಹೆಚ್ಚುವರಿ ಘೋಷಣೆಯನ್ನು ಸೇರಿಸುವುದು ಫಾರ್ಮ್ 6ರ ತಿದ್ದುಪಡಿ (Modification) ಎಂದಾಗುವುದಿಲ್ಲವೇ? ಫಾರ್ಮ್ 6ಕ್ಕೆ ಈ ಹೆಚ್ಚುವರಿ ಘೋಷಣೆಯನ್ನು ಸೇರಿಸುವುದನ್ನು ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪಿಸಿದ್ದರೇ? ಫಾರ್ಮ್ 6 ಅನ್ನು ತಿದ್ದುಪಡಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದ್ದು, ಚುನಾವಣಾ ಆಯೋಗಕ್ಕೆ ಇಲ್ಲ ಎಂದು ಅವರು ಹೇಳಿದ್ದರೇ? ಅಂತಹ ಯಾವುದೇ ಆಕ್ಷೇಪಣೆಗಳೇ ಇಲ್ಲದಿದ್ದರೆ, 26-9-2026ರಂದು ಚುನಾವಣಾ ಆಯೋಗವು SIR ನಡೆಯದ ಅವಧಿಯಲ್ಲಿ ಹಳೆಯ ಫಾರ್ಮ್ 6ನ್ನೇ ಬಳಸಲಾಗುವುದು ಎಂದು ಏಕೆ ಸ್ಪಷ್ಟಪಡಿಸಿತು? ಇದರರ್ಥ SIR ಅವಧಿಗಾಗಿ ಫಾರ್ಮ್ 6ರಲ್ಲಿ ಬದಲಾವಣೆ ಮಾಡಲಾಗಿತ್ತು ಎಂದು ಚುನಾವಣಾ ಆಯೋಗವೇ ಒಪ್ಪಿಕೊಂಡಂತಾಗುವುದಿಲ್ಲವೇ? ಫಾರ್ಮ್ 6ರ ಈ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್ ನಿರ್ದಿಷ್ಟವಾಗಿ ಅನುಮೋದಿಸಿತೇ?" ಎಂದು ಪ್ರಶ್ನೆಗಳ ಸುರಿಮಳೆ ಹರಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries